

ಕುಕನೂರು, ಜುಲೈ 23: ಭಾರತ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR)-2026 ಹಾಗೂ ಮತದಾರರ ಜಾಗೃತಿ (SVEEP) ಕಾರ್ಯಕ್ರಮದ ಅಂಗವಾಗಿ ಜುಲೈ 24ರಂದು ಬೆಳಿಗ್ಗೆ 11 ಗಂಟೆಗೆ ಕುಕನೂರು ತಾಲೂಕಿನ ರಾಜೂರು ಗ್ರಾಮ ಪಂಚಾಯತಿಯಿಂದ ಮಸಬಹಂಚಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿವರೆಗೆ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ.
ತಾಲೂಕು ಪಂಚಾಯತ್ ಕುಕನೂರಿನ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರ ಸೂಚನೆಯಂತೆ ನಡೆಯುವ ಈ ರ‍್ಯಾಲಿಯು ರಾಜೂರು ಗ್ರಾಮ ಪಂಚಾಯತಿಯಿಂದ ಆರಂಭವಾಗಿ ಕುಕನೂರು ಪಟ್ಟಣ ಪಂಚಾಯತಿ ಮಾರ್ಗವಾಗಿ ಮಸಬಹಂಚಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮುಕ್ತಾಯಗೊಳ್ಳಲಿದೆ. ಮತದಾರರ ನೋಂದಣಿ ಹಾಗೂ ಮತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ರ‍್ಯಾಲಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಬಿಲ್ ಕಲೆಕ್ಟರ್‌ಗಳು, ಕಂಪ್ಯೂಟರ್ ಆಪರೇಟರ್‌ಗಳು, ವಿಆರ್‌ಡಬ್ಲ್ಯು ಸಿಬ್ಬಂದಿ, ಎನ್‌ಆರ್‌ಎಲ್‌ಎಂ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಆರೋಗ್ಯ, ಕೃಷಿ, ತೋಟಗಾರಿಕೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ತಮ್ಮ ಬೈಕ್‌ಗಳೊಂದಿಗೆ ಕಡ್ಡಾಯವಾಗಿ ಭಾಗವಹಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿ ಬೆಟ್ಟದಪ್ಪ ಮಾಳೆಕೊಪ್ಪ ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ರಾಜೂರು ಗ್ರಾಮ ಪಂಚಾಯತಿಯಿಂದ ಭಾಗವಹಿಸುವವರಿಗೆ ನೀರು ಹಾಗೂ ಚಹಾ ವ್ಯವಸ್ಥೆ, ಮಸಬಹಂಚಿನಾಳ ಗ್ರಾಮ ಪಂಚಾಯತಿಯಿಂದ ಉಪಹಾರದ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.
ವರದಿಗಾರರು: ಚನ್ನಯ್ಯ ಹಿರೇಮಠ, ಕುಕನೂರು




