

ಪರಮಾತ್ಮನ ಶ್ರೀರಕ್ಷೆಯ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಣೆ
ಕುಕನೂರು: ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಇಂದು ಸಹೋದರ–ಸಹೋದರಿಯರಿಗಾಗಿ ‘ಪರಮಾತ್ಮನ ಶ್ರೀರಕ್ಷೆಯ ರಕ್ಷಣಾ ರಾಖಿ’ ಕಟ್ಟುವ ಮೂಲಕ ರಕ್ಷಾಬಂಧನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಾಕುಮಾರಿ ಸುನಂದಕ್ಕನವರು ಎಲ್ಲಾ ಸಹೋದರ–ಸಹೋದರಿಯರಿಗೆ ರಾಖಿ ಕಟ್ಟುವ ಮೂಲಕ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುನಂದಕ್ಕನವರು, ರಕ್ಷಾಬಂಧನವು ಕೇವಲ ರಾಖಿ ಕಟ್ಟುವ ಹಬ್ಬವಲ್ಲ. ಇದು ಸಹೋದರ–ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ, ಪವಿತ್ರತೆ ಮತ್ತು ಪರಸ್ಪರ ರಕ್ಷಣೆಯ ಸಂಕೇತವಾಗಿದೆ. ಪರಮಾತ್ಮನ ಸ್ಮರಣೆ ಹಾಗೂ ಸತ್ಕರ್ಮಗಳ ಮೂಲಕ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಪವಿತ್ರತೆಯನ್ನು ಬೆಳೆಸಿಕೊಳ್ಳಬೇಕು. ಪರಮಾತ್ಮನ ಶ್ರೀರಕ್ಷೆ ಸದಾ ನಮ್ಮೊಂದಿಗೆ ಇರಲಿ ಎಂಬ ಸಂಕಲ್ಪದೊಂದಿಗೆ ರಾಖಿಯನ್ನು ಕಟ್ಟಲಾಗುತ್ತದೆ ಎಂದು ಹೇಳಿದರು.
ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯನು ತನ್ನೊಳಗಿನ ಶಾಂತಿ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳುವುದು ಅಗತ್ಯ. ಪರಸ್ಪರ ಪ್ರೀತಿ, ಗೌರವ, ಸಹೋದರತ್ವದ ಭಾವನೆಯಿಂದ ನಡೆದುಕೊಂಡಾಗ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲು ಸಾಧ್ಯ ಎಂದು ಅವರು ತಿಳಿಸಿದರು.
ನಂತರ ಎಲ್ಲಾ ಸಹೋದರ–ಸಹೋದರಿಯರಿಗೆ ರಾಖಿ ಕಟ್ಟುವ ಮೂಲಕ ಪರಮಾತ್ಮನ ಆಶೀರ್ವಾದ ಹಾಗೂ ಶ್ರೀರಕ್ಷೆ ಸದಾ ಇರಲಿ ಎಂದು ಹಾರೈಸಲಾಯಿತು.
ಕಾರ್ಯಕ್ರಮದಲ್ಲಿ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರ–ಸಹೋದರಿಯರು ಹಾಗೂ ಭಕ್ತರು ಭಾಗವಹಿಸಿದ್ದರು.
ಚನ್ನಯ್ಯ ಹಿರೇಮಠ. ಕುಕನೂರು.



