

ಕಟ್ಟಡಕ್ಕೆ ಕಾರ್ಮಿಕರ ನಿಸ್ವಾರ್ಥ ಸೇವೆ: ‘ನಾವೂ ಈ ಮಠ ಕಟ್ಟಿದೆವು’ ಎಂಬ ಹೆಮ್ಮೆ ಇರಲಿ — ಮಹಾದೇವ ಸ್ವಾಮೀಜಿ*
*ಕುಕನೂರು* , ಜು. 09: ಮಠದ ಕಟ್ಟಡವು ಕೇವಲ ಇಟ್ಟಿಗೆ, ಮರಳು ಹಾಗೂ ಸಿಮೆಂಟ್‌ನಿಂದ ನಿರ್ಮಾಣವಾಗುವುದಿಲ್ಲ. ಅದು ಗ್ರಾಮದ ಕಾರ್ಮಿಕರ ಬೆವರು, ಭಕ್ತಿ ಹಾಗೂ ಒಗ್ಗಟ್ಟಿನಿಂದ ನಿರ್ಮಾಣವಾಗುತ್ತದೆ ಎಂದು ಶ್ರೀ ಅನ್ನದಾನೀಶ್ವರ ಮಠದ ಪೂಜ್ಯ ಮಹಾದೇವ ಸ್ವಾಮೀಜಿ ಹೇಳಿದರು.
ತಳಕಲ್ ಗ್ರಾಮದ ಶ್ರೀ ಅನ್ನದಾನೀಶ್ವರ ಶಾಖಾಮಠದ ಕಟ್ಟಡ ಕಾಮಗಾರಿಗೆ ಉಡುಜಮ್ಮ ದೇವಿ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ಒಂದು ದಿನದ ಕೂಲಿಯನ್ನು ತ್ಯಾಗ ಮಾಡಿ ಉಚಿತವಾಗಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಶ್ರೀ ಅನ್ನದಾನೀಶ್ವರ ಮಠವು ತಳಕಲ್ ಗ್ರಾಮದ ಶ್ರದ್ಧಾ ಕೇಂದ್ರವಾಗಿದೆ. ಇಂತಹ ಪವಿತ್ರ ಕ್ಷೇತ್ರದ ನಿರ್ಮಾಣ ಕಾರ್ಯದಲ್ಲಿ ಉಡುಜಮ್ಮ ದೇವಿ ಕಟ್ಟಡ ಕಾರ್ಮಿಕ ಸಂಘದ ಸಹೋದರರು ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ತಮ್ಮ ಒಂದು ದಿನದ ಕೂಲಿಯನ್ನು ಬಿಟ್ಟು ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಇವರ ನಿಸ್ವಾರ್ಥ ಸೇವೆ ಮಠದ ಇತಿಹಾಸದಲ್ಲಿ ಸದಾ ನೆನಪಾಗಿ ಉಳಿಯಲಿದೆ ಎಂದರು.
ಗ್ರಾಮ ಪಂಚಾಯಿತಿ ಸಿಬ್ಬಂದಿ ಕಾಜಸಾಬ್ ಹೊರಪೇಟೆ ಮಾತನಾಡಿ, ಬಿಸಿಲು, ಧೂಳು ಎನ್ನದೆ ದಿನವಿಡೀ ದುಡಿಯುವ ಕಟ್ಟಡ ಕಾರ್ಮಿಕರಿಗೆ ಅಂದಿನ ಕೂಲಿಯೇ ಜೀವನಾಧಾರ. ಅಂತಹ ಕೂಲಿಯನ್ನು ತ್ಯಾಗ ಮಾಡಿ, ‘ದೇವರ ಕೆಲಸ ದೇವರೇ ಮಾಡಿಸುತ್ತಾನೆ’ ಎಂಬ ನಂಬಿಕೆಯಿಂದ ಮಠದ ನಿರ್ಮಾಣ ಕಾರ್ಯಕ್ಕೆ ಸೇವೆ ಸಲ್ಲಿಸಿರುವುದು ದೊಡ್ಡ ಕಾರ್ಯವಾಗಿದೆ ಎಂದರು.
ಹಣ ಇಂದು ಇರುತ್ತದೆ, ನಾಳೆ ಹೋಗುತ್ತದೆ. ಆದರೆ ಊರು, ಮಠ ಹಾಗೂ ಸಮಾಜಕ್ಕಾಗಿ ಮಾಡಿದ ಸೇವೆ ಮಾತ್ರ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಇಂತಹ ಸೇವಾ ಮನೋಭಾವದ ಕಾರ್ಮಿಕರನ್ನು ಹೊಂದಿರುವುದು ತಳಕಲ್ ಗ್ರಾಮದ ಪುಣ್ಯ ಎಂದು ಹೇಳಿದರು.
ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷ ಮಂಜಪ್ಪ ಚಿಲವಾಡಿಗಿ ಮಾತನಾಡಿ, ಪ್ರತಿಯೊಬ್ಬ ಕಾರ್ಮಿಕನ ಮುಖದಲ್ಲೂ ‘ನಾವೂ ಈ ಮಠ ಕಟ್ಟಿದೆವು’ ಎಂಬ ಹೆಮ್ಮೆ ಇದೆ. ಮುಂದೆ ಮಠದ ಗೋಪುರ ಎಷ್ಟೇ ಎತ್ತರಕ್ಕೆ ಬೆಳೆದರೂ, ಅದರ ಅಡಿಪಾಯದಲ್ಲಿ ಕಾರ್ಮಿಕರ ನಿಸ್ವಾರ್ಥ ಸೇವೆಯ ಇತಿಹಾಸ ಅಚ್ಚಳಿಯದೆ ಉಳಿಯುತ್ತದೆ. ನಮಗೂ ಸೇವೆ ಸಲ್ಲಿಸಲು ಅವಕಾಶ ನೀಡಿದ ಪೂಜ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯರಾದ ರುದ್ರಪ್ಪ, ನಿಂಗಪ್ಪ ನಿಟ್ಟಾಲಿ, ಶರಣಪ್ಪ ಬಂಗಾರಿ, ಸೋಮಪ್ಪ ಕರ್ಜಗಿ ಸೇರಿದಂತೆ ಉಡುಜಮ್ಮ ದೇವಿ ಕಟ್ಟಡ ಕಾರ್ಮಿಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ: ಚನ್ನಯ್ಯ ಹಿರೇಮಠ, ಕುಕನೂರು



