Uncategorized

ರಾಜೂರ ಮಠದ ಉನ್ನತಿಗೆ ಭಕ್ತರ ಸಹಕಾರ ಅಗತ್ಯ: ಪೂಜ್ಯ ಬಸವಲಿಂಗ ಶಿವಾಚಾರ್ಯ ಶ್ರೀಗಳು

ಲಿಂಗೈಕ್ಯ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ಆರನೇ ಪುಣ್ಯಸ್ಮರಣೆ ಹಾಗೂ 74ನೇ ಶಿವಾನುಭವ ಧರ್ಮಸಭೆ

ರಾಜೂರ ಮಠದ ಉನ್ನತಿಗೆ ಭಕ್ತರ ಸಹಕಾರ ಅಗತ್ಯ: ಪೂಜ್ಯ ಬಸವಲಿಂಗ ಶಿವಾಚಾರ್ಯ ಶ್ರೀಗಳು

ಲಿಂಗೈಕ್ಯ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ಆರನೇ ಪುಣ್ಯಸ್ಮರಣೆ ಹಾಗೂ 74ನೇ ಶಿವಾನುಭವ ಧರ್ಮಸಭೆ


ಕುಕನೂರು: ತಾಲೂಕಿನ ರಾಜೂರು ಗ್ರಾಮದ ಶ್ರೀ ಶರಣಬಸವೇಶ್ವರ ಬೃಹನ್ಮಠ ಹಾಗೂ ಪಂಚಾಕ್ಷರಿ ಶಿವಾಚಾರ್ಯರ ಮಠದ ಉನ್ನತಿ ಮತ್ತು ಬೆಳವಣಿಗೆಗೆ ಮಠದ ಭಕ್ತರು ಹಾಗೂ ಗ್ರಾಮದ ಸಮಸ್ತ ಭಕ್ತರ ಸಹಕಾರ ಅತ್ಯಗತ್ಯ ಎಂದು ಯಲಬುರ್ಗಾದ ಪೂಜ್ಯ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು.

ರಾಜೂರು ಗ್ರಾಮದ ಶ್ರೀ ಶರಣಬಸವೇಶ್ವರ ಸುಕ್ಷೇತ್ರ ಬೃಹನ್ಮಠದಲ್ಲಿ ಮಹಾನವಮಿ ಅಮಾವಾಸ್ಯೆ ನಿಮಿತ್ತವಾಗಿ ‘ಶ್ರೀ ಪಂಚಾಕ್ಷರ ಬೆಳಕು’ ಕಾರ್ಯಕ್ರಮದಡಿ ಲಿಂಗೈಕ್ಯ ಪರಮಪೂಜ್ಯ ಘನಚಕ್ರವರ್ತಿ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ಆರನೇ ಪುಣ್ಯಸ್ಮರಣೆ ಹಾಗೂ 74ನೇ ಶಿವಾನುಭವ ಧರ್ಮಸಭೆ ಮತ್ತು ನುಡಿನಮನ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.

ಕಾರ್ಯಕ್ರಮದ ಅಂಗವಾಗಿ ಪ್ರಾತಃಕಾಲದಲ್ಲಿ ಲಿಂಗೈಕ್ಯ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ರುದ್ರಾಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳ ಪೌರೋಹಿತ್ಯವನ್ನು ರೇವಣಸಿದ್ದಯ್ಯ ಶಾಸ್ತ್ರಿಗಳು ಚರಂತಿಮಠ ಮತ್ತು ಬಸವಣ್ಣಯ್ಯ ಶಾಸ್ತ್ರಿಗಳು ವಹಿಸಿದ್ದರು.

ಬೆಳಿಗ್ಗೆ 10.30ಕ್ಕೆ ನಡೆದ ಧರ್ಮಸಭೆಯ ದಿವ್ಯ ಸಾನ್ನಿಧ್ಯವನ್ನು ಯಲಬುರ್ಗಾದ ಪೂಜ್ಯ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಜಿಗೇರಿಯ ಪೂಜ್ಯ ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ರಾಜೂರು ಬೃಹನ್ಮಠದ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಕಪ್ಪತಗುಡ್ಡದ ವೀರಯ್ಯ ಸ್ವಾಮಿಗಳು ವಹಿಸಿದ್ದರು.

ಧರ್ಮದ ತತ್ವಗಳನ್ನು ಸಾರುವ ಸನ್ಮಾರ್ಗದರ್ಶಿ ಕ್ಯಾಲೆಂಡರ್ ಬಿಡುಗಡೆ

ಕುಕನೂರು ಪಟ್ಟಣದ ಹಿರಿಯ ಜಂಗಮಮೂರ್ತಿ ವೇದಮೂರ್ತಿ ಸಿದ್ದಲಿಂಗಯ್ಯ ಹಿರೇಮಠ ಅವರು ರಚಿಸಿದ ವೀರಶೈವ ಲಿಂಗಾಯತ ಧರ್ಮದ ಅಷ್ಟಾವರಣ, ಪಂಚಾಚಾರ್ಯರು, ಷಟಸ್ಥಲ ಹಾಗೂ ವೀರಶೈವ ಲಿಂಗಾಯತ ಕೋಡು ಸಂಖ್ಯೆ 8-5-6 ಸೇರಿದಂತೆ ಧರ್ಮದ ಪ್ರಮುಖ ತತ್ವಗಳು ಮತ್ತು ಸಿದ್ಧಾಂತಗಳನ್ನು ಒಳಗೊಂಡ ಸನ್ಮಾರ್ಗದರ್ಶಿ ಕ್ಯಾಲೆಂಡರ್ ಅನ್ನು ಪೂಜ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ವೀರಶೈವ ಲಿಂಗಾಯತ ಧರ್ಮದ ಆಚಾರ-ವಿಚಾರಗಳು, ಧಾರ್ಮಿಕ ಪರಂಪರೆ ಹಾಗೂ ತಾತ್ವಿಕ ವಿಷಯಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ಈ ಕ್ಯಾಲೆಂಡರ್ ರಚಿಸಲಾಗಿದ್ದು, ಧರ್ಮದ ತತ್ವಗಳ ಕುರಿತು ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ ಎಂಬ ಆಶಯ ವ್ಯಕ್ತವಾಯಿತು.

ಗುರುಗಳ ಸ್ಮರಣೆ, ಮಠದ ಬೆಳವಣಿಗೆಗೆ ಸಂಕಲ್ಪ

ಕಾರ್ಯಕ್ರಮದಲ್ಲಿ ಪೂಜ್ಯ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗೈಕ್ಯ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ಧಾರ್ಮಿಕ ಸೇವೆ ಹಾಗೂ ಆಧ್ಯಾತ್ಮಿಕ ಕೊಡುಗೆಯನ್ನು ಸ್ಮರಿಸಿದರು.

ರಾಜೂರು ಮಠವು ಭಕ್ತರಿಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಪವಿತ್ರ ಕ್ಷೇತ್ರವಾಗಿದ್ದು, ಮಠದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಭಕ್ತರೆಲ್ಲರ ಮೇಲಿದೆ ಎಂಬ ಆಶಯ ವ್ಯಕ್ತವಾಯಿತು.

ರಾಜೂರು ಬೃಹನ್ಮಠದ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮಠದ ಧಾರ್ಮಿಕ ಪರಂಪರೆ, ಗುರುಗಳ ಆದರ್ಶಗಳು ಹಾಗೂ ಭಕ್ತರ ಸಹಕಾರದ ಮಹತ್ವವನ್ನು ತಿಳಿಸಿದರು.

ಗುರುಗಳ ಪುಣ್ಯಸ್ಮರಣೆ ಕೇವಲ ಆಚರಣೆಗೆ ಸೀಮಿತವಾಗದೆ, ಅವರು ತೋರಿದ ಧಾರ್ಮಿಕ ಮಾರ್ಗದಲ್ಲಿ ನಡೆಯಲು ಪ್ರೇರಣೆಯಾಗಬೇಕು ಎಂಬ ಸಂದೇಶ ಕಾರ್ಯಕ್ರಮದ ಮೂಲಕ ಮೂಡಿಬಂತು.

ಮಹಾತ್ಮರ ಸ್ಮರಣೆ ಬದುಕಿಗೆ ಸನ್ಮಾರ್ಗದ ದಾರಿ

ಶಿವಾನುಭವ ಧರ್ಮಸಭೆಯಲ್ಲಿ ‘ಮಹಾತ್ಮರಂ ನೆನೆಯುವುದೇ ಘನಮುಕ್ತಿ ಪದಂ ಶಿವಾದವ’ ಎಂಬ ವಿಷಯದ ಕುರಿತು ಲಿಂಗೈಕ್ಯ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ಪ್ರಕಾಶಯ್ಯ ಶಾಸ್ತ್ರಿಗಳು ಹಿರೇಮಠ ವಿಶೇಷ ಉಪನ್ಯಾಸ ನೀಡಿದರು.

ಮಹಾತ್ಮರ ಆದರ್ಶಗಳು, ಅವರ ಜೀವನದ ಮೌಲ್ಯಗಳು ಹಾಗೂ ಧಾರ್ಮಿಕ ಚಿಂತನೆಗಳನ್ನು ಸ್ಮರಿಸುವುದರಿಂದ ಮನುಷ್ಯನ ಬದುಕಿನಲ್ಲಿ ಸದ್ವಿಚಾರಗಳು ಬೆಳೆಯುತ್ತವೆ. ಮಹಾತ್ಮರು ತೋರಿದ ಸನ್ಮಾರ್ಗದಲ್ಲಿ ನಡೆಯುವ ಮೂಲಕ ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಆಶಯವನ್ನು ಉಪನ್ಯಾಸದ ಮೂಲಕ ತಿಳಿಸಲಾಯಿತು.

ನಂತರ ಮಧ್ಯಾಹ್ನ 1:30 ಗಂಟೆಗೆ ಆಗಮಿಸಿದ ಎಲ್ಲಾ ಸಕಲ ಸದ್ಭಕ್ತಾದಿಗಳಿಗೂ ಮಹಾಪ್ರಸಾದ ನೆರವೇರಿಸಲಾಯಿತು

  • ಕಾರ್ಯಕ್ರಮದಲ್ಲಿ ರಾಜೂರು ಗ್ರಾಮದ ಗುರುಹಿರಿಯರು, ಮಠದ ಸಮಸ್ತ ಆಡಳಿತ ಮಂಡಳಿಯ ಸದಸ್ಯರು, ಶಿಷ್ಯವೃಂದದವರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

ವರದಿ: ಚನ್ನಯ್ಯ ಹಿರೇಮಠ, ಕುಕನೂರು

Related Articles

Leave a Reply

Your email address will not be published. Required fields are marked *

Back to top button
error: Content is protected !!