Uncategorized

ಕಬ್ಬು ಬೆಂಕಿಗಾಹುತಿ: ರೈತನಿಗೆ ಸೂಕ್ತ ಪರಿಹಾರ ನೀಡಲು ಜೆಡಿಎಸ್‌ನಿಂದ ಜಿಲ್ಲಾಧಿಕಾರಿಗೆ ಮನವಿ

ಚನ್ನಪ್ಪನಹಳ್ಳಿಯಲ್ಲಿ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದ 4 ಎಕರೆ ಕಬ್ಬು ಬೆಳೆ ನಾಶ; ಅಂದಾಜು ₹6.50 ಲಕ್ಷಕ್ಕೂ ಅಧಿಕ ನಷ್ಟ

ಕಬ್ಬು ಬೆಂಕಿಗಾಹುತಿ: ರೈತನಿಗೆ ಸೂಕ್ತ ಪರಿಹಾರ ನೀಡಲು ಜೆಡಿಎಸ್‌ನಿಂದ ಜಿಲ್ಲಾಧಿಕಾರಿಗೆ ಮನವಿ

ಚನ್ನಪ್ಪನಹಳ್ಳಿಯಲ್ಲಿ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದ 4 ಎಕರೆ ಕಬ್ಬು ಬೆಳೆ ನಾಶ; ಅಂದಾಜು ₹6.50 ಲಕ್ಷಕ್ಕೂ ಅಧಿಕ ನಷ್ಟ

ಕುಕನೂರು, 12:- ತಾಲೂಕಿನ ಚನ್ನಪ್ಪನಹಳ್ಳಿ ಗ್ರಾಮದ ಸರ್ವೆ ನಂ. 70ರಲ್ಲಿ ವಿದ್ಯುತ್ ಮೋಟಾರ್‌ನ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ನಾಲ್ಕು ಎಕರೆ ಕಬ್ಬು ಬೆಳೆ ನಾಶವಾಗಿದ್ದು, ನಷ್ಟ ಅನುಭವಿಸಿದ ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಎಸ್. ಕೋನನಗೌಡ್ರ ಅವರು ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್ ಅವರಿಗೆ ಮನವಿ ಸಲ್ಲಿಸಿದರು.

ಚನ್ನಪ್ಪನಹಳ್ಳಿ ಗ್ರಾಮದ ಗಿರೀಶ್ ತಂದೆ ಮಾಧವರಾವ್ ದೇಸಾಯಿ ಅವರಿಗೆ ಸೇರಿದ ಎಂಟು ಎಕರೆ ಕಬ್ಬು ಬೆಳೆಯಲ್ಲಿ ನಾಲ್ಕು ಎಕರೆ ಪ್ರದೇಶದ ಕಬ್ಬು ಬೆಂಕಿಗಾಹುತಿಯಾಗಿದೆ. ಸುಮಾರು 250 ಟನ್ ಕಬ್ಬು ನಾಶವಾಗಿದ್ದು, ಇದರಿಂದ ಅಂದಾಜು ₹6.50 ಲಕ್ಷಕ್ಕೂ ಅಧಿಕ ಆರ್ಥಿಕ ನಷ್ಟ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರಿಗೆ ಇಂತಹ ಅನಿರೀಕ್ಷಿತ ಘಟನೆಗಳು ದೊಡ್ಡ ಆರ್ಥಿಕ ಸಂಕಷ್ಟವನ್ನು ತಂದೊಡ್ಡುತ್ತವೆ. ಈಗಾಗಲೇ ಬರದಂತಹ ಸಮಸ್ಯೆಗಳಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು, ಕಷ್ಟಪಟ್ಟು ಬೆಳೆದ ಕಬ್ಬು ಬೆಂಕಿಗೆ ಆಹುತಿಯಾಗಿರುವುದರಿಂದ ರೈತ ಕುಟುಂಬಕ್ಕೆ ತೀವ್ರ ತೊಂದರೆಯಾಗಿದೆ.

ಆದ್ದರಿಂದ ಜಿಲ್ಲಾಡಳಿತವು ಈ ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಿ, ಬೆಳೆ ನಷ್ಟದ ಪ್ರಮಾಣವನ್ನು ವೈಜ್ಞಾನಿಕವಾಗಿ ಅಂದಾಜು ಮಾಡಬೇಕು. ನಷ್ಟ ಅನುಭವಿಸಿದ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ಮೂಲಕ ರೈತನ ನೆರವಿಗೆ ಧಾವಿಸಬೇಕು ಎಂದು ಮಲ್ಲನಗೌಡ ಎಸ್. ಕೋನನಗೌಡ್ರ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಬಸವರಾಜ ಬೊಮ್ಮನಾಳ, ಮರಿಸ್ವಾಮಿ ಕೆ. ಮಣ್ಣಿನವರ್, ಶರಣಪ್ಪ ಬಳೆಗಾರ ಹಾಗೂ ಶರಣಪ್ಪ ಗೊಂದಿ ಸೇರಿದಂತೆ ಇತರರು ಉಪಸ್ಥಿತರಿದ್ದು, ರೈತನಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದರು.

ಪ್ರತಿಯನ್ನು: ಯಲಬುರ್ಗಾ ಶಾಸಕ ಹಾಗೂ ಸಚಿವ ಬಸವರಾಜ ರಾಯರೆಡ್ಡಿ ಮತ್ತು ಕುಕನೂರು ತಹಶೀಲ್ದಾರರಿಗೆ ಸಲ್ಲಿಸಲಾಗಿದೆ.

 

ವರದಿ ಚನ್ನಯ್ಯ ಹಿರೇಮಠ ಕುಕನೂರು

Related Articles

Leave a Reply

Your email address will not be published. Required fields are marked *

Back to top button
error: Content is protected !!