Uncategorized

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ಕುಕನೂರಿನಲ್ಲಿ ಜಾಗೃತಿ ಬೈಕ್ ರ್ಯಾಲಿಗೆ ಚಾಲನೆ

 


ಕುಕನೂರು, ಜುಲೈ 24: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR–2026) ಅಂಗವಾಗಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶುಕ್ರವಾರ ರಾಜೂರ ಗ್ರಾಮ ಪಂಚಾಯತಿಯಿಂದ ಕುಕನೂರ ಮಾರ್ಗವಾಗಿ ಮಸಬಹಂಚಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿವರೆಗೆ ಬೈಕ್ ರ್ಯಾಲಿ ಆಯೋಜಿಸಲಾಯಿತು.

ರ್ಯಾಲಿಗೆ ತಹಶೀಲ್ದಾರ್ ಬಸವರಾಜ ಬೆಣ್ಣೇಶಿರೂರ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬೆಟದೇಶ್ ಮಾಳೆಕೊಪ್ಪ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಬಸವರಾಜ ಬೆಣ್ಣೇಶಿರೂರ, 18 ವರ್ಷ ಪೂರ್ಣಗೊಂಡ ಯಾವುದೇ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ವಿಳಾಸ ತಿದ್ದುಪಡಿ, ಇತ್ತೀಚಿನ ಭಾವಚಿತ್ರ ಸೇರಿಸುವುದು ಸೇರಿದಂತೆ ಅಗತ್ಯ ತಿದ್ದುಪಡಿಗಳನ್ನು ಜುಲೈ 29ರವರೆಗೆ ಮಾಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು. ಬಿಎಲ್‌ಒಗಳು (BLO) ಮನೆಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ಸರಿಯಾದ ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದರು.

ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ವಿಶೇಷ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಗ್ರಾಮೀಣ ಪ್ರದೇಶದ ಮತದಾರರು ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ರಾಜೂರ ಗ್ರಾಮ ಪಂಚಾಯತಿಯಿಂದ ಆರಂಭವಾದ ಬೈಕ್ ರ್ಯಾಲಿ ಕುಕನೂರ ಮಾರ್ಗವಾಗಿ ಮಸಬಹಂಚಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರುತೇಶ್ವರ ದೇವಸ್ಥಾನದ ಸಮೀಪ ಮುಕ್ತಾಯಗೊಂಡಿತು.

ರ್ಯಾಲಿಯಲ್ಲಿ ಭಾಗವಹಿಸಿದ್ದ ಸಿಬ್ಬಂದಿ ಮತ್ತು ಬೈಕ್ ಸವಾರರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ಜಾಗೃತಿ ಫಲಕಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಎಸ್‌ಐಆರ್ (SIR) ಅಭಿಯಾನಕ್ಕೆ ಸಂಬಂಧಿಸಿದ ಜಾಗೃತಿ ಜಿಂಗಲ್ಸ್‌ಗಳನ್ನು ಮೈಕ್ ಮೂಲಕ ಪ್ರಸಾರ ಮಾಡುತ್ತ ಮೂರು ಹೋಬಳಿಗಳ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್, ತಾಲೂಕು ಯೋಜನಾಧಿಕಾರಿ ಆನಂದ ಗರೂರ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ, ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ವೆಂಕಟೇಶ್ ದೇಶಪಾಂಡೆ, ವಿವಿಧ ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಎಂಆರ್‌ಡಬ್ಲ್ಯು (MRW), ವಿಆರ್‌ಡಬ್ಲ್ಯು (VRW), ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ತಹಶೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು, ನರೇಗಾ ಹಾಗೂ ಎನ್‌ಆರ್‌ಎಲ್‌ಎಂ ಸಿಬ್ಬಂದಿ, ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್‌ಗಳು, ಬಿಲ್ ಕಲೆಕ್ಟರ್‌ಗಳು, ಗ್ರಾಮ ಕಾಯಕ ಮಿತ್ರರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ವರದಿಗಾರರು: ಚನ್ನಯ್ಯ ಹಿರೇಮಠ, ಕುಕನೂರು

Related Articles

Leave a Reply

Your email address will not be published. Required fields are marked *

Back to top button
error: Content is protected !!