
*ಕುಕನೂರು* : ತಾಲೂಕಿನ ಭಾನಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಾನಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಗುರುವಾರ “ಬೇಟಿ ಬಚಾವೋ – ಬೇಟಿ ಪಡಾವೋ” ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಮೇಲ್ವಿಚಾರಕಿಯರಾದ ಜಯಲಕ್ಷ್ಮೀ ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, “ಬೇಟಿ ಬಚಾವೋ – ಬೇಟಿ ಪಡಾವೋ” ಅಭಿಯಾನವು ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಗೌರವ, ಶಿಕ್ಷಣ ಹಾಗೂ ಅವಕಾಶಗಳನ್ನು ಒದಗಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಲಿಂಗ ತಾರತಮ್ಯವನ್ನು ನಿರ್ಮೂಲನೆ ಮಾಡಿ, ಪ್ರತಿಯೊಬ್ಬ ಹುಡುಗಿಯ ಶಿಕ್ಷಣದ ಹಕ್ಕು ಮತ್ತು ಸಮಾನತೆಯನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಪ್ರತಿಯೊಬ್ಬ ವಿದ್ಯಾರ್ಥಿಯು ಈ ಅಭಿಯಾನದ ಉದ್ದೇಶವನ್ನು ಅರಿತು ಅದರ ಸಂದೇಶವನ್ನು ಸಮಾಜಕ್ಕೆ ತಲುಪಿಸಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪ್ರತಿಭಾ ಕಾಶೀಮಠ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಅವರು ಹೆಣ್ಣು ಮಕ್ಕಳ ಶಿಕ್ಷಣ, ಬಾಲ್ಯವಿವಾಹ ತಡೆ, ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಸುರಕ್ಷತೆ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಡಾ. ಯಲ್ಲಪ್ಪ ಬಡಿಗೇರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಖ್ಯೋಪಾಧ್ಯಾಯ ನಾಗಪ್ಪ ಅಗಸಿಮುಂದಿನ, ರಮೇಶ್ ತಿಮ್ಮಾರೆಡ್ಡಿ ಪಿಡಿಓ, ವಹಿಸಿದ್ದರು.
ಅತಿಥಿಗಳಾಗಿ ಆನಂದಕುಮಾರ್ ಕನ್ನೇರ, ಅನ್ನಪೂರ್ಣ ಕ್ಯಾದಿಗುಂಪಿ ಹಾಗೂ ಪ್ರತಿಭಾ ಸಿಸ್ಟರ್ ಉಪಸ್ಥಿತರಿದ್ದರು.
ಪ್ರಿಯಾಂಕಾ ತಂಡ ಪ್ರಾರ್ಥನೆ ನೆರವೇರಿಸಿತು. ಸಹ ಶಿಕ್ಷಕರಾದ ಸತೀಶ್ ಕಟ್ಟೀಮನಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ವಿಸ್ತಾರ ಸಂಸ್ಥೆಯ ಆರತಿ ಹಾಗೂ ಮೀನಾಕ್ಷಿ, ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವರದಿಗಾರರು: ಚನ್ನಯ್ಯ ಹಿರೇಮಠ, ಕುಕನೂರು




