

*ಮಸಬಹಂಚಿನಾಳದ ವಸತಿರಹಿತ ಕುಟುಂಬಗಳಿಗೆ ಹಕ್ಕುಪತ್ರ: ಸಚಿವ ಬಸವರಾಜ ರಾಯರೆಡ್ಡಿ*
*ಸ್ವಂತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಮಹತ್ವದ ಹೆಜ್ಜೆ*
ಕುಕನೂರು: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಸಬಹಂಚಿನಾಳ ಗ್ರಾಮದ ನಿವೇಶನ ರಹಿತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸುವ ಉದ್ದೇಶದಿಂದ ವಸತಿ ಹಕ್ಕುಪತ್ರಗಳನ್ನು ವಿತರಿಸಲಾಯಿತು.
80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು.
ನಂತರ ಮಾತನಾಡಿದ ಸಚಿವ ಬಸವರಾಜ ರಾಯರೆಡ್ಡಿ, ಗ್ರಾಮೀಣ ಭಾಗದ ಬಡ ಹಾಗೂ ವಸತಿರಹಿತ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಮತ್ತು ಪ್ರತಿಯೊಂದು ಕುಟುಂಬಕ್ಕೂ ಸ್ವಂತ ಸೂರು ಕಲ್ಪಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಯಲಬುರ್ಗಾ ಕ್ಷೇತ್ರದಲ್ಲಿ ಮೂಲಸೌಕರ್ಯ, ಶಿಕ್ಷಣ ಹಾಗೂ ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ನಿರಂತರವಾಗಿ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಹಕ್ಕುಪತ್ರ ದೊರೆತಿರುವುದರಿಂದ ನಿವೇಶನದ ಮೇಲಿನ ಮಾಲೀಕತ್ವ ಕಾನೂನುಬದ್ಧವಾಗಿ ಸ್ಥಿರವಾಗಲಿದೆ. ಅಲ್ಲದೆ, ಹಕ್ಕುಪತ್ರವನ್ನು ಆಧಾರವಾಗಿ ಬಳಸಿಕೊಂಡು ಮನೆ ನಿರ್ಮಾಣಕ್ಕಾಗಿ ಬ್ಯಾಂಕ್ ಸಾಲ ಪಡೆಯಲು ಹಾಗೂ ಬಸವ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ (PMAY), ಅಂಬೇಡ್ಕರ್ ನಿವಾಸ್ ಯೋಜನೆ ಸೇರಿದಂತೆ ವಿವಿಧ ಸರ್ಕಾರಿ ವಸತಿ ಯೋಜನೆಗಳ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಮಸಬಹಂಚಿನಾಳ ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಹಕ್ಕುಪತ್ರ ವಿತರಿಸಿರುವುದು ಮಹತ್ವದ ಹೆಜ್ಜೆಯಾಗಿದ್ದು, ವಸತಿರಹಿತ ಕುಟುಂಬಗಳ ಸ್ವಂತ ಸೂರಿನ ಕನಸನ್ನು ನನಸು ಮಾಡುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಕುಕನೂರು ತಹಶೀಲ್ದಾರ ಬಸವರಾಜ ಬೆಣ್ಣೆ ಶಿರೂರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬೆಟದಪ್ಪ ಮಾಳೆಕೊಪ್ಪ, ಮಸಬಹಂಚಿನಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೈಜನಾಥ ಸಾರಂಗಮಠ, ತಾಲೂಕು ಪಂಚಾಯಿತಿ ವಸತಿ ಯೋಜನೆ ಕೇಸ್ ವರ್ಕರ್ ಬಸಲಿಂಗಪ್ಪ ಹಂಚಿನಾಳ, ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು, ಹಕ್ಕುಪತ್ರ ಪಡೆದ ಫಲಾನುಭವಿಗಳು ಹಾಗೂ ಮಸಬಹಂಚಿನಾಳ ಗ್ರಾಮದ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ಚನ್ನಯ್ಯ ಹಿರೇಮಠ. ಕುಕನೂರು



