Uncategorized

*ಆದರ್ಶ ರಾಜಕಾರಣದ ಸ್ಮರಣೆ ಇಂದಿನ ಪೀಳಿಗೆಗೆ ಅಗತ್ಯ: ಸತ್ಯನಾರಾಯಣ ಹರಪನಹಳ್ಳಿ*

*ಸ್ವಾತಂತ್ರ್ಯ ಸೇನಾನಿ ವೀರಭದ್ರಪ್ಪ ಶಿರೂರು ಪ್ರತಿಮೆ ಅನಾವರಣ*

*ಸ್ವಾತಂತ್ರ್ಯ ಸೇನಾನಿ ವೀರಭದ್ರಪ್ಪ ಶಿರೂರು ಪ್ರತಿಮೆ ಅನಾವರಣ*

*ಆದರ್ಶ ರಾಜಕಾರಣದ ಸ್ಮರಣೆ ಇಂದಿನ ಪೀಳಿಗೆಗೆ ಅಗತ್ಯ: ಸತ್ಯನಾರಾಯಣ ಹರಪನಹಳ್ಳಿ*

ಕುಕನೂರು: ಕಡು ಬಡತನದ ನಡುವೆಯೂ ಜನರ ವಿಶ್ವಾಸ ಗಳಿಸಿ ಶಾಸಕರಾಗಿ, ಸರಳತೆ, ಪ್ರಾಮಾಣಿಕತೆ ಹಾಗೂ ಆದರ್ಶ ರಾಜಕಾರಣಕ್ಕೆ ಮಾದರಿಯಾಗಿದ್ದ ಮಾಜಿ ಶಾಸಕ ಹಾಗೂ ಸ್ವಾತಂತ್ರ್ಯ ಸೇನಾನಿ ದಿ. ವೀರಭದ್ರಪ್ಪ ಶಿರೂರು ಅವರ ಜೀವನ ಮತ್ತು ಹೋರಾಟವನ್ನು ಇಂದಿನ ಪೀಳಿಗೆ ಸ್ಮರಿಸುವ ಅಗತ್ಯವಿದೆ ಎಂದು ಮುಖಂಡ ಸತ್ಯನಾರಾಯಣ ಹರಪನಹಳ್ಳಿ ಹೇಳಿದರು.

ಪಟ್ಟಣದ ತಾಲೂಕು ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ದಿ. ವೀರಭದ್ರಪ್ಪ ಶಿರೂರು ಅವರ ಪ್ರತಿಮೆ ಅನಾವರಣ ಹಾಗೂ ಅವರ ಜೀವನ ಕುರಿತ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೀರಭದ್ರಪ್ಪ ಶಿರೂರು ಅವರು ಅತ್ಯಂತ ಸರಳ ಹಿನ್ನೆಲೆಯಿಂದ ಬಂದಿದ್ದರೂ ಜನರ ಮನ ಗೆದ್ದು ಶಾಸಕರಾದ ಮಹಾನ್ ವ್ಯಕ್ತಿಯಾಗಿದ್ದರು. ಅಧಿಕಾರ ಹಾಗೂ ರಾಜಕೀಯ ಸ್ಥಾನಮಾನಕ್ಕಿಂತ ಜನಸೇವೆ ಮತ್ತು ತತ್ವ-ಸಿದ್ಧಾಂತಗಳಿಗೆ ಹೆಚ್ಚಿನ ಮಹತ್ವ ನೀಡಿದ್ದರು. ಅವರ ಕುಟುಂಬವೂ ಇಂದಿಗೂ ಯಾವುದೇ ಅಹಂಕಾರವಿಲ್ಲದೆ ಸರಳ ಜೀವನ ನಡೆಸಿಕೊಂಡು ಬರುತ್ತಿರುವುದು ಅವರ ವ್ಯಕ್ತಿತ್ವದ ಪ್ರತಿಬಿಂಬವಾಗಿದೆ ಎಂದರು.

ಇಂತಹ ಮಹನೀಯರ ಪ್ರತಿಮೆ ಅನಾವರಣ ಮಾಡುವುದರಿಂದ ಅವರ ನೆನಪನ್ನು ಶಾಶ್ವತಗೊಳಿಸುವುದರ ಜೊತೆಗೆ, ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗುತ್ತದೆ. ಇಂದಿನ ಯುವಜನರು ವೀರಭದ್ರಪ್ಪ ಶಿರೂರು ಅವರ ಜೀವನ, ಹೋರಾಟ ಹಾಗೂ ಸಮಾಜಮುಖಿ ಚಿಂತನೆಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

*ತತ್ವ-ಸಿದ್ಧಾಂತಗಳಿಗೆ ಎಂದಿಗೂ ರಾಜಿಯಾಗಲಿಲ್ಲ*

ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ದಿ. ವೀರಭದ್ರಪ್ಪ ಶಿರೂರು ಅವರ ಪುತ್ರ ಪ್ರೊ. ಬಸವರಾಜ್ ಶಿರೂರು ಮಾತನಾಡಿ, ತಮ್ಮ ತಂದೆಯವರು ರಾಜಕೀಯ ಜೀವನದಲ್ಲಿ ಸಾಕಷ್ಟು ನೋವು-ನಲಿವುಗಳನ್ನು ಅನುಭವಿಸಿ ಶಾಸಕರಾದವರು. ರಾಜಕೀಯ ವಿರೋಧಿಗಳಿಂದ ಹಲವು ರೀತಿಯ ಕಿರುಕುಳ ಹಾಗೂ ಸವಾಲುಗಳನ್ನು ಎದುರಿಸಿದರೂ ತಮ್ಮ ತತ್ವ-ಸಿದ್ಧಾಂತಗಳನ್ನು ಎಂದಿಗೂ ಬಿಟ್ಟುಕೊಡಲಿಲ್ಲ ಎಂದು ತಂದೆಯವರನ್ನು ಸ್ಮರಿಸಿದರು.

ಒಂದು ಸಂದರ್ಭದಲ್ಲಿ ಶಾಸಕ ಸ್ಥಾನಕ್ಕೆ ಟಿಕೆಟ್ ತಪ್ಪಿದರೂ ಎದೆಗುಂದದೆ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ನಂತರ ಮತ್ತೆ ಚುನಾವಣೆಯಲ್ಲಿ ಗೆದ್ದು ಕ್ಷೇತ್ರದ ಜನರಿಗೆ ಉತ್ತಮ ಸೇವೆ ಸಲ್ಲಿಸಿದ ತೃಪ್ತಿ ತಮ್ಮ ತಂದೆಯವರಿಗಿತ್ತು ಎಂದರು.
ಇಂದಿನ ರಾಜಕೀಯ ವ್ಯವಸ್ಥೆ ಹಾಗೂ ವೀರಭದ್ರಪ್ಪ ಶಿರೂರು ಅವರ ಕಾಲದ ಆದರ್ಶ ರಾಜಕಾರಣದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ರಾಜಕೀಯ ಕ್ಷೇತ್ರಕ್ಕೆ ಬರುವ ಯುವಕರು ಅವರ ಜೀವನ ಹಾಗೂ ಹೋರಾಟವನ್ನು ಅಧ್ಯಯನ ಮಾಡಿ, ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕತೆ, ಸರಳತೆ ಮತ್ತು ಜನಪರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ದೇವಣ್ಣ ಶಿರೂರು, ಜವಳಿ ಅಂದಪ್ಪ, ದೇವಪ್ಪ ಅರಕೇರಿ, ಕಳಕಪ್ಪ ಕಂಬಳಿ, ವಕೀಲ ಬಿ.ವಿ. ಶಿರೂರು, ಸಿದ್ದಯ್ಯ ಕಳ್ಳಿಮಠ, ಕೆ.ಆರ್. ಕುಲಕರ್ಣಿ, ಯಮನೂರಪ್ಪ ಗೊರಲೆಕೊಪ್ಪ, ಪರಶುರಾಮ್ ಸಕ್ರಣ್ಣವರ, ಈರಣ್ಣ ಯಲಬುರ್ಗಿ , ಸೇರಿದಂತೆ ಗಣ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ವರದಿ: ಚನ್ನಯ್ಯ ಹಿರೇಮಠ. ಕುಕನೂರು.

Related Articles

Leave a Reply

Your email address will not be published. Required fields are marked *

Back to top button
error: Content is protected !!