
*AIBE ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನ್ನದಾನೀಶ್ವರ ಮಠದ ಪೂಜ್ಯ ಮಹಾದೇವ ಮಹಾಸ್ವಾಮಿಗಳು :ಭಕ್ತರಿಂದ ಆತ್ಮೀಯ ಸನ್ಮಾನ*

*ಆಧ್ಯಾತ್ಮದ ಜೊತೆಗೆ ಕಾನೂನು ಶಿಕ್ಷಣದಲ್ಲೂ ಸಾಧನೆ; ಸಮಾಜಕ್ಕೆ ನ್ಯಾಯದ ಬೆಳಕು ಹರಿಸುವ ಸಂಕಲ್ಪಕ್ಕೆ ಮೆಚ್ಚುಗೆ*
*ಕುಕನೂರು* , ಜು. 21:
ಕುಕನೂರಿನ ಅನ್ನದಾನೀಶ್ವರ ಮಠದ ಪೂಜ್ಯ ಮಹಾದೇವ ಮಹಾಸ್ವಾಮಿಗಳು ಅಖಿಲ ಭಾರತ ವಕೀಲರ ಪರೀಕ್ಷೆ (AIBE)ಯಲ್ಲಿ ಉತ್ತೀರ್ಣರಾಗಿ ವಕೀಲ ವೃತ್ತಿಗೆ ಅರ್ಹತೆ ಪಡೆದ ಹಿನ್ನೆಲೆಯಲ್ಲಿ, ಮಠದಲ್ಲಿ ಭಕ್ತ ಮಂಡಳಿಯ ವತಿಯಿಂದ ಆತ್ಮೀಯ ಸನ್ಮಾನ ಕಾರ್ಯಕ್ರಮ ನಡೆಯಿತು.
ಆಧ್ಯಾತ್ಮಿಕ ಸೇವೆಯೊಂದಿಗೆ ಕಾನೂನು ಶಿಕ್ಷಣದಲ್ಲೂ ಸಾಧನೆ ಮಾಡಿರುವ ಸ್ವಾಮೀಜಿಗಳ ಈ ಯಶಸ್ಸು ಭಕ್ತರಲ್ಲಿ ಹರ್ಷ ಮತ್ತು ಹೆಮ್ಮೆಯನ್ನುಂಟು ಮಾಡಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯರಾದ ವೀರಣ್ಣ ಅಣ್ಣೀಗೇರಿ, “ಆಧ್ಯಾತ್ಮದ ಜೊತೆಗೆ ಲೌಕಿಕ ವಿದ್ಯೆಯಲ್ಲೂ ಸಾಧನೆ ಮಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಅಖಿಲ ಭಾರತ ಮಟ್ಟದ ಕಠಿಣ ವಕೀಲರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಪೂಜ್ಯರ ಛಲ, ಪರಿಶ್ರಮ ಮತ್ತು ದೃಢಸಂಕಲ್ಪಕ್ಕೆ ಸಾಕ್ಷಿಯಾಗಿದೆ. ಅವರು ಪಡೆದಿರುವ ಕಾನೂನು ಜ್ಞಾನವು ಬಡವರು, ಶೋಷಿತರು ಮತ್ತು ನ್ಯಾಯಕ್ಕಾಗಿ ಹೋರಾಡುವ ಜನರಿಗೆ ನೆರವಾಗಲಿ. ಧರ್ಮದ ಜೊತೆಗೆ ನ್ಯಾಯದ ದಾರಿಯನ್ನೂ ಬೆಳಗಿಸುವ ಕಾರ್ಯವನ್ನು ಅವರು ಮುಂದುವರಿಸಲಿ” ಎಂದು ಹಾರೈಸಿದರು.
ಎಂ.ಎಸ್. ಹಿರೇಮಠ ಮಾತನಾಡಿ, “ಅನ್ನದಾನೀಶ್ವರರ ಕೃಪೆಯಿಂದ ನಮ್ಮ ಮಠಕ್ಕೆ ವಿದ್ಯಾವಂತ ಹಾಗೂ ದೂರದೃಷ್ಟಿಯ ಸ್ವಾಮೀಜಿ ದೊರೆತಿದ್ದಾರೆ. ವಕೀಲರಾಗಿ ಅವರು ಸಂವಿಧಾನದ ಅರಿವನ್ನು ಜನರಲ್ಲಿ ಮೂಡಿಸುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಿಗೆ ಇನ್ನಷ್ಟು ಬಲ ತುಂಬಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.
ಆರ್.ಪಿ. ರಾಜೂರು ಮಾತನಾಡಿ, “ಕಲಿಯುವಿಕೆಗೆ ಅಂತ್ಯವಿಲ್ಲ ಎಂಬುದನ್ನು ಪೂಜ್ಯರು ತಮ್ಮ ಸಾಧನೆಯ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸ್ವಾಮೀಜಿ ಸ್ಥಾನದಲ್ಲಿದ್ದರೂ ವಿದ್ಯಾರ್ಥಿಯ ಮನೋಭಾವದಿಂದ AIBE ಪರೀಕ್ಷೆಗೆ ಸಿದ್ಧರಾಗಿ ಯಶಸ್ಸು ಗಳಿಸಿರುವುದು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಿದೆ. ಜ್ಞಾನಕ್ಕೆ ವಯಸ್ಸಿನ ಮಿತಿ ಅಥವಾ ಗಡಿಯಿಲ್ಲ ಎಂಬ ಸಂದೇಶವನ್ನು ಅವರು ಸಮಾಜಕ್ಕೆ ನೀಡಿದ್ದಾರೆ” ಎಂದು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿದ ಪೂಜ್ಯ ಮಹಾದೇವ ಮಹಾಸ್ವಾಮಿಗಳು, ತಮ್ಮನ್ನು ಗೌರವಿಸಿದ ಭಕ್ತ ಮಂಡಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಬಸಣ್ಣ ದಿವಟರ, ಬಸವನಗೌಡ ಮಾಲೀಪಾಟೀಲ, ಶರಣಪ್ಪ ಗುತ್ತಿ, ಶರಣಪ್ಪ ಕೊಪ್ಪದ, ಮಲ್ಲಣ್ಣ ಕರಮುಡಿ, ಗಂಗಾಧರ ಅವಟೇರ, ಅಶೋಕಯ್ಯ ಹರಿಶಂಕರಬಂಡಿ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.
ವರದಿ: ಚನ್ನಯ್ಯ ಹಿರೇಮಠ, ಕುಕನೂರು




