Uncategorized

ರಾಜೂರು ಗ್ರಾಮವು ಭಕ್ತಿ ಭಾವದಿಂದ ಕೂಡಿದ ಗ್ರಾಮ: ಜಗದ್ಗುರು ಶ್ರೀ ವೀರಸೋಮೇಶ್ವರ ರಾಜಾದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ

 

 

ರಾಜೂರು ಗ್ರಾಮವು ಭಕ್ತಿ ಭಾವದಿಂದ ಕೂಡಿದ ಗ್ರಾಮ: ಜಗದ್ಗುರು ಶ್ರೀ ವೀರಸೋಮೇಶ್ವರ ರಾಜಾದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ

ಕುಕನೂರು: ತಾಲೂಕಿನ ರಾಜೂರು ಗ್ರಾಮದ ಶ್ರೀ ಶರಣಬಸವೇಶ್ವರ ಬೃಹನ್ಮಠಕ್ಕೆ ಬಾಳೆಹೊನ್ನೂರು ಶ್ರೀಮದ್ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜಾದೇಶಿಕೇಂದ್ರ ಶಿವಾಚಾರ್ಯ ಭಗತ್ಪಾದರು ಭಾನುವಾರ ಆಗಮಿಸಿದರು.

ಈ ಸಂದರ್ಭದಲ್ಲಿ ಮಠಕ್ಕೆ ಆಗಮಿಸಿದ ಜಗದ್ಗುರುಗಳನ್ನು ಭಕ್ತರು ಭಕ್ತಿಭಾವದಿಂದ ಸ್ವಾಗತಿಸಿ, ಗೌರವಿಸಿದರು. ಬಳಿಕ ಸಕಲ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ರಾಜೂರು ಗ್ರಾಮವು ಭಕ್ತಿ ಭಾವದಿಂದ ಕೂಡಿದ ಗ್ರಾಮವಾಗಿದ್ದು, ಇಲ್ಲಿನ ಜನರು ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

“ಈ ಹಿಂದೆ ನಾವು ಶ್ರೀ ಶರಣಬಸವೇಶ್ವರ ದೇವಸ್ಥಾನದ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಎಂದಿಗೂ ಮರೆಯುವಂತಿಲ್ಲ. ಅಂದು ಭಕ್ತರು ತೋರಿದ ಭಕ್ತಿ, ಶ್ರದ್ಧೆ ಹಾಗೂ ಅಭಿಮಾನ ಇಂದಿಗೂ ಸ್ಮರಣೀಯವಾಗಿದೆ” ಎಂದು ಶ್ರೀಗಳು ನೆನಪಿಸಿಕೊಂಡರು.

ಧರ್ಮವು ಕೇವಲ ಆಚರಣೆಗೆ ಸೀಮಿತವಾಗದೆ, ಸತ್ಯ, ಶ್ರದ್ಧೆ, ಸಂಸ್ಕಾರ, ಪರೋಪಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮಾರ್ಗವಾಗಬೇಕು. ಯುವಜನತೆ ಧಾರ್ಮಿಕ ಹಾಗೂ ಸಂಸ್ಕಾರಯುತ ಜೀವನದತ್ತ ಸಾಗಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ರೇಣುಕಾದಿ ಪಂಚಾಚಾರ್ಯರು ಧರ್ಮವನ್ನು ಸ್ಥಾಪನೆ ಮಾಡಿ, ವೀರಶೈವ ಸಮಾಜದ ಸಮಸ್ಥಾಪನೆಯೊಂದಿಗೆ ಧರ್ಮದ ಆಚಾರ-ವಿಚಾರಗಳನ್ನು ನೀಡಿದ್ದಾರೆ. ಧರ್ಮದ ತತ್ವ ಹಾಗೂ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವರ ಮಾರ್ಗದರ್ಶನದಲ್ಲಿ ಎಲ್ಲರೂ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಧರ್ಮ ಹಾಗೂ ಸಂಸ್ಕೃತಿಯ ಆಚರಣೆಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸದ್ಭಾವನೆ ಬೆಳೆಸಲು ಸಹಕಾರಿಯಾಗುತ್ತವೆ. ಪ್ರತಿಯೊಬ್ಬರೂ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡು, ಧಾರ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಬೇಕು ಎಂದು ಶ್ರೀಗಳು ತಿಳಿಸಿದರು.

ನಂತರ ಜಗದ್ಗುರುಗಳು ರಾಜೂರು ಗ್ರಾಮದ ಸಕಲ ಭಕ್ತರನ್ನು ಆಶೀರ್ವದಿಸಿ, ಎಲ್ಲರಿಗೂ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಹಾಗೂ ಸಮೃದ್ಧಿ ದೊರೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ರಾಜೂರು ಅಭಿನವ ಪಂಚಾಕ್ಷರ ಮಹಾಸ್ವಾಮಿಗಳು ವಿವಿಧ ಮಠಾಧೀಶರು ಮತ್ತು ಶ್ರೀ ಶರಣಬಸವೇಶ್ವರ ಬೃಹನ್ಮಠದ ಭಕ್ತರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.

ವರದಿ ಚನ್ನಯ್ಯ ಹಿರೇಮಠ ಕುಕನೂರು

Related Articles

Leave a Reply

Your email address will not be published. Required fields are marked *

Back to top button
error: Content is protected !!