Uncategorized

ಧರ್ಮದಿಂದ ಸಂಸ್ಕೃತಿ ಉಳಿವು, ಸಂಸ್ಕೃತಿಯಿಂದ ಸಮಾಜಕ್ಕೆ ಶಕ್ತಿ: ರಂಭಾಪುರಿ ಜಗದ್ಗುರುಗಳು

ಕಲ್ಲೂರಿನಲ್ಲಿ ನೂತನ ಶಿಲಾಮಂಟಪ ಲೋಕಾರ್ಪಣೆ

ಕಲ್ಲೂರಿನಲ್ಲಿ ನೂತನ ಶಿಲಾಮಂಟಪ ಲೋಕಾರ್ಪಣೆ

ಧರ್ಮದಿಂದ ಸಂಸ್ಕೃತಿ ಉಳಿವು, ಸಂಸ್ಕೃತಿಯಿಂದ ಸಮಾಜಕ್ಕೆ ಶಕ್ತಿ: ರಂಭಾಪುರಿ ಜಗದ್ಗುರುಗಳು

ಯಲಬುರ್ಗಾ: ಭಾರತೀಯ ಸಂಸ್ಕೃತಿಯ ಮೂಲವೇ ಧರ್ಮ. ಆಧ್ಯಾತ್ಮ, ಸತ್ಯ ಹಾಗೂ ಸಂಸ್ಕಾರಗಳ ಮೂಲಕ ಸಮಾಜವನ್ನು ಉತ್ತಮ ದಾರಿಗೆ ಕೊಂಡೊಯ್ಯಬಹುದು. ಧರ್ಮದಿಂದ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿಯಿಂದ ಸಮಾಜಕ್ಕೆ ದೊಡ್ಡ ಶಕ್ತಿ ದೊರೆಯುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ಸೋಮವಾರ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠದ ನೂತನ ವಿರೂಪಾಕ್ಷೇಶ್ವರ ಸ್ವಾಮಿಗಳ ಶಿಲಾಮಂಟಪ ಲೋಕಾರ್ಪಣೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ನಮ್ಮ ನಾಡಿನ ಮಣ್ಣು ಕೇವಲ ಭೌಗೋಳಿಕ ನೆಲವಲ್ಲ. ಆಚಾರ್ಯರು, ಋಷಿಮುನಿಗಳು ಹಾಗೂ ಸತ್ಪುರುಷರ ಸಂಸ್ಕಾರ ಮತ್ತು ಪಾದಸ್ಪರ್ಶದಿಂದ ಪಾವನಗೊಂಡ ಪುಣ್ಯಭೂಮಿಯಾಗಿದೆ. ಗುರುಮಠಗಳು ಧರ್ಮ, ಸಂಸ್ಕೃತಿ, ಸದಾಚಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಪವಿತ್ರ ತಾಣಗಳಾಗಿವೆ ಎಂದು ತಿಳಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ ಸಮಾಜದ ಉದ್ಧಾರಕ್ಕೆ ಕಾರಣರಾದರು. ಕಲ್ಲೂರು ಹಿರೇಮಠವು ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗಳು ವೀರಶೈವ ಧರ್ಮ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸಿದ್ದಾರೆ. ಇಂದು ಹಿರೇಮಠದ ವೀರಯ್ಯ ಸ್ವಾಮಿಗಳ ನಿರಂತರ ಸಾಧನೆ ಮತ್ತು ಪ್ರಯತ್ನದಿಂದ ಭವ್ಯವಾದ ಶಿಲಾಮಂಟಪ ನಿರ್ಮಿಸಿ ಲೋಕಾರ್ಪಣೆ ಮಾಡುತ್ತಿರುವುದು ಧರ್ಮಶ್ರದ್ಧೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ವಿವಿಧ ಮಠಾಧೀಶರು ಉಪದೇಶಾಮೃತ ನೀಡಿದರು. ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯ ಸ್ವಾಮಿಗಳು, ರಾಜೂರು ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಹಾಗೂ ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮ, ಗುರುಪರಂಪರೆ ಹಾಗೂ ಆದರ್ಶ ಮೌಲ್ಯಗಳ ಕುರಿತು ಮಾತನಾಡಿದರು.

ಹಿರೇಮಠದ ವೀರಯ್ಯ ಸ್ವಾಮಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಸೇವಾದಾತರು ಹಾಗೂ ಗಣ್ಯರನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.

ನಂತರ ಶ್ರೀ ರಂಭಾಪುರಿ ಜಗದ್ಗುರುಗಳು ಕಲ್ಲೂರು ಗ್ರಾಮದ ಪ್ರಸಿದ್ಧ ಕಲ್ಲಿನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಅವರ ಅಡ್ಡಪಲ್ಲಕ್ಕಿ ಮಹೋತ್ಸವವು ವಿವಿಧ ವಾದ್ಯ ವೈಭವ ಹಾಗೂ ಕಳಸ ಕನ್ನಡಿಯೊಂದಿಗೆ ವಿಜೃಂಭಣೆಯಿಂದ ನಡೆಯಿತು. ಸಮಾರಂಭದ ನಂತರ ಅನ್ನದಾಸೋಹ ಏರ್ಪಡಿಸಲಾಗಿತ್ತು.

ವರದಿ ಚನ್ನಯ್ಯ ಹಿರೇಮಠ ಕುಕುನೂರು

Related Articles

Leave a Reply

Your email address will not be published. Required fields are marked *

Back to top button
error: Content is protected !!