ಸರಕಾರಕ್ಕೆ ಛಾಟಿ ಏಟು ನೀಡುವ ಶಕ್ತಿ ಸಾಹಿತ್ಯ ಪರಿಷತ್ತಿಗೆ ಬೇಕು, ಡಾ.ಸೋಮಶೇಖರ್

ಕೊಪ್ಪಳ: ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಿ, ಇಂಗ್ಲೀಷಮಯ ಮಾಡುತ್ತಿರುವ ಸರಕಾರಕ್ಕೆ ಛಾಟಿ ಏಟು ನೀಡುವಂತಹ ಶಕ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಬರಬೇಕಾದ ಅವಶ್ಯಕತೆ ಇದೆ. ಕಸಾಪವನ್ನು ಇಂತಹ ಸಂಸ್ಥೆಯಾಗಿಸುವ ದಿಸೆಯಲ್ಲಿ ತಮ್ಮ ಪ್ರಯತ್ನಕ್ಕೆ ನಾಡಿನ ಎಲ್ಲ ಸಾಹಿತಿಗಳ, ಕನ್ನಡಿಗರ ಬೆಂಬಲ, ಹೋರಾಟ ಬೇಕಾಗಿದೆ ಎಂದು ನಿವೃತ್ತ ಐ.ಎ.ಎಸ್ ಅಧಿಕಾರಿ ಹಾಗೂ ಸಾಹಿತಿ ಡಾ: ಸಿ ಸೋಮಶೇಖರ ಅಭಿಪ್ರಾಯಪಟ್ಟಿದ್ದಾರೆ.
ಕೊಪ್ಪಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ತಾವು ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಯಾಗಿದ್ದು, ತಾವು ಅಧಿಕಾರದಲ್ಲಿದ್ದಾಗ ಕನ್ನಡ ಪರ ಸೇವೆ ಮಾಡಿದ್ದು, ಹಲವು ಪುಸ್ತಕಗಳನ್ನು ಪ್ರಕಟಿಸಿದ್ದು ತಮಗೆ ಸರ್ವ ಸಾಹಿತಿಗಳ,ಕನ್ನಡಿಗರ ಬೆಂಬಲದ ಅವಶ್ಯಕತೆ ಎಂದು ಅವರು ಹೇಳಿದರು.
ತಾವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿದ್ದಾಗ, ಕನ್ನಡ ಗಡಿ ಪ್ರಾಧಿಕಾರದ ಕಾರ್ಯದರ್ಶಿಯಾಗಿದ್ದಾಗ, ಜಿಲ್ಲಾಧಿಕಾರಿ, ಅಸಿಸ್ಟಂಟ ಕಮೀಷನರ್ ಆಗಿದ್ದಾಗ ಕನ್ನಡ ಪ್ರಜ್ಞೆ, ಜಾಗೃತಿಗೆ ವಿಶೇಷ ಆದ್ಯತೆ ನೀಡಿದ್ದು, ಹಲವು ಜಿಲ್ಲಾ ಸಾಹಿತ್ಯ ಪರಿಷತ್ತಿಗಳಿಗೆ ಕನ್ನಡ ಭವನಕ್ಕಾಗಿ ನಿವೇಶನ,ಹಣಕಾಸು ಒದಗಿಸಿದ್ದಲ್ಲದೇ,ಗಡಿನಾಡ ಚೇತನ ಪ್ರಶಸ್ತಿ ಸ್ಥಾಪಿಸಿ ಅನೇಕ ಮಹನೀಯರಿಗೆ ಪ್ರಶಸ್ತಿ ನಿಡಿದ್ದಾಗಿ ತಿಳಿಸಿದರು, ಗಡಿನಾಡಲ್ಲಿ ಕನ್ನಡ ಪ್ರೇಮ,ಕನ್ನಡ ಶಾಲೆ ಉಳಿಸಲು ವಿಶೇಷ ಪ್ರಯತ್ನ ಮಾಡಿದ್ದಾಗಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ನ್ನು ಕನ್ನಡ ಸರಸ್ವತಿಯ ದೇಗುಲ ಎಂಬ ಭಾವನೆ ಬರುವಂತೆ, ಕನ್ನಡಿಗರೆಲ್ಲರೂ ಈ ಸಂಸ್ಥೆಯ ಸದಸ್ಯರಾಗುವಂತೆ ಜನಾಂದೋಲನ ರೂಪಿಸುವ ಗುರಿ,ವಯಕ್ತಿಕ ಬದ್ದತೆ ಹೊಂದಿದ್ದು, ರಾಜ್ಯದ ಎಲ್ಲ ತಾಲ್ಲೂಕು, ಜಿಲ್ಲೆಗಳಲ್ಲಿ ಸಾಹಿತ್ಯ ಪರಿಷತ್ ಗಳಿಗೆ ಕಟ್ಟಡ, ಕನ್ನಡ ಭವನ ಒದಗಿಸುವುದು, ಹಿರಿಯ, ಉದಯೋನ್ಮುಖ ಸಾಹಿತಿಗಳ ಪುಸ್ತಕ ಪ್ರಕಟಣೆ, ಕಸಾಪ ಗ್ರಂಥಾಲಯದ ಡಿಜಿಟಲೀಕರಣ, ದಾಸ, ವಚನ, ಬಂಡಾಯ, ದಲಿತ,ಮಹಿಳಾ ಸಾಹಿತ್ಯಕ್ಕೆ ಆದ್ಯತೆ ಒದಗಿಸುವುದು, ಸಾಹಿತ್ಯ ಸಮ್ಮೇಳನಗಳು ಹೆಚ್ಚು ಸಾಹಿತ್ಯಮಯವಾಗಿಸುವುದು, ಮಕ್ಕಳಲ್ಲಿ ಕನ್ನಡ ಪ್ರೇಮ ಮೂಡಿಸಲು ಮಕ್ಕಳ ಪ್ರತಿಭೋತ್ಸವ ಇನ್ನಿತರ ಕನಸುಗಳನ್ನು, ಗುರಿಯನ್ನು ಹೊಂದಿರುವುದಾಗಿ ಅವರು ತಿಳಿಸಿದರು .
ತಾವು ಚಿಂತನ ಚಿಲುಮೆ, ಚುಂತನಕಿರಣ, ಅರಿವೇ ಗುರು, ಮಾತೆಂಬುದು ಜ್ಯೋತಿರ್ಲಿಂಗಮುಂತಾದ ಕೃತಿ ಸಹ ರಚಿಸಿದ್ದು,ದೇಶ ವಿದೇಶಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗಿಯಾಗಿದ್ದು, ಉಪನ್ಯಾಸ ನೀಡಿದ್ದು, ಬಾಲ್ಯದಿಂದಲೇ ಅಪಾರ ಕನ್ನಡ ಪ್ರೇಮ ಹೊಂದಿರುವ ಕಾರಣ ಕನ್ನಕ್ಕಾಗಿ ವಿಶೇಷ ಸೇವೆ ಸಲ್ಲಿಸಿದ್ದು, ಈ ಬಾರಿಯ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸಕಲ ಕನ್ನಡಿಗರು, ಸಾಹಿತಿಗಳು ಮತ ನೀಡಿ, ಸೇವೆ ಸಲ್ಲಿಸುವ ಅವಕಾಶ ಒದಗಿಸಬೇಕೆಂದು ಅವರು ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಾಹಿತಿಗಳಾದ ಡಿ.ವಿ.ಬಡಿಗೇರ, ಶಿವಕುಮಾರ, ಬಸವರಾಜ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಬಿ.ಬಿ.ಪಾಟೀಲ ಇನ್ನಿತರರು ವೇದಿಕೆಯಲ್ಲಿದ್ದರು.