ಜಿಲ್ಲಾ ಸುದ್ದಿಗಳು

ಗವಿಶ್ರೀ ಕ್ರೀಡಾ ಉತ್ಸವ ಗವಿಸಿದ್ದೇಶ್ವರ ಜಾತ್ರೆಗೆ ಮೆರಗು: ಸಂಸದ ರಾಜಶೇಖರ್ ಹಿಟ್ನಾಳ್

ಜ.14 ರಿಂದ 17 ರವರೆಗೆ ಗವಿಶ್ರೀ ಕ್ರೀಡಾ ಉತ್ಸವ- 2025 ರ ಲಾಂಛನ ಬಿಡುಗಡೆ

ಕೊಪ್ಪಳ : ಗವಿಶ್ರೀ ಜಾತ್ರಾ ಮಹೋತ್ಸವ ಅಂಗವಾಗಿ ರಾಜ್ಯದ ಮಹಾಜನರು, ಯುವಜನರು, ಮಹಿಳೆಯರು, ರೈತರು, ಮಕ್ಕಳು, ಎಲ್ಲಾ ವರ್ಗದವರು ಕೂಡ ಸೇರಿಕೊಂಡು ಜಾನಪದ ಶೈಲಿಯ ಹಾಗೂ ಪ್ರಸ್ತುತ ಪ್ರಚಲಿತವಿರುವ ಆಟಗಳನ್ನು ಸೇರಿಸಿ ಜಾತ್ರಾ ನಿಮಿತ್ಯ

ಜ.14 ರಿಂದ 17 ರವರೆಗೆ ಗವಿಶ್ರೀ ಕ್ರೀಡಾ ಉತ್ಸವ- 2025 ನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸದರು ಹಾಗೂ ಗವಿಶ್ರೀ ಕ್ರೀಡಾ ಉತ್ಸವ ಸಮಿತಿ ಅಧ್ಯಕ್ಷರು ಆಗಿರುವ ಕೆ.ರಾಜಶೇಖರ ಹಿಟ್ನಾಳ ಹೇಳಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ, ಈ ಕ್ರೀಡಾಕೂಟವನ್ನು ಕೊಪ್ಪಳ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಕೈಗಾರಿಕೆಗಳು ಹಾಗೂ ವಾಣಿಜ್ಯೋದ್ಯಮಿಗಳು ಕೊಪ್ಪಳ ಇವರ ಸಹಕಾರದಿಂದ ಹಾಗೂ ಕೊಪ್ಪಳ ಜಿಲ್ಲಾ ಅಥ್ಲೆಟಿಕ್ಸ್ ಅಸೋಶಿಯೇಶನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಕುಸ್ತಿ ಸಂಘ, ಬ್ಯಾಡ್ಮಿಂಟನ್ ಅಸೋಶಿಯೇಶನ್, ಕಬಡ್ಡಿ ಹಾಗೂ ವಾಲಿಬಾಲ್ ಅಸೋಶಿಯೇಶನ್ ಹಾಗೂ ಇತ್ಯಾದಿ ಹಲವಾರು ಸಂಘ ಸಂಸ್ಥೆಗಳನ್ನ ಒಳಗೊಂಡು ಎಲ್ಲಾ ವರ್ಗದವರು ಮುಕ್ತವಾಗಿ ಭಾಗವಹಿಸುವ, ಆನಂದಿಸುವ ಹಾಗೇ ಗವಿಶ್ರೀ ಕ್ರೀಡಾಕೂಟ-2025ನ್ನು ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ 17 ವಿವಿಧ ರೀತಿಯ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ. ಪುರುಷ/ಮಹಿಳೆಯರಿಗೆ ಮುಕ್ತ,
ವಾಲಿಬಾಲ್, ಕಬಡ್ಡಿ, ಮ್ಯಾರಾಥಾನ, ಶೆಟಲ್ ಬ್ಯಾಡ್ಮಿಂಟನ್, ಛದ್ಮವೇಷ, ದೇಹದಾರ್ಡ್ಯ, ಪಂದ್ಯಾವಳಿ
ಏರ್ಪಡಿಸಲಾಗಿದೆ.

ಪುರುಷರ ಆವ್ಹಾನಿತ ಕ್ರೀಡೆ : ಕ್ರಿಕೆಟ್, ಗಾಳಿಪಟ, ಮಲ್ಲಕಂಬ, ಕುಸ್ತಿ ಪಂದ್ಯಾವಳಿ,
ಪುರುಷರ ಸ್ಪರ್ಧೆ ಜಿಲ್ಲಾ ಮಟ್ಟದಲ್ಲಿ :
ಎತ್ತಿನ ಬಂಡಿ ಶೃಂಗಾರ ಸ್ಪರ್ಧೆ, ಯುವಕರಿಂದ ಎತ್ತಿನ ಬಂಡಿ ಜಗ್ಗುವದು, ಸಂಗ್ರಾಣಿ ಕಲ್ಲು ಎತ್ತುವದು. ವಿಕಲಚೇತನರ ವಾಲಿಬಾಲ್‌ ಪಂದ್ಯಾವಳಿ., ಪುರುಷರ/ ಮಹಿಳೆಯರ ಜಿಲ್ಲಾ ಮಟ್ಟದಲ್ಲಿ : ಹಗ್ಗ ಜಗ್ಗಾಟ ಸ್ಪರ್ಧೆ, ಮಹಿಳೆಯರಿಗೆ ಜಿಲ್ಲಾ ಮಟ್ಟ : ರಂಗೋಲಿ, ಥೋಬಾಲ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಅಲ್ಲದೇ ಈ ಬಾರಿ ಗವಿಶ್ರೀ ಕ್ರೀಡಾಕೂಟ-2025ನ್ನು ಪ್ರಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಗಾಳಿಪಟ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ, ಮಹಾರಾಷ್ಟ್ರ, ಕೇರಳ ಮತ್ತು ಹರಿಯಾಣದಿಂದಲೂ ಅನುಭವಿ ನುರಿತ ತಂಡಗಳು ಗವಿಶ್ರೀ ಮೈದಾನದಲ್ಲಿ ಸುಮಾರು 100ಕ್ಕೂ ಅಧಿಕ ಗಾಳಿಪಟವನ್ನು ಪ್ರದರ್ಶನವನ್ನು ದಿನಾಂಕ:16.01.2025ರಂದು ಮಾಡಲಿದೆ, ಮಕ್ಕಳು ಯುವಕರಿಗೆ ಸ್ಫೂರ್ತಿ ತುಂಬುವಂತೆ ಮಕರ ಸಂಕ್ರಾತಿಯ ವಿಶೇಷವಾಗಿಯೆ ಬೃಹತ್ ಪ್ರಮಾಣದ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿದೆ.
ದಿನಾಂಕ:14.01.2025 ರಂದು ಸಂಜೆ 3.30 ಗಂಟೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಗವಿಮಠ ಆವರಣದಲ್ಲಿ ಆಯೋಜಿಸಲಾಗಿದೆ.

ಗವಿಶ್ರೀ ಕ್ರೀಡಾಕೂಟದಲ್ಲಿ ರೈತರನ್ನು ಗಮನದಲ್ಲಿ ಇಟ್ಟುಕೊಂಡು ರೈತರನ್ನು ಖುಷಿಪಡಿಸುವ ಸಲುವಾಗಿ ರೈತರ ಜೀವನ ಅವಿಭಾಜ್ಯ ಅಂಗವಾದ ಎತ್ತು, ಚಕ್ಕಡಿ, ಇವುಗಳನ್ನು ಶೃಂಗಾರ ಪಡಿಸಿ ಸ್ಪರ್ಧೆಯನ್ನು ದಿನಾಂಕ:17.01.2025ರಂದು ತಾಲ್ಲೂಕ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿ ಗವಿಮಠಕ್ಕೆ ಮುಕ್ತಾಯಗೊಳಿಸಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಅದರಂತೆ, ರೈತ ಮಕ್ಕಳ ಯುವಜನರಿಗಾಗಿ ಶಕ್ತಿ ಪ್ರದರ್ಶನವಾಗಿ ಎತ್ತಿನ ಬಂಡಿ ಜಗ್ಗುವ ಸ್ಪರ್ಧೆಯನ್ನು
ಏರ್ಪಡಿಸಲಾಗಿದೆ ಎಂದು ರಾಜಶೇಖರ ಹಿಟ್ನಾಳ ವಿವರಿಸಿದರು.

ಇದೇ ವೇಳೆ ಗವಿಶ್ರೀ ಕ್ರೀಡಾ ಉತ್ಸವ-2025 ರ ಕುರಿತು ಲೋಗೋ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಮುಖಂಡರಾದ ವೀರೇಶ ಮಹಾಂತಯ್ಯನಮಠ, ಕ್ರೀಡಾ ಇಲಾಖೆ ಸಹಾಯಕ ನಿರ್ದೆಶಕ ಬಸವರಾಜ ಇದ್ದರು.

Related Articles

Leave a Reply

Your email address will not be published. Required fields are marked *

Back to top button