Uncategorized

ಕಂದಕದಿಂದ ಕಂಟಕ ಗ್ಯಾರಂಟಿ: ಅಪಾಯ ತಪ್ಪಿಸಲು ತಕ್ಷಣ ಕ್ರಮಕ್ಕೆ ಶರಣಬಸಪ್ಪ ದಾನಕೈ ಆಗ್ರಹ

ವರದಿ:- ಚನ್ನಯ್ಯ ಹಿರೇಮಠ ಕುಕುನೂರು

ಕಂದಕದಿಂದ ಕಂಟಕ ಗ್ಯಾರಂಟಿ: ಅಪಾಯ ತಪ್ಪಿಸಲು ತಕ್ಷಣ ಕ್ರಮಕ್ಕೆ ಶರಣಬಸಪ್ಪ ದಾನಕೈ ಆಗ್ರಹ

ಯಲಬುರ್ಗಾ, ಜು. 22: ತಾಲೂಕಿನ ಮಲಕಸಮುದ್ರ ಗ್ರಾಮದ ಬಸ್ ತಂಗುದಾಣದ ಪಕ್ಕದಲ್ಲಿರುವ ಸಿಸಿ ರಸ್ತೆಯ ಪಕ್ಕದ ಗಟಾರು ಕುಸಿದು ದೊಡ್ಡ ಕಂದಕ ನಿರ್ಮಾಣವಾಗಿದೆ. ಮಳೆ ಬಂದಾಗ ಗಟಾರು ತುಂಬಿ ಹರಿಯುವುದರಿಂದ ರಸ್ತೆ ಕಾಣದ ಪರಿಸ್ಥಿತಿ ಉಂಟಾಗುತ್ತಿದ್ದು,

ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಅಪಾಯ ಎದುರಾಗಿದೆ.ರಾತ್ರಿ ವೇಳೆ ಈ ಕಂದಕ ಕಾಣಿಸದೇ ಜನರು, ರೈತರು, ಶಾಲಾ ಮಕ್ಕಳು, ವಯೋವೃದ್ಧರು ಹಾಗೂ ರೈತರ ಸಂಗಾತಿಗಳಾದ ಎತ್ತು, ಎಮ್ಮೆ, ಹಸು, ಕುರಿ, ಮೇಕೆಗಳು ಬಿದ್ದು ಅಪಾಯಕ್ಕೀಡಾಗುವ ಸಾಧ್ಯತೆ ಹೆಚ್ಚಿದೆ. ರೈತರ ಚಕ್ಕಡಿ ಸೇರಿದಂತೆ ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಗಿದೆ.

ಗ್ರಾಮ ಪಂಚಾಯಿತಿ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಸಂಬಂಧಿತ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಕಂದಕವನ್ನು ಮುಚ್ಚಿಸಿ ಸುರಕ್ಷಿತ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಆಗ್ರಹಿಸಿದ್ದಾರೆ.

“ಅಪಾಯ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಮುನ್ನವೇ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಈ ಕಂದಕದಿಂದ ಅಮಾಯಕ ಜನರು ಹಾಗೂ ಜಾನುವಾರುಗಳ ಜೀವಕ್ಕೆ ಕಂಟಕ ಎದುರಾಗುವುದು ಖಚಿತ. ಆಗ ಅದರ ಹೊಣೆ ಯಾರು ಹೊರುತ್ತಾರೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಜಾಗೃತಿವಹಿಸಿ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ “ಕಂದಕದಿಂದ ಕಂಟಕ ಗ್ಯಾರಂಟಿ” ಎನ್ನುವ ಸ್ಥಿತಿ ತಪ್ಪದು ಎಂದು ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!