

ಗುರುಭಕ್ತಿ ಜೊತೆಗೆ ಭಾರತಮಾತೆಯ ಸೇವೆಗೂ ಸಿದ್ಧರಾಗಿರಿ: ಯೋಗ ಬಂಧುಗಳಿಗೆ ಸರಸ್ವತಿ ಅಕ್ಕ ಸಂದೇಶ
ಕುಕನೂರು, ಜು. 31: ಗುರುಗಳ ಆದರ್ಶಗಳನ್ನು ಅನುಸರಿಸಿ ಯೋಗ, ಸಂಸ್ಕಾರ, ಸೇವೆ ಹಾಗೂ ರಾಷ್ಟ್ರಭಕ್ತಿಯೊಂದಿಗೆ ಬದುಕಿ, ಭಾರತಮಾತೆಯ ಸೇವೆಗೆ ಸದಾ ಸಿದ್ಧರಾಗಿರಬೇಕು ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ) ಕರ್ನಾಟಕ ತುಂಗಭದ್ರಾ ವಲಯದ ಪಶ್ಚಿಮ ವಲಯ ಸಂಸ್ಥಾನ ಪ್ರಮುಖರಾದ ಸರಸ್ವತಿ ಅಕ್ಕ ಕರೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಯೋಗ ಮಂದಿರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ), ಕರ್ನಾಟಕ ತುಂಗಭದ್ರಾ ವಲಯ, ಕುಕನೂರು ಶಾಖೆ ವತಿಯಿಂದ ಗುರುವಾರ ಗುರುಪೂರ್ಣಿಮೆ ಅಂಗವಾಗಿ ಅಗ್ನಿಹೋತ್ರ, ಸಹಭೋಜನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಮತ್ತು ವಿಜೃಂಭಣೆಯಿಂದ ನಡೆದವು.
ಕಾರ್ಯಕ್ರಮವು ವೇದಮಂತ್ರಗಳ ಪಠಣದೊಂದಿಗೆ ಆರಂಭಗೊಂಡಿತು. ಅಗ್ನಿಹೋತ್ರದ ಮೂಲಕ ವಿಶ್ವಶಾಂತಿ, ಉತ್ತಮ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಸಮಾಜದ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಬಳಿಕ ಯೋಗಗುರುಗಳಿಗೆ ಗೌರವ ಸಮರ್ಪಿಸಿ, ಗುರುಗಳ ಮಾರ್ಗದರ್ಶನದ ಮಹತ್ವವನ್ನು ವಿವರಿಸಲಾಯಿತು. ಯೋಗಬಂಧುಗಳು ಭಕ್ತಿಗೀತೆಗಳು ಹಾಗೂ ನೃತ್ಯ ಪ್ರದರ್ಶನ ನೀಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸರಸ್ವತಿ ಅಕ್ಕ, “ಗುರುವಿನ ಆಶೀರ್ವಾದದಿಂದ ಜೀವನ ಸಾರ್ಥಕವಾಗುತ್ತದೆ. ಭಾರತಮಾತೆಯ ಸೇವೆಯಿಂದ ಜನ್ಮ ಧನ್ಯವಾಗುತ್ತದೆ. ಯೋಗವು ಕೇವಲ ವ್ಯಾಯಾಮವಲ್ಲ; ಅದು ಉತ್ತಮ ಆರೋಗ್ಯ, ಉತ್ತಮ ಚಿಂತನೆ, ಉತ್ತಮ ವ್ಯಕ್ತಿತ್ವ ಹಾಗೂ ರಾಷ್ಟ್ರ ನಿರ್ಮಾಣದ ಮಾರ್ಗವಾಗಿದೆ. ಪ್ರತಿಯೊಬ್ಬರೂ ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡು, ಗುರುಗಳ ಆದರ್ಶಗಳನ್ನು ಅನುಸರಿಸಿ ಭಾರತಮಾತೆಯ ಸೇವೆಗೆ ಸದಾ ಸಿದ್ಧರಾಗಿರಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಕನೂರು ಶಾಖೆಯ ಯೋಗ ಸಂಚಾಲಕರಾದ ಚಿದಾನಂದ ಪತ್ತಾರ ಮಾತನಾಡಿ, “ಗುರುಪೂರ್ಣಿಮೆ ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನ, ಶಿಸ್ತು ಮತ್ತು ಮೌಲ್ಯಗಳ ಪ್ರತೀಕವಾಗಿದೆ. ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಗುರುಗಳ ಮಾರ್ಗದರ್ಶನ ಅತ್ಯಂತ ಅಗತ್ಯವಾಗಿದೆ” ಎಂದರು.
ಜಗದ್ಗುರು ತೋಂಟದಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಬೋಜರಾಜು ಸೊಪ್ಪಿಮಠ ಮಾತನಾಡಿ, ಗುರುಪೂರ್ಣಿಮೆಯ ಮಹತ್ವವನ್ನು ವಿವರಿಸಿ, ಮಹರ್ಷಿ ವೇದವ್ಯಾಸರ ಭಾರತೀಯ ಸಂಸ್ಕೃತಿಗೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿದರು. ಆಷಾಢ ಪೌರ್ಣಿಮೆಯಂದು ಆಚರಿಸುವ ಈ ದಿನವನ್ನು ವ್ಯಾಸಪೂರ್ಣಿಮೆ ಎಂದೂ ಕರೆಯಲಾಗುತ್ತದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯತ ಸದಸ್ಯ ಸಿದ್ದಲಿಂಗಯ್ಯ ಉಳ್ಳಾಗಡ್ಡಿ ಮಾತನಾಡಿ, ಯೋಗದ ಮೂಲಕ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆ ಸಾಧಿಸುವ ಜೊತೆಗೆ ಗುರು-ಶಿಷ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಇಂದಿನ ಯುವಪೀಳಿಗೆಗೆ ಗುರುಗಳ ಮಾರ್ಗದರ್ಶನದ ಮಹತ್ವವನ್ನು ತಿಳಿಸುವುದು ಅಗತ್ಯ ಎಂದು ಹೇಳಿದರು.
ಸಮಾಜ ಸೇವಕರು ಹಾಗೂ ಯೋಗ ಬಂಧುಗಳಾದ ಮಹಾದೇವಿ ಕಂಬಳಿ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿಯೂ ಗುರುಗಳ ಮಾರ್ಗದರ್ಶನದ ಅಗತ್ಯತೆ ಕಡಿಮೆಯಾಗಿಲ್ಲ. ಉತ್ತಮ ಸಂಸ್ಕಾರ, ಶಿಸ್ತು, ದೇಶಭಕ್ತಿ, ಸೇವಾಭಾವ, ಮಾನವೀಯತೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಗುರುಗಳ ಪಾತ್ರ ಅಪಾರವಾಗಿದೆ.ಗುರುಗಳಿಗೆ ಗೌರವ ಮತ್ತು ಕೃತಜ್ಞತೆ ಸಲ್ಲಿಸೋಣ.ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಮಾತನಾಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲ ಯೋಗಬಂಧುಗಳು ಹಾಗೂ ಭಕ್ತರು ಸಹಭೋಜನದಲ್ಲಿ ಪಾಲ್ಗೊಂಡು ಸ್ನೇಹ, ಸೌಹಾರ್ದತೆ ಮತ್ತು ಸೇವಾ ಮನೋಭಾವವನ್ನು ಮತ್ತಷ್ಟು ಬಲಪಡಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಸೇವಾ ಪ್ರಮುಖರಾದ ಶಾಂತರಾಜ ಅಣ್ಣ, ಯೋಗಬಂಧುಗಳಾದ ಪ್ರಭು ಒಕ್ಕಳದ, ಸಿದ್ಧಾರೂಢ ಬಣ್ಣದಬಾವಿ, ಯಲ್ಲಪ್ಪ ಹಳ್ಳದ, ಶಾರದ ಅಕ್ಕ, ಉಮಾ ಗುಡ್ಲಾನೂರು ಅಕ್ಕ ಸೇರಿದಂತೆ ಅನೇಕ ಯೋಗಬಂಧುಗಳು ಉಪಸ್ಥಿತರಿದ್ದರು.
ವರದಿಗಾರರು: ಚನ್ನಯ್ಯ ಹಿರೇಮಠ, ಕುಕನೂರು



