
*ಸಚಿವ ಸ್ಥಾನದಲ್ಲಿ ಕುಳಿತು ಒಂದು ಧರ್ಮವನ್ನು ಶ್ರೇಷ್ಠ ಎನ್ನೋದು ಎಷ್ಟು ಸರಿ : ಬಸವರಾಜ ಗೌರಾ,,?*

ಕುಕನೂರು : ಕೊಪ್ಪಳ ಜಿಲ್ಲೆಯ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಅವರು ಕುಕನೂರಿನಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ “ಬೇರೆ ಎಲ್ಲ ಧರ್ಮಗಳಿಗಿಂತ ಇಸ್ಲಾಂ ಧರ್ಮವೇ ಶ್ರೇಷ್ಠ, ನಾನು ದೇವಸ್ಥಾನ-ಮಠಗಳಿಗೆ ಹೋಗುವುದಿಲ್ಲ, ಹಜ್ ಯಾತ್ರೆಗೆ ಹೋಗುವ ಆಸೆ ಇದೆ” ಎಂದು ಹೇಳಿರುವುದು ಅತ್ಯಂತ ಖಂಡನೀಯ ಎಂದು ಭಾರತೀಯಾ ಜನತಾ ಪಾರ್ಟಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ರಾಜ್ಯ ಕಾರ್ಯಕಾರಣಿ ಸದಸ್ಯರಾದ
ಬಸವರಾಜ ಗೌರ ಅವರು ಪ್ರಶ್ನಿಸಿದರು.
ಅವರು ಸೋಮವಾರದಂದು ಮಾಧ್ಯಮದೊಂದಿಗೆ ಮಾತನಾಡಿ ನೀವು ಒಬ್ಬ ಸಚಿವರು, ಸಂವಿಧಾನದ ಮೇಲೆ ಪ್ರಮಾಣ ಮಾಡಿದವರು. ಸಂವಿಧಾನ ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣಬೇಕು ಎಂದು ಹೇಳುತ್ತದೆ, ಒಂದು ಧರ್ಮವನ್ನು ಇನ್ನೊಂದಕ್ಕಿಂತ ಶ್ರೇಷ್ಠ ಎಂದು ಬಿಂಬಿಸುವುದು ನಿಮಗೆ ಶೋಭೆಯಲ್ಲ. ನಿಮ್ಮ ಖಾತೆ ಉನ್ನತ ಶಿಕ್ಷಣ, ನೀವು ವಿದ್ಯಾರ್ಥಿಗಳಿಗೆ ಸರ್ವಧರ್ಮ ಸಮಭಾವ ಕಲಿಸಬೇಕಾದವರು, ಆದರೆ ನೀವು ವೇದಿಕೆಯ ಮೇಲೆ ಒಂದು ಸಮುದಾಯವನ್ನು ಓಲೈಸಲು ಇನ್ನೊಂದು ಸಮುದಾಯವನ್ನು ಕಡೆಗಣಿಸುವ ಮಾತನಾಡಿದ್ದೀರಿ.
ನೀವು ದೇವಸ್ಥಾನಕ್ಕೆ ಹೋಗುವುದಿಲ್ಲ ಎಂದು ಹೇಳಿ ಹಿಂದೂ ಧರ್ಮದ ಕೋಟ್ಯಾಂತರ ಭಕ್ತರ ಭಾವನೆಗೆ ಧಕ್ಕೆ ತಂದಿದ್ದೀರಿ. ಈ ನಾಡು ಬಸವಣ್ಣನವರ ನಾಡು, ಎಲ್ಲ ಧರ್ಮವನ್ನು ಗೌರವಿಸುವ ನಾಡು. ಆದರೆ ಸಚಿವರಾಗಿಯೇ ಇಂತಹ ವಿವಾದಾತ್ಮಕ ಹೇಳಿಕೆ ನೀಡಿ ರಾಜ್ಯದಲ್ಲಿ ಧರ್ಮ-ಧರ್ಮಗಳ ನಡುವೆ ಗೊಂದಲ ಸೃಷ್ಟಿಸುವುದು ಸರಿಯಲ್ಲ.
ನೀವು ಕುರಾನ್ ಓದಲು ತಯಾರಿದ್ದೇನೆ ಎನ್ನುವುದು ನಿಮ್ಮ ವೈಯಕ್ತಿಕ ವಿಷಯ, ಆದರೆ ಸರ್ಕಾರಿ ವೇದಿಕೆಯಿಂದ “ಈ ಧರ್ಮವೇ ಶ್ರೇಷ್ಠ” ಎಂದು ಹೇಳುವುದು ತುಷ್ಟೀಕರಣದ ರಾಜಕಾರಣವಲ್ಲದೆ ಇನ್ನೇನು,,? ಎಂದು ಪ್ರಶ್ನಿಸಿದ ಅವರು ಈ ಕೂಡಲೇ ನೀವು ನಿಮ್ಮ ಹೇಳಿಕೆಯನ್ನು ಹಿಂಪಡೆದು, ಕನ್ನಡ ನಾಡಿನ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.



