

*ಪಠ್ಯದ ಜತೆಗೆ ಕ್ರೀಡೆಗೂ ಆದ್ಯತೆ ನೀಡಿ: ಉದಯ್ ರಾಯರೆಡ್ಡಿ*
*ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ*

ಕುಕನೂರು: ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಪರಸ್ಪರ ಸಹಕಾರದ ಮನೋಭಾವ ಬೆಳೆಸುವಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ. ಪಠ್ಯದ ಜತೆಗೆ ಕ್ರೀಡೆಗೂ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು ಎಂದು ಯುವ ಮುಖಂಡ, ಶಿಕ್ಷಣ ಪ್ರೇಮಿ ಹಾಗೂ ಕ್ರೀಡಾ ಪ್ರೋತ್ಸಾಹದಾನಿ ಉದಯ್ ರಾಯರೆಡ್ಡಿ ಹೇಳಿದರು.
ತಾಲೂಕಿನ ತಳಕಲ್ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2026–27ನೇ ಸಾಲಿನ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ ವಿವಿಧ ಪದವಿ ಪೂರ್ವ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡು ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು. ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಸದೃಢತೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತದೆ ಎಂದು ಉದಯ್ ರಾಯರೆಡ್ಡಿ ತಿಳಿಸಿದರು.
*ಸೋಲು-ಗೆಲುವಿಗಿಂತ ಕ್ರೀಡಾ ಮನೋಭಾವ ಮುಖ್ಯ: ತಿಮ್ಮಣ್ಣ ಚೌಡ್ಕಿ*
ಕೃಷಿ ವಿಶ್ವವಿದ್ಯಾಲಯ, ರಾಯಚೂರು ಆಡಳಿತ ಮಂಡಳಿ ಸದಸ್ಯ ತಿಮ್ಮಣ್ಣ ಚೌಡ್ಕಿ ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುವುದರೊಂದಿಗೆ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆದರೆ ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಭಾಗವಹಿಸುವುದು ಅತ್ಯಂತ ಮುಖ್ಯ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಕಾಲೇಜು, ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಹಾರೈಸಿದರು.
*ಕ್ರೀಡೆ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ: ವೀರನಗೌಡ ಚನ್ನವೀರಗೌಡ್ರು*
ಪಿಡಿಒ ವೀರನಗೌಡ ಚನ್ನವೀರಗೌಡ್ರು ಮಾತನಾಡಿ, ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಕ್ರೀಡೆಯು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತರುವ ಉತ್ತಮ ವೇದಿಕೆಯಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ಅಗತ್ಯ ಸಹಕಾರ ಹಾಗೂ ಅನುಕೂಲತೆಗಳನ್ನು ಕಲ್ಪಿಸಲಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಾವು ಕಲಿತ ಕಾಲೇಜು ಹಾಗೂ ಕೊಪ್ಪಳ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶಿವಲೀಲಾ ಹಿರೇಮಠ, ಶರಣಪ್ಪ ಅರಕೇರಿ, ಮಾರುತಿ ಲಕಮಪುರ, ಮಹದೇವಪ್ಪ ಮುಲಿಮನಿ, ಸಿಡಿಸಿ ಸದಸ್ಯರಾದ ಶಿವು ಕೆಂಚರೆಡ್ಡಿ, ನಿಂಗಪ್ಪ ಗುಡಗೇರಿ, ವಿಜಯಲಕ್ಷ್ಮಿ ಮಲ್ಲಾಪುರ, ಗಂಗಾಧರ ಅವಟೆರ್, ಬಸಮ್ಮ ಮೇಟಿ, ತಿಮ್ಮಣ್ಣ ಚವಡಿ, ವೀರಯ್ಯ ಬಸಯ್ಯ ಹುಗ್ಗಿ, ಮಹಮ್ಮದ್ ಸಿರಾಜುದ್ದೀನ್ ಕೊಪ್ಪಳ, ಮುದಿಯಪ್ಪ ಎಸ್. ಚಲವಾದಿ, ಶಿಕ್ಷಕರಾದ ಚಂದ್ರು ರಾಜೂರು, ಹನುಮಂತಗೌಡ ದಾದ್ಮಿ, ಉಮೇಶ ಕಂಬಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ :- ಚನ್ನಯ್ಯ ಹಿರೇಮಠ. ಕುಕನೂರು.




