

ಗುದ್ನೆಪ್ಪನ ಮಠದ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರ: ಸೇವಾದಾರರ ಸ್ಪಷ್ಟನೆ
ಕುಕನೂರು, ಜು.29: ಗುದ್ನೆಪ್ಪನ ಮಠದ ಜಮೀನು, ಅತಿಕ್ರಮ ಮನೆಗಳ ನಿರ್ಮಾಣ ಹಾಗೂ ಅಕ್ರಮ ಗಣಿಗಾರಿಕೆ ಕುರಿತು ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಡಲಾದ ಆರೋಪಗಳನ್ನು ಗುದ್ನೆಪ್ಪನ ಮಠದ ಸೇವಾದಾರರು ತಳ್ಳಿಹಾಕಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣವು ಈಗಾಗಲೇ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ನ್ಯಾಯಾಲಯದ ಆದೇಶಗಳಿಗೆ ತಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
1981ರಲ್ಲಿ ಭೂ ನ್ಯಾಯ ಮಂಡಳಿಯಿಂದ ಮಠದ ಸೇವಾದಾರರಿಗೆ ಜಮೀನು ಮಂಜೂರಾಗಿದ್ದು, ಅದರ ಕುರಿತು ನ್ಯಾಯಾಲಯದಲ್ಲಿಯೂ ವಿಚಾರಣೆ ನಡೆದಿರುವುದಾಗಿ ತಿಳಿಸಿದರು. ಕೆಲವರು ನ್ಯಾಯಾಲಯದ ಆದೇಶಗಳನ್ನು ತಪ್ಪಾಗಿ ಅರ್ಥೈಸಿ ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಠದ ಸುತ್ತಮುತ್ತ ಇರುವ ಮನೆಗಳು ಬಹುತೇಕ ಸೇವಾದಾರರು ಹಾಗೂ ಪೂಜಾರಿಗಳ ಕುಟುಂಬಗಳಿಗೆ ಸೇರಿದವುಗಳಾಗಿದ್ದು, ಇವು ಹಲವು ವರ್ಷಗಳಿಂದ ಅಸ್ತಿತ್ವದಲ್ಲಿವೆ. ಅಕ್ರಮವಾಗಿ ಮನೆಗಳನ್ನು ನಿರ್ಮಿಸಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸರ್ವೇ ನಂಬರ್ 78ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪವನ್ನೂ ಅವರು ತಳ್ಳಿಹಾಕಿದರು. ಒಂದು ವೇಳೆ ಅಂತಹ ಚಟುವಟಿಕೆ ನಡೆಯುತ್ತಿದೆ ಎಂಬುದಕ್ಕೆ ದಾಖಲೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು. ಅಲ್ಲದೆ, ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಆಯ್ಕೆ ಮಾಡಿರುವ ಸ್ಥಳದ ಸಮೀಪವೇ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದ್ದು, ಸುರಕ್ಷಿತ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಸೂಕ್ತ ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಆಧಾರರಹಿತ ಆರೋಪಗಳನ್ನು ಮಾಡುವುದಕ್ಕಿಂತ ನ್ಯಾಯಾಲಯದ ಆದೇಶಗಳನ್ನು ಸರಿಯಾಗಿ ಅಧ್ಯಯನ ಮಾಡಿ ಸತ್ಯಾಂಶವನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಸೇವಾದಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ
ಶರಣಯ್ಯ ಹಳೇಮನಿ, ಯುವರಾಜ ಗಲಬಿ, ಚಂದ್ರು ಯಳವತ್ತಿ, ಪ್ರಕಾಶ ನಾಗಣ್ಣವರ, ಶೇಖರಯ್ಯ ಹುಣಸೆಮರದ, ಮಂಜುನಾಥ ಹಿರೇಮಠ ಇದ್ದರು.
ವರದಿ ಚನ್ನಯ್ಯ ಹಿರೇಮಠ ಕುಕನೂರು

