
*ವಿದ್ಯುತ್ ಶಾಟ್ ಸರ್ಕ್ಯೂಟ್ : ಜಿಪಿಐ ಮೊಬೈಲ್ ಅಂಗಡಿಯಲ್ಲಿ ಅಪಾರ ಪ್ರಮಾಣದ ಮೊಬೈಲ್, ಟಿವಿ ಸುಟ್ಟು ಕರಕಲು,,*
*ಸರಕಾರ ನೆರವಿಗೆ ಬರುವಂತೆ ಸಾರ್ವಜನಿಕರ ಆಗ್ರಹ,,*
ಕುಕನೂರು : ಪಟ್ಟಣದ ಬಸ್ ನಿಲ್ದಾಣದ ಹತ್ತಿರವಿರುವ ಜಿಪಿಐ ಮೊಬೈಲ್ ಮತ್ತು ಅಪ್ಪ್ಲೈನ್ಸೆಸ್ ಅಂಗಡಿಯಲ್ಲಿ ರವಿವಾರ ನಸುಕಿನ ಐದು ಗಂಟೆಯಲ್ಲಿ ವಿದ್ಯುತ್ ಶಾಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಹೊತ್ತಿಕೊಂಡಿದ್ದು ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿದೆ.
ಅಂಗಡಿಯೊಳಗೆ ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಅಂಗಡಿ ಸಂಪೂರ್ಣ ಹೊಗೆ ಮಯವಾಗಿ ವಸ್ತುಗಳ ಸ್ಪೋಟವಾಗುತ್ತಿದ್ದಂತೆ ಸ್ಥಳೀಯರು ಅಗ್ನಿ ಶಾಮಕಕ್ಕೆ ಕರೆ ಮಾಡಿದ್ದಾರೆ. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಅಗ್ನಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಗ್ನಿ ಶಾಮಕದವರು ಸರಿಯಾದ ಸಮಯಕ್ಕೆ ಆಗಮಿಸಿದ್ದರಿಂದ ಮುಂದೆ ಆಗುವ ದೊಡ್ಡ ಅಗ್ನಿ ದುರಂತವನ್ನು ತಪ್ಪಿಸಿದಂತಾಗಿದೆ.
ಅಗ್ನಿ ಅನಾಹುತದಲ್ಲಿ ವಿವಿಧ ಕಂಪನಿಯ 30 ಹೊಸ ಮೊಬೈಲ್ ಗಳು ಹಾಗೂ 6 ಎಲ್ಇಡಿ ಟಿವ್ಹಿ, 6ಮಿಕ್ಸಿ, 10 ಫ್ಯಾನ್, ಸಿಸಿ ಕ್ಯಾಮರಾ, ಸೇರಿದಂತೆ ಮೊಬೈಲ್ ಬಿಡಿಭಾಗಗಳು, ವಿದ್ಯುತ್ ಶಾಟ್ ಸರ್ಕ್ಯೂಟ್ ನಿಂದಾಗಿ ಅಂದಾಜು ಸುಮಾರು 25 ಲಕ್ಷದಷ್ಟು ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಅಂಗಡಿಯು ತಾಲ್ಲೂಕಿನ ನಿಟ್ಟಾಲಿ ಗ್ರಾಮದ ಶಿವರಾಜ ಪಂಪಣ್ಣ ಹಿಕ್ಕೇರಿಯವರದಾಗಿದ್ದು, ಇತ್ತೀಚಿಗೆ ಜಮೀನು ಮಾರಿ ಬಂದ ಹಣದಿಂದ ಅಂಗಡಿಯನ್ನು ಪ್ರಾರಂಭಿಸಿದ್ದು, ಈ ಘಟನೆಯಿಂದ ಶಿವರಾಜ ಅವರಿಗೆ ಆಕಾಶ ಕಳಚಿ ಬಿದ್ದಂತಾಗಿದೆ.
ಜೀವನೋಪಾಯಕ್ಕಾಗಿ ನೂತನ ಅಂಗಡಿ ಪ್ರಾರಂಭಿಸಿದ್ದ ಶಿವರಾಜನಿಗೆ ಈ ಘಟನೆ ದಿಕ್ಕು ತೊಚದಂತಾಗಿ ಮುಂದಿನ ದಾರಿ ತಿಳಿಯದೇ ಚಿಂತಾಕ್ರಾಂತನರಾಗಿದ್ದಾರೆ.
ಇವರಿಗೆ ಸರಕಾರ ಹಾಗೂ ಜನಪ್ರತಿನಿಧಿಗಳು ನೆರವಿಗೆ ಬರಬೇಕು, ಸಹಾಯ ಹಸ್ತ ಚಾಚಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ ಚನ್ನಯ್ಯ ಹಿರೇಮಠ ಕುಕನೂರ



