

*27ನೇ ಕಾರ್ಗಿಲ್ ವಿಜಯೋತ್ಸವ,,*
*ಬನ್ನಿಕೊಪ್ಪ ದೇಶ ಭಕ್ತರ ನಾಡು, ಸೈನಿಕರ ನೆಲೆಬೀಡು : ಮಾಜಿ ಸೈನಿಕ ನಾಗರಾಜ ವೆಂಕಟಾಪುರ*
ಕುಕನೂರು : ದೇಶ ಭಕ್ತರ ಗ್ರಾಮ ಎಂದೇ ಕರೆಸಿಕೊಳ್ಳುವ ಬನ್ನಿಕೊಪ್ಪ ಗ್ರಾಮದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ, ಸೈನಿಕರ ಹಾಗೂ ರೈತರ ಸ್ಮಾರಕದ ಉದ್ಯಾನದಲ್ಲಿ 27ನೇಯ ಕಾರ್ಗಿಲ್ ವಿಜಯೋತ್ಸವದ ಪೂಜೆ, ಮಂಗಳಾರತಿಯೊಂದಿಗೆ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ವೇಳೆ ಮಾಜಿ ಸೈನಿಕ ಹಾಗೂ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಾಗರಾಜ ವೆಂಕಟಾಪುರ ಮಾತನಾಡಿ ಬನ್ನಿಕೊಪ್ಪ ಗ್ರಾಮವು 26 ಜನ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು 28 ಜನ ವೀರ ಯೋಧರನ್ನು ನಾಡಿನ ಅನನ್ಯ ಸೇವೆಗೆ ಕೊಡುಗೆ ನೀಡಿದ ವಿಶಿಷ್ಟ ಗ್ರಾಮವಾಗಿ, ಜಿಲ್ಲೆಯಲ್ಲಿ ಹಿರಿಮೆಯನ್ನು ಹೊಂದಿದೆ ಎಂದರು.
ಗ್ರಾಮದಲ್ಲಿ ನಿರ್ಮಾಣವಾದ ಸ್ವಾತಂತ್ರ್ಯ ಹೋರಾಟಗಾರರ ಸೈನಿಕರ ಹಾಗೂ ರೈತರ ಸ್ಮಾರಕ ನಮ್ಮೂರಿನ ಹೆಮ್ಮೆ ಎಂದು ಹೇಳುತ್ತಾ ಕಾರ್ಗಿಲ್ ಯುದ್ಧದ ಕುರಿತು ತಮ್ಮ ಸೇನೆಯಲ್ಲಿನ ಅನುಭವವನ್ನು ಎಳೆಯಾಗಿ ವಿವರಿಸಿದರು.
ಯುವಕರು ಸೇನೆಗೆ ಸೇರಲು ಏನೇನು ಮಾಡಬೇಕು ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗಿ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಗ್ರಾಮದ ಹಿರಿಯರು ಹಾಗೂ ಮಾಜಿ ಸೈನಿಕರಾದ ಬಸವರಾಜ ಮಾಳೆಕೊಪ್ಪ ಅವರು ಸೈನಿಕ ಸೇವೆಯಲ್ಲಿನ ಕಠಿಣ ಪರಸ್ಥಿತಿ ಮತ್ತು ಕಾರ್ಗಿಲ್ ಯುದ್ಧದ ಬಗ್ಗೆ ಬೆಳಕು ಚೆಲ್ಲಿದರು.
ನಂತರ ಗ್ರಾಮದ ಆದರ್ಶಪ್ರಾಯ ದೈಹಿಕ ಶಿಕ್ಷಕರಾದ ಸಂಗನಗೌಡ. ಎಸ್ ವೀರಪ್ಪಗೌಡರ್ ಮಾತನಾಡಿ ಮಕ್ಕಳು ಉತ್ತಮ ಆರೋಗ್ಯ ಮತ್ತು ಸರಿಯಾದ ರೂಢಿಗಳನ್ನು ಬೆಳೆಸಿಕೊಂಡರೆ ಅವರೇ ಮುಂದೆ ದೇಶದ ಸೈನಿಕರಾಗುವರು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಕರ ವಸೂಲಿಗಾರ ನಾರಾಯಣ ದೊಡ್ಡಮನಿಯವರು ಸುಸೂತ್ರವಾಗಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಹಿರಿಯ ರೈತರಾದ ಚನ್ನಪ್ಪ ಗೊಂದಿ, ಹಾಗೂ ಇತ್ತೀಚಿಗೆ ನಿವೃತ್ತರಾದ ಕಾಲೇಜು ಉಪನ್ಯಾಸಕರಾದ ಗಿರಿಜಾ ಕನ್ನಾರಿ ಹಾಗೂ ನಿವೃತ್ತ KSRTC ಕೆಎಸ್ಆರ್ ಟಿಸಿ ಸಂಚಾರಿ ನಿಯಂತ್ರಕ ವೆಂಕಣ್ಣ ಯರಾಶಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸೈನಿಕರು ಗುರು, ಹಿರಿಯರು, ತಾಯಂದಿರು, ಯುವಕ ಮಿತ್ರರು ಹಾಗೂ ಮುದ್ದು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡು ಭಾರತ ಮಾತಾ ಕೀ ಜೈ, ವಂದೇ ಮಾತರಂ, 27ನೇ ಕಾರ್ಗಿಲ್ ವಿಜಯೋತ್ಸವಕ್ಕೆ ಜಯವಾಗಲಿ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ಜಯವಾಗಲಿ, ಬನ್ನಿಕೊಪ್ಪದ ವೀರ ಯೋಧರಿಗೆ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಜಯವಾಗಲಿ, ಬನ್ನಿಕೊಪ್ಪದ ರೈತರಿಗೆ ಜಯವಾಗಲಿ ಮತ್ತು ಬನ್ನಿಕೊಪ್ಪ ಚಿರಾಯುವಾಗಲಿ ಎಂದು ಮುಂತಾದ ಜಯಘೋಷಗಳೊಂದಿಗೆ ಕಾರ್ಯಕ್ರಮವನ್ನು ದೇಶಭಕ್ತಿಯೊಂದಿಗೆ ಯಶಸ್ವಿಗೊಳಿಸಿದರು.
ವರದಿ ಚನ್ನಯ್ಯ ಹಿರೇಮಠ ಕುಕುನೂರು


