
*ಭರ್ಜರಿ ಕಾರ್ಯಾಚರಣೆ,,! 48 ಗಂಟೆಗಳಲ್ಲಿ ಕುರಿ-ಮೇಕೆ ಕಳ್ಳತನ ಪ್ರಕರಣ ಭೇದಿಸಿದ ಕುಕನೂರು ಪೊಲೀಸರು..!*

*ಮೂವರು ಆರೋಪಿಗಳ ಬಂಧನ; ₹4.25 ಲಕ್ಷ ಮೌಲ್ಯದ 38 ಕುರಿ-ಮೇಕೆಗಳು ಹಾಗೂ ಬೊಲೆರೊ ಪಿಕಪ್ ಜಪ್ತಿ,,*
ಕುಕನೂರು : ತಾಲೂಕಿನ ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕುರಿ-ಮೇಕೆ ಕಳವು ಪ್ರಕರಣವನ್ನು ಪೊಲೀಸರು ಕೇವಲ 48 ಗಂಟೆಗಳಲ್ಲಿ ಭೇದಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹4.25 ಲಕ್ಷ ಮೌಲ್ಯದ 38 ಕುರಿ-ಮೇಕೆಗಳು ಹಾಗೂ ಕಳುವಿಗೆ ಬಳಸಿದ್ದ ಬೊಲೆರೊ ಪಿಕಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಜುಲೈ 22ರಂದು ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆಗೆ ತಿಮ್ಮಾಪುರ ಗ್ರಾಮದ ಭೀಮರಾಜ್ ಹುಡಿಚಪ್ಪ ಕಡಗತ್ತಿ ಅವರಿಗೆ ಸೇರಿದ ಕುರಿ-ಮೇಕೆಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಕುಕನೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 85/2026ರಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಕುಕನೂರು ಠಾಣೆಯ ಪಿಎಸ್ಐ ಎಸ್. ಪಿ ನಾಯ್ಕ್ ಅವರು ತ್ವರಿತ ಕಾರ್ಯಾಚರಣೆ ನಡೆಸಿ, ಜುಲೈ 23ರಂದು ಆರೋಪಿಗಳಾದ ಬಾಪಣ್ಣ ಹುನೋಜಪ್ಪ ಅರುಣ್‌ಶಿಕಾರಿ (ತಿಮ್ಮಾಪುರ), ಚನ್ನಪ್ಪ ಹುನೋಜಪ್ಪ ಅರುಣ್‌ಶಿಕಾರಿ (ಯರೇಹಂಚಿನಾಳ) ಹಾಗೂ ಚಂದಪ್ಪ ಸಿದ್ದಪ್ಪ ಅರುಣ್‌ಶಿಕಾರಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಆರೋಪಿಗಳಿಂದ ಎರಡು ಟಗರು, ಒಂದು ಹೋತ, 21 ಕುರಿಗಳು ಹಾಗೂ 14 ಮೇಕೆಗಳು ಸೇರಿ ಒಟ್ಟು 38 ಕುರಿ-ಮೇಕೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಲ್ಲದೇ ಕೃತ್ಯಕ್ಕೆ ಬಳಸಿದ್ದ ಬೊಲೆರೊ ಪಿಕಪ್ ವಾಹನವನ್ನು ಜಪ್ತಿ ಮಾಡಲಾಗಿದೆ. ಜಪ್ತಿಯಾದ ಸ್ವತ್ತುಗಳ ಒಟ್ಟು ಮೌಲ್ಯ ₹4.25 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಿಸಿದ್ದಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್ ಹಾಗೂ ಕೊಪ್ಪಳ ಉಪವಿಭಾಗದ ಡಿವೈಎಸ್ಪಿ ಮುತ್ತಣ್ಣ ಸರ್ವಗೋಳ ಅವರ ಮಾರ್ಗದರ್ಶನದಲ್ಲಿ, ಯಲಬುರ್ಗಾ ವೃತ್ತದ ಸಿಪಿಐ ಮೌನೇಶ್ವರ ಮಾಲಿಪಾಟೀಲ್ ಅವರ ಮುಂದಾಳತ್ವದಲ್ಲಿ, ಕುಕನೂರು ಪೊಲೀಸ್ ಠಾಣೆಯ ಪಿಎಸ್ಐ ಎಸ್.ಪಿ. ನಾಯ್ಕ್ ಅವರ ನೇತೃತ್ವದ ತಂಡದರಾದ ಎಎಸ್ಐ ಅಬ್ದುಲ್ ಖಾದರ್, ವೆಂಕಟೇಶ್ HC 74, ಸರ್ವೇಶ್ HC 26, ಮೆಹಬೂಬ್ HC 81, ವಿನೋದ್ HC 166, ಮಂಜುನಾಥ್ PC 137, ಅರ್ಜುನ್ PC 464, ರವರು ಈ ಪ್ರಕರಣವನ್ನು ಚಾಕಚಕ್ಯತೆಯಿಂದ ಭೇದಿಸಿದೆ.
ಕಳುವಾದ ಕುರಿ-ಮೇಕೆಗಳನ್ನು ಅಲ್ಪಾವಧಿಯಲ್ಲೇ ಪತ್ತೆಹಚ್ಚಿ, ಆರೋಪಿಗಳನ್ನು ಬಂಧಿಸಿ ಸಂಪೂರ್ಣ ಸ್ವತ್ತನ್ನು ವಶಪಡಿಸಿಕೊಂಡ ಕುಕನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆ ಶ್ಲಾಘಿಸಿದೆ.
ವರದಿ ಚನ್ನಯ್ಯ ಹಿರೇಮಠ ಕುಕುನೂರು




