

ವಡ್ಡರಹಟ್ಟಿ ಗ್ರಾಮ ಪಂಚಾಯಿತಿಯಲ್ಲಿ ನ.02 ರಿಂದ ಇ-ಸ್ವತ್ತು ಅಭಿಯಾನ ಆರಂಭ
ಆಸ್ತಿ ಮಾಲೀಕರು ನಮೂನೆ-11ಎ ಮತ್ತು 11ಬಿ ದಾಖಲೆಗಳನ್ನು ಪಡೆದುಕೊಳ್ಳಲು ವಡ್ಡರಹಟ್ಟಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಮನವಿ
*ಗಂಗಾವತಿ* : ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದ ಮೇರೆಗೆ ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ
ನವೆಂಬರ್ 02 ರಿಂದ ಇ-ಸ್ವತ್ತು ಅಭಿಯಾನ ಆರಂಭವಾಗಲಿದ್ದು, ಇ-ಸ್ವತ್ತು ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ವಸತಿ ಹಾಗೂ ವಾಣಿಜ್ಯ ಆಸ್ತಿಗಳನ್ನು ಗುರುತಿಸಿ, ಆಸ್ತಿಗಳ ಮಾಲೀಕತ್ವ ಮತ್ತು ಇತರೆ ವಿವರಗಳನ್ನು ಪರಿಶೀಲಿಸಿ, ನಿಯಮಾನುಸಾರ ನಮೂನೆ-11ಎ ಹಾಗೂ ನಮೂನೆ-11ಬಿ ಆಸ್ತಿ ದಾಖಲೆಗಳನ್ನು ಸಿದ್ಧಪಡಿಸಿ ವಿತರಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.
ಸರ್ಕಾರದ ಮಾರ್ಗಸೂಚಿಯಂತೆ ಆಸ್ತಿ ದಾಖಲೆಗಳ ಡಿಜಿಟಲೀಕರಣ, ಆಸ್ತಿ ತೆರಿಗೆ ನಿರ್ಧರಣೆ, ದಾಖಲೆಗಳಲ್ಲಿನ ಲೋಪದೋಷಗಳ ಸರಿಪಡಿಸುವಿಕೆ ಹಾಗೂ ಸಾರ್ವಜನಿಕರಿಗೆ ಪಾರದರ್ಶಕ ಸೇವೆ ಒದಗಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಸ್ತಿ ಮಾಲೀಕರು ತಮ್ಮ ಆಸ್ತಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಿ, ತಮ್ಮ ಆಸ್ತಿಯ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು. ಆಸ್ತಿ ಮಾಲೀಕತ್ವ, ವಿಸ್ತೀರ್ಣ ಹಾಗೂ ಕಟ್ಟಡದ ವಿವರಗಳಲ್ಲಿ ವ್ಯತ್ಯಾಸಗಳಿದ್ದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಲು ಅಗತ್ಯ ಸಹಕಾರ ನೀಡಬೇಕು.
ಸರ್ಕಾರದ ಈ ಮಹತ್ವದ ಅಭಿಯಾನದಿಂದ ಗ್ರಾಮೀಣ ಪ್ರದೇಶದ ಆಸ್ತಿ ದಾಖಲೆಗಳು ವ್ಯವಸ್ಥಿತವಾಗುವುದರ ಜೊತೆಗೆ ಸಾರ್ವಜನಿಕರಿಗೆ ಆಸ್ತಿ ಸಂಬಂಧಿತ ಸೇವೆಗಳು ಸುಲಭವಾಗಿ ದೊರೆಯಲಿವೆ.
ಆದ್ದರಿಂದ ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಸದುಪಯೋಗ ಪಡೆದುಕೊಂಡು, ಗ್ರಾಮ ಪಂಚಾಯಿತಿಯೊಂದಿಗೆ ಸಹಕರಿಸಬೇಕು. ವಡ್ಡರಹಟ್ಟಿ ಗ್ರಾಪಂ ವ್ಯಾಪ್ತಿಯ ಎಲ್ಲ ವಾರ್ಡ್ ಗಳಲ್ಲಿ ಎರಡು ದಿನಕ್ಕೆ ಒಂದೊಂದು ವಾರ್ಡ್ ನಲ್ಲಿ ರಜೆ ದಿನ ಹೊರತು ಪಡಿಸಿ ಅಭಿಯಾನ ನಡೆಸಲಾಗುವುದು. ಅಭಿಯಾನದ ಸದುಪಯೋಗ ಎಲ್ಲರೂ ಪಡೆದುಕೊಳ್ಳುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಮನವಿ ಮಾಡಿದ್ದಾರೆ.




