

*ಒತ್ತಡದ ಜೀವನಕ್ಕೆ ಯೋಗವೇ ಆರೋಗ್ಯದ ಸಂಜೀವಿನಿ: ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ*
*ಸರ್ಕಾರಿ ನೌಕರರ ಸಂಘದಿಂದ ವಿಶೇಷ ಯೋಗ ಶಿಬಿರಕ್ಕೆ ಚಾಲನೆ – ಯೋಗಾಭ್ಯಾಸ ನಿರಂತರವಾಗಿರಲಿ ಎಂದು ಶ್ರೀಗಳ ಕರೆ*
ಕುಕನೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಯಲಬುರ್ಗಾ ತಾಲೂಕು ಶಾಖೆ ಹಾಗೂ ಪತಂಜಲಿ ಯೋಗ ಸಮಿತಿಯ ಸಹಯೋಗದಲ್ಲಿ ಸರ್ಕಾರಿ ಅಧಿಕಾರಿ ಮತ್ತು ನೌಕರರ ಆರೋಗ್ಯದ ಹಿತದೃಷ್ಟಿಯಿಂದ ವಿಶೇಷ ಯೋಗ ಶಿಬಿರದ ಉದ್ಘಾಟನಾ ಸಮಾರಂಭ ಯಲಬುರ್ಗಾ ಪಟ್ಟಣದ ಸಾಯಿ ಪ್ಯಾಲೇಸ್ನಲ್ಲಿ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಧರ ಮುರುಡಿಮಠದ ಪೂಜ್ಯ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳು ಮಾತನಾಡಿ, ಇಂದಿನ ದಿನಗಳಲ್ಲಿ ಸರ್ಕಾರಿ ನೌಕರರು ವಿವಿಧ ರೀತಿಯ ಕೆಲಸದ ಒತ್ತಡಗಳ ನಡುವೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಒತ್ತಡದ ಜೀವನದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಪ್ರತಿಯೊಬ್ಬರೂ ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು. ಯೋಗ ಶಿಬಿರಕ್ಕೆ ಮಾತ್ರ ಸೀಮಿತವಾಗದೆ, ನಿರಂತರವಾಗಿ ಯೋಗಾಭ್ಯಾಸ ಮಾಡುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ಕರೆ ನೀಡಿದರು.
ಪೂಜ್ಯ ಶ್ರೀಗಳೊಂದಿಗೆ ಯೋಗ ಶಿಬಿರವನ್ನು ಉದ್ಘಾಟಿಸಿದ ಪತಂಜಲಿ ಯೋಗ ಸಮಿತಿಯ ತಾಲೂಕು ಪ್ರಭಾರಿಗಳಾದ ಸಂಗಣ್ಣ ಟೆಂಗಿನಕಾಯಿ ಮಾತನಾಡಿ, ಸರ್ಕಾರಿ ನೌಕರರ ಸಂಘವು ನೌಕರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ವಿಶೇಷ ಯೋಗ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂದಿನ ಜೀವನಶೈಲಿಯಲ್ಲಿ ರಕ್ತದೊತ್ತಡ ಹಾಗೂ ಮಧುಮೇಹದಂತಹ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗುತ್ತಿದ್ದು, ಅವುಗಳಿಂದ ದೂರವಿರಲು ಪ್ರತಿಯೊಬ್ಬರೂ ಯೋಗ ಮತ್ತು ವ್ಯಾಯಾಮಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಸಿದ್ದಲಿಂಗಪ್ಪ ಶ್ಯಾಗೋಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನೌಕರರ ಸಂಘದಿಂದ ಈಗಾಗಲೇ ಹಲವಾರು ರಚನಾತ್ಮಕ ಹಾಗೂ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ‘ಶರೀರಮಾದ್ಯಂ ಖಲು ಧರ್ಮಸಾಧನಂ’ ಎಂಬ ಮಾತಿನಂತೆ ಜೀವನದ ಎಲ್ಲಾ ಸಾಧನೆಗಳಿಗೂ ಶರೀರವೇ ಪ್ರಮುಖ ಸಾಧನವಾಗಿದೆ. ವಿವಿಧ ಒತ್ತಡಗಳ ನಡುವೆ ಕಾರ್ಯನಿರ್ವಹಿಸುವ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ತಮ್ಮ ಒತ್ತಡವನ್ನು ನಿವಾರಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬ ಸದುದ್ದೇಶದಿಂದ ಈ ವಿಶೇಷ ಯೋಗ ಶಿಬಿರ ಆಯೋಜಿಸಲಾಗಿದೆ ಎಂದರು.
ಬೆಳಿಗ್ಗೆ 5.30 ಗಂಟೆಗೆ ವಿವಿಧ ಭಾಗಗಳಿಂದ ಹಾಗೂ ಸ್ಥಳೀಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಆಗಮಿಸಿರುವುದು ಸಂತಸದ ಸಂಗತಿಯಾಗಿದೆ. ಇದೇ ಉತ್ಸಾಹದೊಂದಿಗೆ ಪ್ರತಿನಿತ್ಯ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಬೇಕು. ಎಲ್ಲರ ಸಹಕಾರದೊಂದಿಗೆ ಸಂಘಟನೆಯಿಂದ ಇನ್ನಷ್ಟು ಜನಪರ ಹಾಗೂ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಯೋಗ ಶಿಬಿರದ ಯಶಸ್ಸಿಗೆ ಶ್ರಮಿಸಿದ ಹಾಗೂ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಯುಷ್ ಇಲಾಖೆಯ ಲೋಕೇಶ್ ಲಮಾಣಿ ಅವರು ನೌಕರರಿಗೆ ಯೋಗಾಭ್ಯಾಸ ಮಾಡಿಸಿದರು.
ಕಾರ್ಯಕ್ರಮದಲ್ಲಿ ನೌಕರರ ಸಂಘದ ಕಾರ್ಯದರ್ಶಿಗಳಾದ ಸಂಗಯ್ಯ ಹಿರೇಮಠ ಸ್ವಾಗತಿಸಿದರು. ಖಜಾಂಚಿಗಳಾದ ಹಜರತ್ ಅಲಿ, ರಾಜ್ಯ ಪರಿಷತ್ ಸದಸ್ಯರಾದ ಶಿವಪುತ್ರಪ್ಪ ತಿಪ್ಪನಾಳ, ಹಿರಿಯ ಉಪಾಧ್ಯಕ್ಷರಾದ ಕಳಕಮಲ್ಲಪ್ಪ ಅಂತೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ವಿ. ಧರಣಾ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಗದೀಶ ಬಳಿಗಾರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಮುಳಗುಂದ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಶರಣಯ್ಯ ಸರಗಣಾಚಾರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಾಲದಂಡಪ್ಪ ತಳವಾರ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಗೋನಾಳ ಹಾಗೂ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಅಮರೇಶ ಹುಬ್ಬಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕ್ರೀಡಾ ಕಾರ್ಯದರ್ಶಿಗಳಾದ ಪರಮೇಶ ಚಿಂತಾಮಣಿ ಕಾರ್ಯಕ್ರಮ ನಿರೂಪಿಸಿದರು. ಪ್ರಭಯ್ಯ ಬಳಗೇರಿಮಠ ಅವರು ಸ್ವರಚಿತ ಯೋಗ ಗೀತೆಯನ್ನು ಪ್ರಸ್ತುತಪಡಿಸಿದರು. ಮಂಜುನಾಥ ಬೂದಿಹಾಳ ವಂದಿಸಿದರು.
ಸಂಘದ ಪದಾಧಿಕಾರಿಗಳು, ನಿರ್ದೇಶಕರು, ನಾಮನಿರ್ದೇಶಿತ ಸದಸ್ಯರು, ವಿವಿಧ ವೃಂದ ಸಂಘಗಳ ಪದಾಧಿಕಾರಿಗಳು, ಪತಂಜಲಿ ಯೋಗ ಸಮಿತಿ ಹಾಗೂ ಬಸವಲಿಂಗೇಶ್ವರ ಯೋಗ ಸಮಿತಿಯ ಸದಸ್ಯರು ಮತ್ತು ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವರದಿ ಚನ್ನಯ್ಯ ಹಿರೇಮಠ ಕುಕನೂರು




