

*ಕುಕನೂರು ಬರ ಪರಿಸ್ಥಿತಿಯನ್ನು ಜಂಟಿಯಾಗಿ ಅವಲೋಕಿಸಿದ ಸಚಿವರಾದ ಬಸವರಾಜ ರಾಯರಡ್ಡಿ ಹಾಗೂ ಶಿವರಾಜ ತಂಗಡಗಿ,,*
*ಕುಷ್ಟಗಿ, ಕುಕನೂರ, ಯಲಬುರ್ಗಾ ತಾಲೂಕುಗಳಲ್ಲಿ ಸಂಚಾರ,,*
ಕುಕನೂರು : ಕರ್ನಾಟಕ ಸರ್ಕಾರದ ಸಂಪುಟ ದರ್ಜೆ ಸಚಿವರಾಗಿ ತವರು ಜಿಲ್ಲೆಗೆ ಆಗಮಿಸಿರುವ ಸಚಿವರಾದ
ಬಸವರಾಜ ರಾಯರೆಡ್ಡಿ ಹಾಗೂ ಶಿವರಾಜ ಎಸ್. ತಂಗಡಗಿ ಅವರು ಆಗಸ್ಟ್ 6ರಂದು ವಿವಿಧೆಡೆ ಸಂಚರಿಸಿ ಜಂಟಿಯಾಗಿ ಬರ ಪರಿಸ್ಥಿತಿಯನ್ನು ಅವಲೋಕಿಸಿದರು.
ಸಚಿವ ಬಸವರಾಜ ರಾಯರಡ್ಡಿ ಆಗಮಿಸುತ್ತಿದ್ದಂತೆ ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಚಿವ ರಾಯರಡ್ಡಿಯವರಿಗೆ ಪುಷ್ಪ ವೃಷ್ಠಿಯೊಂದಿಗೆ ಸ್ವಾಗತಿಸಿದರು.
ಮಾಜಿ ಸಂಸದರಾದ ಸಂಗಣ್ಣ ಕರಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ ಪಿ ಮೋಹನರಾಜ್, ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಅವರ ಸಮ್ಮುಖದಲ್ಲಿ ಹಾಗೂ ಕೃಷಿ, ತೋಟಗಾರಿಕಾ, ಪಶುಪಾಲನೆ, ಮೀನುಗಾರಿಕೆ ಇಲಾಖೆಗಳ ಅಧಿಕಾರಿಗಳ ತಂಡದೊಂದಿಗೆ ಕುಕನೂರ ತಾಲೂಕಿನಲ್ಲಿ ಬಿರುಸಿನ ಸಂಚಾರ ನಡೆಸಿದ ಸಚಿವರು ಬೆಳೆಹಾನಿಗೀಡಾದ ಜಮೀನಿಗೆ ತೆರಳಿ ಬೆಳೆಹಾನಿಯನ್ನು ಖುದ್ದು ವೀಕ್ಷಿಸಿದರು.
*ಯಲಬುರ್ಗಾ, ಕುಕನೂರ ತಾಲೂಕುಗಳಲ್ಲಿ ಪರಿಶೀಲನೆ:* ಕುಕನೂರ ತಾಲೂಕಿನ ಸಂಗನಹಾಳ ಗ್ರಾಮದ ರೈತ ಸೋಮಶೇಖರಯ್ಯ ಗಣಾಚಾರಿ ಅವರು
(ಸರ್ವೆ ನಂ 47/3) ತಮ್ಮ 2 ಎಕರೆ 8 ಗುಂಟೆನಲ್ಲಿ ಬೆಳೆದ ಹೆಸರು ಬೆಳೆ ಹಾಗೂ ರೈತ ಸಂಗಪ್ಪ ಶಿವರೆಡ್ಡಿ ಅವರು (ಸರ್ವೆ ನಂ.48/2) ತಮ್ಮ 2 ಎಕರೆನಲ್ಲಿ ಬೆಳೆದ ಸೂರ್ಯಕಾಂತಿ ಬೆಳೆ ವಿಕ್ಷೀಸಿದರು.
ರಾಜೂರ ಗ್ರಾಮದಲ್ಲಿನ ಸರ್ವೆ ನಂ.49/1ರಲ್ಲಿನ ಮೂರು ಎಕರೆ 6 ಗುಂಟೆ ವಿಸ್ತೀರ್ಣದಲ್ಲಿ ಸಫಿಯಾಬೇಗಂ ನದಾಫ ಅವರು ಬಿತ್ತಿದ ಹೆಸರು ಬೆಳೆಗಳು ಮಳೆಯಿಲ್ಲದೇ ಹಾಳಾಗಿರುವುದನ್ನು ಸಚಿವರು
ಜಂಟಿಯಾಗಿ ವೀಕ್ಷಣೆ ನಡೆಸಿದರು.

ಯಲಬುರ್ಗಾ, ಕುಕನೂರ ತಾಲೂಕುಗಳ ಪ್ರವೇಶಿಸಿದ ವೇಳೆ ಸಚಿವರು ರಾಜೂರ ಗ್ರಾಮದಲ್ಲಿ ರೈತರೊಂದಿಗೆ ಸಮಾಲೋಚನಾ ಸಭೆ ನಡೆಸಿದರು.
*ರೈತರಿಗೆ ನ್ಯಾಯಯುತ ಪರಿಹಾರ:* ಕುಕನೂರ ತಾಲೂಕಿನ ರಾಜೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ಮಳೆಯಾಗದೇ ಬರ ಬೀಳುವುದು ಈ ಭಾಗದಲ್ಲಿ ಹೊಸತಲ್ಲ. ವಾಡಿಕೆಯ ಮಳೆಯು
ರಾಜ್ಯದಲ್ಲಿ ಶೆ.32ರಷ್ಟು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 40ರಷ್ಟು ಕೊರತೆಯಾಗಿದೆ. 100 ಎಕರೆ ಬದಲು ಕೇವಲ 66 ಎಕರೆ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾದ ಪರಿಸ್ಥಿತಿ ಎಲ್ಲೆಡೆ ಕಾಣುತ್ತಿದೆ.

ಯಲಬುರ್ಗಾ ಮತ್ತು ಕುಕನೂರ ಭಾಗದಲ್ಲಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಈ ಬಗ್ಗೆ ನಾವು ಖುದ್ದು ಪರಿಶೀಲಿಸುತ್ತಿದ್ದೇವೆ. ರೈತರಿಗೆ ನ್ಯಾಯಯುತವಾದ ಪರಿಹಾರ ಕಲ್ಪಿಸುತ್ತೇವೆ.
ರೈತರು ಚಿಂತೆಗೀಡಾಗಬಾರದು. ಸರ್ಕಾರ ರೈತರಿಗೆ ಸ್ಪಂದನೆ ನೀಡಲಿದೆ ಎಂದು ತಿಳಿಸಿದರು.
*ಕ್ಯಾಬಿನೆಟದಲ್ಲಿ ಚರ್ಚೆ ಮಾಡುತ್ತೇವೆ:* ಸಚಿವರಾದ ಬಸವರಾಜ ರಾಯರಡ್ಡಿ ಹಾಗೂ ಶಿವರಾಜ ತಂಗಡಗಿ ಅವರು ಮಾತನಾಡಿ, ತೊಗರಿ, ಹೆಸರು, ಸಜ್ಜೆ ಸೇರಿದಂತೆ ನಾನಾ ಬೆಳೆಗಳು ಹಾಳಾಗಿರುವುದನ್ನು ನಾವು ಖುದ್ದು ನೋಡಿದ್ದೇವೆ. ಈ ಬಗ್ಗೆ ಜಿಲ್ಲೆಯಿಂದ ವರದಿ ಕಳಿಸುತ್ತೇವೆ. ಕ್ಯಾಬಿನೆಟನಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ವಾಸ್ತವ ಪರಿಸ್ಥಿತಿ ಅರಿತು ಬರ ಘೋಷಣೆಯ ಬಗ್ಗೆ ಕ್ರಮ ವಹಿಸುತ್ತೇವೆ. ಬಡವರ ಬಗ್ಗೆ ನಮಗೆ ಕಾಳಜಿ ಇದೆ. ಬಡವರಿಗಾಗಿ ಈಗಾಗಲೇ ಹತ್ತಾರು ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.
*ಜಿಲ್ಲೆಯಲ್ಲಿ 40ರಷ್ಟು ಮಳೆಕೊರತೆ:* ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ ಅವರು, ಜಿಲ್ಲೆಯಲ್ಲಿ ಇದುವರೆಗೆ ಶೇ.40ರಷ್ಟು ಮಳೆ ಕೊರತೆಯಾಗಿದೆ. ಇದರಿಂದಾಗಿ ಶೇ.63ರಷ್ಟು ಮಾತ್ರ ಬಿತ್ತನೆಯಾಗಿದೆ. ಬಿತ್ತಿದ ಬೆಳೆಗಳು ಬಾಡುತ್ತಿರುವ ಬಗ್ಗೆ ಕ್ಷೇತ್ರ ಭೇಟಿ ಮಾಡಿ ಫೋಟೊ ಮತ್ತು ವಿಡಿಯೋ ಸಂಗ್ರಹಿಸಿ ಸಚಿವರೊಂದಿಗೆ ಚರ್ಚಿಸಿ ವಸ್ತುನಿಷ್ಠ ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ.
ಈಗಾಗಲೇ ಜಿಲ್ಲೆಯ 1.56 ಲಕ್ಷ ರೈತರು ಬೆಳೆ ವಿಮೆಯ ಪ್ರಿಮಿಯಂ ಕಟ್ಟಿದ್ದಾರೆ. ಬರದ ವೇಳೆಯಲ್ಲಿ ರೈತರು ಪರ್ಯಾಯ ಕೃಷಿಯತ್ತ ಹೊರಳಲು ತೋಟಗಾರಿಕೆ, ಕೃಷಿ ಇಲಾಖೆಗಳು ರೈತರಲ್ಲಿ ಜಾಗೃತಿ ಮೂಡಿಸುತ್ತಿವೆ ಎಂದು ತಿಳಿಸಿದರು.
*ವಾಡಿಕೆಗಿಂತ ಕಡಿಮೆ ಮಳೆ:* ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೆ 158 ಮಿಮೀ ನಷ್ಟು ವಾಡಿಕೆ ಮಳೆಯಾಗಬೇಕಿತ್ತು. ಬದಲಾಗಿ 98 ಮೀ. ಮೀಟರ್ ಮಾತ್ರ ಮಳೆಯಾಗಿದೆ. ಯಲಬುರ್ಗಾ ತಾಲೂಕಿನಲ್ಲಿ ಶೆ.35ರಷ್ಟು ಹಾಗೂ ಕುಕನೂರ ತಾಲೂಕಿನಲ್ಲಿ ಶೆ.24ರಷ್ಟು ಮಳೆಯ ಕೊರತೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಹಾಗೂ ಕುಕನೂರು ತಾಲ್ಲೂಕ ಗ್ಯಾರಂಟಿ ಅಧ್ಯಕ್ಷ ಸಂಗಮೇಶ ಗುತ್ತಿ, ಯಲಬುರ್ಗಾ ತಾಲ್ಲೂಕಾಧ್ಯಕ್ಷ ಸುಧೀರ ಕೊರ್ಲಳ್ಳಿ, ಮುಖಂಡರಾದ ಶಿವನಗೌಡ ದಾನರೆಡ್ಡಿ, ಹಂಪಯ್ಯ ಹಿರೇಮಠ, ಸಿದ್ದಯ್ಯ ಕಳ್ಳಿಮಠ, ಹನುಮಂತಗೌಡ ಚಂಡೂರ, ಕೊಪ್ಪಳ ಸಹಾಯಕ ಆಯುಕ್ತರಾದ ಮೆಹಬೂಬ ಜಿಲಾನಿ, ಜಿಪಂ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಜಂಟಿ ತೋಟಗಾರಿಕಾ ನಿರ್ದೇಶಕರಾದ ಕೃಷ್ಣ ಉಕ್ಕುಂದ, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಶ್ರೀನಿವಾಸ ಕುಲಕರ್ಣಿ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಯ್ಯ, ಕೃಷಿ ಇಲಾಖೆಯ ತಾಲೂಕು ಅಧಿಕಾರಿಗಳಾದ ಪ್ರಮೋದ ತುಂಬಳ, ಶಿವಪ್ಪ ಕೊಂಡಗುರಿ, ಎಸ್ ಸಿ ಚಿಂಚಲಿ ಸೇರಿದಂತೆ ಇತರರು ಇದ್ದರು.
ವರದಿ :-ಚನ್ನಯ್ಯ ಹಿರೇಮಠ ಕುಕನೂರು


