Uncategorized

*ಕೇಬಲ್ ಕಳ್ಳತನಕ್ಕೆ ಕಡಿವಾಣ ಹಾಕಲು ರೈತರೇ ಅಖಾಡಕ್ಕಿಳಿದರು..!*

*ರಾತ್ರಿ ಹಗಲೆನ್ನದೆ ಕಾವಲು ಕಾಯ್ದ ರೈತರ ಸಾಹಸ – ಕೇಬಲ್ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ರೈತರು..!*

*ಕೇಬಲ್ ಕಳ್ಳತನಕ್ಕೆ ಕಡಿವಾಣ ಹಾಕಲು ರೈತರೇ ಅಖಾಡಕ್ಕಿಳಿದರು..!*

*ರಾತ್ರಿ ಹಗಲೆನ್ನದೆ ಕಾವಲು ಕಾಯ್ದ ರೈತರ ಸಾಹಸ – ಕೇಬಲ್ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ರೈತರು..!*

ಕುಕನೂರು: ಕುಕನೂರು ತಾಲೂಕಿನಲ್ಲಿ ರೈತರ ಜಮೀನಿನಲ್ಲಿ ಅಳವಡಿಸಿರುವ ಬೋರ್‌ವೆಲ್‌ಗಳ ವಿದ್ಯುತ್ ಕೇಬಲ್ ಹಾಗೂ ಬೋರ್‌ವೆಲ್‌ಗಳ ಬಿಡಿಭಾಗಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದು, ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ಕೇಬಲ್ ಕಳ್ಳರ ಹಾವಳಿ ದೊಡ್ಡ ತಲೆನೋವಾಗಿತ್ತು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲೂಕಾಧ್ಯಕ್ಷ ದೇವಪ್ಪ ಸೋಬಾನದ ಹೇಳಿದರು.

ಅವರು ಬುಧವಾರದಂದು ಪಟ್ಟಣದಲ್ಲಿ ನಮ್ಮ ಮಾಧ್ಯಮದೊಂದಿಗೆ ಮಾತನಾಡಿ ಕೇಬಲ್ ಕಳ್ಳತನದಿಂದ ಬೇಸತ್ತ ರೈತರು ಹಲವು ಬಾರಿ ಕುಕನೂರು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ, ಕಳ್ಳತನ ತಡೆಗಟ್ಟಲು ಹಾಗೂ ಕಳ್ಳರನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಆದರೂ ಕಳ್ಳತನಕ್ಕೆ ಕಡಿವಾಣ ಬೀಳದ ಹಿನ್ನೆಲೆಯಲ್ಲಿ, ನಮ್ಮ ರೈತರು ರಾತ್ರಿ ಹಗಲೆನ್ನದೆ ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಕನೂರು ಪಟ್ಟಣದ ವ್ಯಾಪ್ತಿಯ ಹಲವು ರೈತರ ಜಮೀನುಗಳಲ್ಲಿ ಬೋರ್‌ವೆಲ್‌ಗಳಿಗೆ ಅಳವಡಿಸಿದ್ದ ವಿದ್ಯುತ್ ಕೇಬಲ್‌ಗಳು ಹಾಗೂ ಇತರೆ ಉಪಕರಣಗಳು ಕಳ್ಳತನವಾಗುತ್ತಿದ್ದವು. ಇದರಿಂದ ರೈತರು 8ರಿಂದ 10ಲಕ್ಷದ ವರೆಗೆ ನಷ್ಟ ಅನುಭವಿಸುವಂತಾಗಿತ್ತು, ಈ ಕುರಿತು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರು, ಸಂಬಂಧಪಟ್ಟ ಅಧಿಕಾರಿಗಳಿಂದ ನಿರೀಕ್ಷಿತ ಮಟ್ಟದ ಕ್ರಮ ಕೈಗೊಳ್ಳಲಿಲ್ಲಾ ಎಂದು ಆರೋಪಿಸಿದರು.

ಇದರಿಂದ ರೋಸಿಹೋದ ರೈತರು ಒಗ್ಗಟ್ಟಾಗಿ ಕಳ್ಳನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿ, ಕೊನೆಗೂ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ನಂತರ ದೇವಸ್ಥಾನದ ಕಟ್ಟೆಯ ಬಳಿ ಕಳ್ಳತನದ ಕುರಿತು ಕಳ್ಳನನ್ನು ರೈತರು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿಷಯ ತಿಳಿದ ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಧ್ಯಪ್ರವೇಶಿಸಿದರು. ಕಾನೂನು ಪ್ರಕಾರ ವಿಚಾರಣೆ ನಡೆಸಿ ಅಗತ್ಯ ಮಾಹಿತಿ ಸಂಗ್ರಹಿಸುವುದರ ಜೊತೆಗೆ ಕಳ್ಳತನದಿಂದ ನಷ್ಟ ಅನುಭವಿಸಿದ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪೊಲೀಸರ ಭರವಸೆಗೆ ಒಪ್ಪಿದ ನಾವು ಕಳ್ಳನನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದೇವು ಎಂದರು.

ನಂತರ ರೈತ ಸಂಘಟನೆ ನಗರ ಘಟಕದ ಅಧ್ಯಕ್ಷ ಶಿವು ಬಂಗಿ ಮಾತನಾಡಿ ಕಳ್ಳರನ್ನು ಹಿಡಿಯುವಲ್ಲಿ ಪೋಲಿಸ್ ಇಲಾಖೆ ಪಾತ್ರ ಏನು ಇಲ್ಲಾ, ರೈತ ಯುವಕರು ಹಿಡಿದ ನಂತರ ನಾವು ಕಳ್ಳರನ್ನು ಹಿಡಿದಿದ್ದೇವೆ ಎಂದು ಪೋಲಿಸರು ಹೇಳಿರುವುದು ಖಂಡನೀಯವಾಗಿದೆ ಎಂದರು.

*ರೈತರ ಆಗ್ರಹವೇನು,,?*
ಕಳ್ಳರನ್ನು ಹಿಡಿಯುತ್ತೇವೆ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆಗಳಿಗೆ ಮಾತ್ರ ಅಧಿಕಾರಿಗಳು ಸೀಮಿತವಾಗಬಾರದು. ಕಳ್ಳತನದಿಂದ ಈಗಾಗಲೇ ಆರ್ಥಿಕ ನಷ್ಟ ಅನುಭವಿಸಿರುವ ಬಡ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು.

ಕಳ್ಳತನ ಪ್ರಕರಣಗಳ ಸಮಗ್ರ ತನಿಖೆ ನಡೆಸಿ, ರೈತರಿಗೆ ಆಗಿರುವ ನಷ್ಟವನ್ನು ಪರಿಹರಿಸಲು ಸಂಬಂಧಪಟ್ಟ ಇಲಾಖೆ ಮುಂದಾಗಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ರೈತರ ಬೆವರಿನ ಹಣಕ್ಕೆ ರಕ್ಷಣೆ ನೀಡಬೇಕಾದ ವ್ಯವಸ್ಥೆ ಜಾಗೃತವಾಗದಿದ್ದರೆ, ಮುಂದಿನ ದಿನಗಳಲ್ಲಿ ರೈತ ಸಂಘಟನೆಯಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಶರಣಪ್ಪ ಚಂಡೂರು, ಬಸವರಾಜ ಈಬೇರಿ, ಹನುಮಂತ ಗೊರ್ಲೆಕೊಪ್ಪ, ಶ್ರೀಕಾಂತ ಬಿಳಗಿ, ಶಿವಪ್ಪ ಮೆಣಸಿಕಾಯಿ, ಈರಪ್ಪ ಕೂಡ್ಲೂರ, ಚಂದ್ರಯ್ಯ ವಸ್ತ್ರದ, ಶಿವಪ್ಪ ಸಂಧಿಮನಿ, ರುದ್ರಪ್ಪ ಕೂಡ್ಲೂರು, ರಾಮಣ್ಣ ಕುರಿ, ಬಸವರಾಜ ಕುರಿ, ಹೊನಕೇರಪ್ಪ ಗುಡಗೇರಿ ಸೇರಿದಂತೆ ರೈತ ಮುಖಂಡರು, ಯುವಕರು ಉಪಸ್ಥಿತರಿದ್ದರು.

 

ವರದಿ ಚನ್ನಯ್ಯ ಹಿರೇಮಠ ಕುಕನೂರು

Related Articles

Leave a Reply

Your email address will not be published. Required fields are marked *

Back to top button
error: Content is protected !!