

ನನಗೆ ಯಾರ ಭಯವೂ ಇಲ್ಲ, ಅಧಿಕಾರಿಗಳೆಲ್ಲ ನನ್ನ ಜೋಬಿನಲ್ಲಿದ್ದಾರೆ! – ಡಿ ಗ್ರೂಪ್ ನೌಕರರ ವಿರುದ್ಧ ಗಂಭೀರ ಆರೋಪ
“ಶಾಲೆಯಲ್ಲೇ ದರ್ಪದ ದರ್ಬಾರ್! ಎಸ್‌ಡಿಎಂಸಿ ಠರಾವಿಗೂ ಕಿಮ್ಮತ್ತಿಲ್ಲವೇ? ಶಿಕ್ಷಣ ಇಲಾಖೆ ಕ್ರಮಕ್ಕೆ ಕಾಯುತ್ತಿರುವ ಮಂಗಳೂರ ಶಾಲೆ!”
ಮಂಗಳೂರ: ಕುಕನೂರು ತಾಲೂಕಿನ ಮಂಗಳೂರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಡಿ ಗ್ರೂಪ್ ದರ್ಜೆಯ ನೌಕರರ ಕರ್ತವ್ಯ ನಿರ್ವಹಣೆ ಹಾಗೂ ವರ್ತನೆ ಇದೀಗ ವಿವಾದಕ್ಕೆ ಕಾರಣವಾಗಿದೆ. ನೌಕರರಾದ ಶಾಹಿರಾಬಾನು ಯಲಬುರ್ಗಾ ಅವರು ಕರ್ತವ್ಯದ ವೇಳೆ ಅನುಚಿತವಾಗಿ ವರ್ತಿಸುತ್ತಾರೆ, ತಮ್ಮ ಜವಾಬ್ದಾರಿಯ ಕೆಲಸವನ್ನು ಬೇರೆಯವರಿಂದ ಮಾಡಿಸುತ್ತಾರೆ ಹಾಗೂ ಎಸ್‌ಡಿಎಂಸಿ ಉಪಾಧ್ಯಕ್ಷರು, ಸದಸ್ಯರು, ಶಿಕ್ಷಕರು ಮತ್ತು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ಮಾತನಾಡುತ್ತಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
*ಕರ್ತವ್ಯದ ಬದಲು ಬೇರೆಯವರಿಂದ ಕೆಲಸ?*
ಶಾಲೆಯ ಸ್ವಚ್ಛತೆ ಕಾಪಾಡುವುದು ಡಿ ಗ್ರೂಪ್ ನೌಕರರ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ. ಆದರೆ, ಸಂಬಂಧಪಟ್ಟ ನೌಕರರು ತಮ್ಮ ಕರ್ತವ್ಯವನ್ನು ನಿರ್ವಹಿಸದೆ ಪರ್ಯಾಯವಾಗಿ ಬೇರೊಬ್ಬ ವ್ಯಕ್ತಿಯಿಂದ ಸ್ವಚ್ಛತಾ ಕೆಲಸ ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಶಾಲಾ ಮುಖ್ಯಸ್ಥರು ಹಾಗೂ ಎಸ್‌ಡಿಎಂಸಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರೂ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ದೂರಲಾಗಿದೆ.
*ಎಸ್‌ಡಿಎಂಸಿ ಸಭೆಯಲ್ಲೂ ವರ್ತನೆಗೆ ಆಕ್ಷೇಪ*
ನೌಕರರ ವರ್ತನೆ ಹಾಗೂ ಕರ್ತವ್ಯ ನಿರ್ವಹಣೆ ಕುರಿತು ನಡೆದ ಎಸ್‌ಡಿಎಂಸಿ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಶಾಲೆಯ ಶೈಕ್ಷಣಿಕ ವಾತಾವರಣ ಮತ್ತು ಆಡಳಿತದ ಹಿತದೃಷ್ಟಿಯಿಂದ ಸಂಬಂಧಪಟ್ಟ ನೌಕರರನ್ನು ಬೇರೆಡೆಗೆ ನಿಯೋಜಿಸುವಂತೆ ಠರಾವು ಅಂಗೀಕರಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ರವಾನಿಸಲಾಗಿದೆ ಎಂದು ಎಸ್‌ಡಿಎಂಸಿ ಮೂಲಗಳು ತಿಳಿಸಿವೆ.
*ಅಧಿಕಾರಿಗಳ ಹೆಸರಿನ ಪ್ರಭಾವದ ಹೇಳಿಕೆ ಆರೋಪ!*
ನನಗೆ ವಯಸ್ಸಾಗಿದೆ, ಅನೇಕ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳಿ ಸ್ವಚ್ಛತಾ ಕೆಲಸವನ್ನು ಬೇರೆಯವರಿಂದ ಮಾಡಿಸುತ್ತಾರೆ. ಆದರೆ, ತಮ್ಮ ಕರ್ತವ್ಯದ ಬಗ್ಗೆ ಪ್ರಶ್ನಿಸಿದಾಗ ಸಾರ್ವಜನಿಕರು ಹಾಗೂ ಶಾಲೆಯ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿಯುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ.
ಇದಲ್ಲದೆ, ಶಾಸಕರು, ಸಂಸದರು, ಡಿಡಿಪಿಐ ಹಾಗೂ ಬಿಇಒ ಅವರು ನನಗೆ ಆತ್ಮೀಯರು, ಯಾರಿಗೆ ಬೇಕಾದರೂ ದೂರು ನೀಡಿಕೊಳ್ಳಿ, ನನಗೆ ಏನೂ ಆಗುವುದಿಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಎಸ್‌ಡಿಎಂಸಿ ಸದಸ್ಯರು ಆರೋಪಿಸಿದ್ದಾರೆ. ಈ ಹೇಳಿಕೆಗಳ ಸತ್ಯಾಸತ್ಯತೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ.
*ಹಿಂದಿನ ದೂರಿಗೂ ಕ್ರಮವಾಗಿಲ್ಲವೇ?*
ಈ ಹಿಂದೆ ಕೂಡ ಕರ್ತವ್ಯಲೋಪ ಹಾಗೂ ಅನುಚಿತ ವರ್ತನೆ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಆಗ ಶೋಕಾಸ್ ನೋಟಿಸ್ ನೀಡಲಾಗಿತ್ತು ಎನ್ನಲಾಗಿದೆ. ಆದರೆ, ಸಮಸ್ಯೆ ಮುಂದುವರಿದಿರುವುದರಿಂದ ಎಸ್‌ಡಿಎಂಸಿ ಸದಸ್ಯರು ಮತ್ತೊಮ್ಮೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.
*ಶಿಕ್ಷಣ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ?*
ಶಾಲೆಯ ಶಿಸ್ತು, ಸ್ವಚ್ಛತೆ ಹಾಗೂ ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯಬೇಕಾದರೆ ಪ್ರತಿಯೊಬ್ಬ ನೌಕರರೂ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದು ಅಗತ್ಯ. ಎಸ್‌ಡಿಎಂಸಿ ಸಭೆಯಲ್ಲಿ ಅಂಗೀಕರಿಸಿದ ಠರಾವಿನ ಆಧಾರದ ಮೇಲೆ ಸಂಬಂಧಪಟ್ಟ ನೌಕರರ ವಿರುದ್ಧ ಸೂಕ್ತ ತನಿಖೆ ನಡೆಸಿ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
ಈಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೇವಲ ನೋಟಿಸ್ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸುತ್ತಾರೆಯೇ ಅಥವಾ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಎಸ್‌ಡಿಎಂಸಿ ಠರಾವಿನಂತೆ ನೌಕರರನ್ನು ಬೇರೆಡೆಗೆ ನಿಯೋಜಿಸದಿದ್ದರೆ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಎಸ್‌ಡಿಎಂಸಿ ಉಪಾಧ್ಯಕ್ಷರು ತಿಳಿಸಿದ್ದಾರೆ.
ವರದಿ ಚನ್ನಯ್ಯ ಹಿರೇಮಠ ಕುಕನೂರು


