
ನೇತ್ರದಾನದಿಂದ ಅಂಧರ ಬಾಳಿಗೆ ಆಶಾಕಿರಣ: ಮಹಾದೇವ ಮಹಾಸ್ವಾಮಿಗಳು

ಕುಕನೂರಿನಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ಜಾಗೃತಿ ರ್ಯಾಲಿ

ಕುಕನೂರು: ನೇತ್ರದಾನವು ಮಹಾದಾನವಾಗಿದ್ದು, ಮರಣಾನಂತರವೂ ಮತ್ತೊಬ್ಬರ ಬಾಳಿಗೆ ಬೆಳಕಾಗುವ ಶ್ರೇಷ್ಠ ಕಾರ್ಯವಾಗಿದೆ. ಜನರಲ್ಲಿ ನೇತ್ರದಾನದ ಕುರಿತು ಜಾಗೃತಿ ಮೂಡಿಸುವ ಮೂಲಕ ಅಂಧರ ಬಾಳಿಗೆ ಬೆಳಕು ನೀಡುವ ಕಾರ್ಯದಲ್ಲಿ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಮಹತ್ವದ ಸೇವೆ ಸಲ್ಲಿಸುತ್ತಿದ್ದು, ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಸಾರ್ವಜನಿಕರಿಗೆ ದೃಷ್ಟಿ ನೀಡುವ ಮೂಲಕ ಅಂಧರ ಬಾಳಿಗೆ ಆಶಾಕಿರಣವಾಗಿದೆ ಎಂದು ಅನ್ನದಾನೇಶ್ವರ ಶಾಖಾಮಠದ ಪೂಜ್ಯ ಮಹಾದೇವ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಮಹಾಮಾಯ ದೇವಸ್ಥಾನದಿಂದ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ಎಸ್‌ಜಿಎಂ ನೇತ್ರ ಭಂಡಾರ ಹಾಗೂ ಸಂಶೋಧನಾ ಪ್ರತಿಷ್ಠಾನ, ಐ ಬ್ಯಾಂಕ್ ಹುಬ್ಬಳ್ಳಿ, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ದೃಷ್ಟಿ ಕೇಂದ್ರ ಕುಕನೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನೇತ್ರದಾನ ಜಾಗೃತಿ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯು ಕೇವಲ ಚಿಕಿತ್ಸೆಗೆ ಸೀಮಿತವಾಗದೆ, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನೇತ್ರ ತಪಾಸಣೆ, ದೃಷ್ಟಿ ಸಮಸ್ಯೆಗಳ ಕುರಿತು ಜಾಗೃತಿ, ನೇತ್ರದಾನದ ಮಹತ್ವ ತಿಳಿಸುವುದು ಸೇರಿದಂತೆ ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಇಂತಹ ಸೇವಾ ಮನೋಭಾವದ ಸಂಸ್ಥೆಗಳ ಮೂಲಕ ಅನೇಕ ಜನರಿಗೆ ದೃಷ್ಟಿ ದೊರೆಯುತ್ತಿದ್ದು, ದೃಷ್ಟಿಹೀನರ ಬದುಕಿನಲ್ಲಿ ಹೊಸ ಭರವಸೆ ಮೂಡುತ್ತಿದೆ ಎಂದು ಮಹಾದೇವ ಮಹಾಸ್ವಾಮಿಗಳು ಶ್ಲಾಘಿಸಿದರು.
ಪ್ರತಿಯೊಬ್ಬರೂ ನೇತ್ರದಾನದ ಮಹತ್ವವನ್ನು ಅರಿತುಕೊಳ್ಳಬೇಕು. ನಮ್ಮ ನಂತರವೂ ನಮ್ಮ ಕಣ್ಣುಗಳು ಮತ್ತೊಬ್ಬರ ಬದುಕಿಗೆ ಬೆಳಕಾಗಬಹುದು. ಆದ್ದರಿಂದ ನೇತ್ರದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ಸಮಾಜದಲ್ಲಿ ನೇತ್ರದಾನದ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕುಕನೂರು ತಾಲೂಕು ಅಧ್ಯಕ್ಷ ದೇವಪ್ಪ ಸೋಬಾನ ಮಾತನಾಡಿ, ನೇತ್ರದಾನವು ಮಾನವೀಯತೆಯ ಪ್ರತೀಕವಾಗಿದ್ದು, ಒಬ್ಬ ವ್ಯಕ್ತಿಯ ನೇತ್ರದಾನದಿಂದ ಮತ್ತೊಬ್ಬರ ಬದುಕಿನಲ್ಲಿ ಬೆಳಕು ಮೂಡುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಅರ್ಚಕ ಗಿರೀಶ ಪೂಜಾರ ಮಾತನಾಡಿ, ನೇತ್ರದಾನವು ಅತ್ಯಂತ ಶ್ರೇಷ್ಠವಾದ ದಾನವಾಗಿದ್ದು, ಜನರು ಸ್ವಯಂಪ್ರೇರಣೆಯಿಂದ ನೇತ್ರದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಮಹಾಮಾಯ ದೇವಸ್ಥಾನದಿಂದ ಆರಂಭವಾದ ರ್ಯಾಲಿಯಲ್ಲಿ ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳು ನೇತ್ರದಾನದ ಮಹತ್ವ ಸಾರುವ ಫಲಕಗಳನ್ನು ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ದೃಷ್ಟಿ ಕೇಂದ್ರಗಳ ಇಂಚಾರ್ಜ್ ರಾಘವೇಂದ್ರ ನವಲಗುಂದ, ಸಂಯೋಜಕ ಶರಣಪ್ಪ ದಿವಟರ್, ವೆಂಕಟೇಶ್ ಸೂಜಿ, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಿಬ್ಬಂದಿ ವರ್ಗ, ರೈತರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಕಾಲೇಜು ಉಪನ್ಯಾಸಕರು ಇತರರು ಇದ್ದರು.
ವರದಿ ಚನ್ನಯ್ಯ ಹಿರೇಮಠ ಕುಕನೂರು


