
*ದೇಹ ಎಂಬ ದೇಗುಲಕ್ಕೆ ಸಂಸ್ಕಾರಗಳನ್ನು ನೀಡಬೇಕು: ನಾಡೋಜ ಅನ್ನದಾನೇಶ್ವರ ಮಹಾ ಶಿವಯೋಗಿಗಳು*

*ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡ ಶ್ರೀ ಜಗದ್ಗುರು ಅನ್ನದಾನೇಶ್ವರ ಪಂಚಕಳಸ ಮಹಾ ರಥೋತ್ಸವ*

ಕುಕನೂರು: ಮಾನವ ದೇಹವು ದೇವರು ನೀಡಿದ ಪವಿತ್ರ ದೇಗುಲದಂತಿದ್ದು, ಅದಕ್ಕೆ ಉತ್ತಮ ಸಂಸ್ಕಾರ, ಸತ್ಸಂಗ ಮತ್ತು ಸನ್ಮಾರ್ಗದ ಚಿಂತನೆಗಳನ್ನು ನೀಡುವ ಮೂಲಕ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಮುಂಡರಗಿಯ ನಾಡೋಜ ಶ್ರೀ ಅನ್ನದಾನೇಶ್ವರ ಮಹಾ ಶಿವಯೋಗಿಗಳು ಹೇಳಿದರು.
ಕುಕನೂರು ಪಟ್ಟಣದ ಶ್ರೀ ಜಗದ್ಗುರು ಅನ್ನದಾನೇಶ್ವರ ಮಹಾ ಶಿವಯೋಗಿಗಳವರ ಅಪ್ಪಣೆಯ ಮೇರೆಗೆ ಬುಧವಾರ ನಡೆದ ಶ್ರೀ ಜಗದ್ಗುರು ಅನ್ನದಾನೇಶ್ವರ ಪಂಚಕಳಸ ಮಹಾ ರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಸ್ಕಾರಯುತ ಜೀವನದಿಂದ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಧರ್ಮ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ದೇಹವನ್ನು ಕೇವಲ ಬಾಹ್ಯವಾಗಿ ಅಲಂಕರಿಸುವುದಕ್ಕಿಂತಲೂ ಮನಸ್ಸನ್ನು ಉತ್ತಮ ಸಂಸ್ಕಾರಗಳಿಂದ ಅಲಂಕರಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗಿನಿಂದಲೇ ಶ್ರೀ ಅನ್ನದಾನೇಶ್ವರ ಶಿವಯೋಗಿಗಳ ಗದ್ದಿಗೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಭಕ್ತಿಪೂರ್ವಕವಾಗಿ ನೆರವೇರಿದವು. ನಂತರ ಮಧ್ಯಾಹ್ನ 12.30 ಗಂಟೆಗೆ 13 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.
ಸಾಮೂಹಿಕ ವಿವಾಹದಲ್ಲಿ ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಂತೆ ನೆರೆದಿದ್ದ ಭಕ್ತರು ಹಾಗೂ ಕುಟುಂಬಸ್ಥರು ಶುಭ ಹಾರೈಸಿದರು. ಶ್ರೀಮಠದ ವತಿಯಿಂದ ವಿವಾಹಕ್ಕೆ ಆಗಮಿಸಿದ ಕುಟುಂಬಸ್ಥರು, ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.
ನಂತರ ಸಂಜೆ 5 ಗಂಟೆಗೆ ಹರ-ಗುರು-ಚರಮೂರ್ತಿಗಳ ದಿವ್ಯ ಸಾನ್ನಿಧ್ಯದಲ್ಲಿ ಅತ್ಯಂತ ವಿಜೃಂಭಣೆಯಿಂದ ಮಹಾ ರಥೋತ್ಸವ ನಡೆಯಿತು. ಬಾಜಾ-ಭಜಂತ್ರಿಗಳ ನಾದ, ಭಕ್ತರ ಜಯಘೋಷ ಹಾಗೂ ಧಾರ್ಮಿಕ ವಾತಾವರಣದ ನಡುವೆ ಶ್ರೀ ಜಗದ್ಗುರು ಅನ್ನದಾನೇಶ್ವರರ ರಥೋತ್ಸವವು ಅದ್ಧೂರಿಯಾಗಿ ಸಾಗಿತು.
ನಾಡೋಜ ಅನ್ನದಾನೇಶ್ವರ ಮಹಾ ಶಿವಯೋಗಿಗಳವರು ರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಭಾವದಿಂದ ಶ್ರೀಗಳ ದರ್ಶನ ಪಡೆದು ಪುನೀತರಾದರು. ಕುಕನೂರು ಪಟ್ಟಣದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಈ ಪಂಚಕಳಸ ಮಹಾ ರಥೋತ್ಸವವು ಭಕ್ತಿ, ಸಂಸ್ಕೃತಿ ಮತ್ತು ಸಂಸ್ಕಾರಗಳ ಸಂಗಮವಾಗಿ ಜನಮನ ಸೆಳೆಯಿತು.
ನಾಡೋಜ ಅನ್ನದಾನೇಶ್ವರ ಮಹಾ ಶಿವಯೋಗಿಗಳು, ಅಭಿನವ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು ರಾಜೂರ, ಶಿವಲಿಂಗ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹಂಪಸಾಗರ, ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಂಗಳೂರು, ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಯಲಬುರ್ಗಾ, ವೀರ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಚಳಗೇರಿ, ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮೈನಳ್ಳಿ, ಇವರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಅನ್ನದಾನೇಶ್ವರ ಶಾಖ ಮಠದ ಆಡಳಿತ ಮಂಡಳಿಯವರು ರೈತಪರ ಸಂಘಟನೆಯವರು ಪೊಲೀಸ್ ಇಲಾಖೆಯವರು, ವಿವಿಧ ಭಜನಾ ಮಂಡಳಿಯವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶ್ರೀ ಅನ್ನದಾನೇಶ್ವರ ಮಠದ ಭಕ್ತಾದಿಗಳು ಇತರರು ಇದ್ದರು.
ವರದಿ: ಚನ್ನಯ್ಯ ಹಿರೇಮಠ, ಕುಕನೂರು




