Uncategorized

*‘ಹೊಲಗೇರಿ’ ಪದ ಬಳಕೆಗೆ ಶಾಸಕ ಕಾಶಪ್ಪನವರ್ ಬೇಷರತ್ ಕ್ಷಮೆಯಾಚಿಸಿ ರಾಜೀನಾಮೆ ನೀಡಲಿ: ಸುರೇಶ ಬಳೂಟಿಗಿ*

*‘ಹೊಲಗೇರಿ’ ಪದ ಬಳಕೆ ಖಂಡಿಸಿ ಆ.17ರಂದು ಕುಕನೂರಿನಲ್ಲಿ ಪ್ರತಿಭಟನೆ*

 

*‘ಹೊಲಗೇರಿ’ ಪದ ಬಳಕೆಗೆ ಶಾಸಕ ಕಾಶಪ್ಪನವರ್ ಬೇಷರತ್ ಕ್ಷಮೆಯಾಚಿಸಿ ರಾಜೀನಾಮೆ ನೀಡಲಿ: ಸುರೇಶ ಬಳೂಟಿಗಿ*

*‘ಹೊಲಗೇರಿ’ ಪದ ಬಳಕೆ ಖಂಡಿಸಿ ಆ.17ರಂದು ಕುಕನೂರಿನಲ್ಲಿ ಪ್ರತಿಭಟನೆ*

*ಕುಕನೂರು* : ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಇಲಕಲ್ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಲಿತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ‘ಹೊಲಗೇರಿ’ ಎಂಬ ಪದ ಬಳಸಿರುವುದನ್ನು ಖಂಡಿಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ದಲಿತ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಆ.17ರಂದು ಸೋಮವಾರ ಬೆಳಿಗ್ಗೆ ಕುಕನೂರಿನಲ್ಲಿ ದಲಿತ ಸಂಘಟನೆಗಳ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಮುದಾಯದ ಯುವ ಮುಖಂಡರು ತಿಳಿಸಿದರು.

ಪ್ರತಿಭಟನೆಯ ರೂಪುರೇಷೆ ಹಾಗೂ ಹೋರಾಟದ ಉದ್ದೇಶದ ಕುರಿತು ಮಾಹಿತಿ ನೀಡಲು ಆ.14ರಂದು ಬೆಳಿಗ್ಗೆ 10 ಗಂಟೆಗೆ ಕುಕನೂರು ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

ಯುವ ಮುಖಂಡ ಸುರೇಶ ಬಳೊಟಿಗಿ ಮಾತನಾಡಿ, ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳು ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಹ ಪದಗಳನ್ನು ಬಳಸಬಾರದು. ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಹೇಳಿಕೆ ದಲಿತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ. ಆದ್ದರಿಂದ ಅವರು ತಮ್ಮ ಹೇಳಿಕೆಗೆ ಬೇಷರತ್ ಕ್ಷಮೆಯಾಚಿಸಬೇಕು ಹಾಗೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಯುವ ಮುಖಂಡ ಲಕ್ಷ್ಮಣ ಕಾಳೆ ಮಾತನಾಡಿ, ದಲಿತ ಸಮುದಾಯದ ಗೌರವ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ಹೇಳಿಕೆಗಳನ್ನು ಸಹಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಆ.17ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ದಲಿತ ಸಮುದಾಯದ ಮುಖಂಡರು, ಯುವಕರು ಹಾಗೂ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಪ್ರಕಾಶ ಹಿರೇಮನಿ ಮಾತನಾಡಿ, ಜನಪ್ರತಿನಿಧಿಗಳು ಜನಸಾಮಾನ್ಯರ ಜವಾಬ್ದಾರಿಯನ್ನು ಹೊತ್ತುಕೊಂಡು ಸೌಮ್ಯವಾಗಿ ಹಾಗೂ ಜವಾಬ್ದಾರಿಯಿಂದ ಮಾತನಾಡಬೇಕು. ಯಾವುದೇ ಸಮುದಾಯ, ಸ್ವಾಮೀಜಿ, ಪತ್ರಕರ್ತರು ಅಥವಾ ವಿವಿಧ ಇಲಾಖೆಗಳ ಅಧಿಕಾರಿಗಳ ಬಗ್ಗೆ ಹಗುರವಾಗಿ ಮಾತನಾಡುವ ಪ್ರವೃತ್ತಿಯನ್ನು ನಿಲ್ಲಿಸಬೇಕು. ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಭೀಮಣ್ಣ ಗೂಡದಹಳ್ಳಿ, ಶಶಿಕುಮಾರ ಭಜಂತ್ರಿ, ರಾಘವೇಂದ್ರ ಬಳಗೇರಿ, ವಿಜಯಕುಮಾರ ಚೌಹಾಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚನ್ನಯ್ಯ ಹಿರೇಮಠ. ಕುಕನೂರು.

Related Articles

Leave a Reply

Your email address will not be published. Required fields are marked *

Back to top button
error: Content is protected !!