
*ಶಿಸ್ತು, ಪ್ರಾಮಾಣಿಕತೆ ಮತ್ತು ನಿಷ್ಕಾಮ ಸೇವೆಗೆ ಸಂದ ಗೌರವ: ಕಂಪನಿ ಕಮಾಂಡರ್ ವೀರಣ್ಣ ಕೆ. ಬಡಿಗೇರ ಅವರಿಗೆ ಅದ್ದೂರಿ ವಯೋನಿವೃತ್ತಿ ಸನ್ಮಾನ*
ಕುಕನೂರು, ಆ. 3: ಕರ್ನಾಟಕ ರಾಜ್ಯ ಗೃಹರಕ್ಷಕ ದಳ, ಕೊಪ್ಪಳ ಜಿಲ್ಲಾ ಘಟಕದ ಕಂಪನಿ ಕಮಾಂಡರ್ ಶ್ರೀ ವೀರಣ್ಣ ಕೆ. ಬಡಿಗೇರ ಅವರ ವಯೋನಿವೃತ್ತಿ ಅಂಗವಾಗಿ, ಅವರ ಸುದೀರ್ಘ, ಶಿಸ್ತುಬದ್ಧ ಹಾಗೂ ಆದರ್ಶ ಸೇವೆಯನ್ನು ಗೌರವಿಸಿ ವಯೋನಿವೃತ್ತಿ ಸನ್ಮಾನ ಹಾಗೂ “ಅತ್ಯುತ್ತಮ ಶ್ರೇಷ್ಠ ಘಟಕ” ಪ್ರಶಸ್ತಿ ಪ್ರದಾನ ಸಮಾರಂಭ ಸೋಮವಾರ ಬೆಳಿಗ್ಗೆ 10 ಗಂಟೆಗೆ ಕುಕನೂರಿನ ಶ್ರೀ ಅನ್ನದಾನೇಶ್ವರ ಶಾಖಾಮಠದಲ್ಲಿ ಪರಮಪೂಜ್ಯ ಶ್ರೀ ಮಹಾದೇವ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಭವ್ಯವಾಗಿ ನಡೆಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಮಹಾದೇವ ಮಹಾಸ್ವಾಮಿಗಳು, “ಶಿಸ್ತು, ಪ್ರಾಮಾಣಿಕತೆ ಹಾಗೂ ನಿಷ್ಕಾಮ ಸೇವೆಯ ಮೂಲಕ ಕಂಪನಿ ಕಮಾಂಡರ್ ವೀರಣ್ಣ ಕೆ. ಬಡಿಗೇರ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರಿಗೆ ಸಂದಿರುವ ಗೌರವವು ಅವರ ಕರ್ತವ್ಯನಿಷ್ಠೆ ಮತ್ತು ಸೇವಾ ಮನೋಭಾವಕ್ಕೆ ದೊರೆತ ಪ್ರತಿಫಲವಾಗಿದೆ” ಎಂದು ಹೇಳಿದರು.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪೂರ ಗ್ರಾಮದವರಾದ ವೀರಣ್ಣ ಕೆ. ಬಡಿಗೇರ ಅವರು 1993ರ ಡಿಸೆಂಬರ್ 1ರಂದು ಗೃಹರಕ್ಷಕ ದಳಕ್ಕೆ ಸೇರ್ಪಡೆಗೊಂಡು ಸತತ 33 ವರ್ಷಗಳ ಕಾಲ ಶಿಸ್ತು, ಪ್ರಾಮಾಣಿಕತೆ, ಸಮಯಪಾಲನೆ ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಕರ್ತವ್ಯ ನಿರ್ವಹಿಸಿದ್ದಾರೆ.ಅಧಿಕಾರಿಯಾಗಿ ಯಾವುದೇ ಅಂತರ ಕಾಯ್ದುಕೊಳ್ಳದೆ ಗೃಹರಕ್ಷಕ ದಳದ ಸಿಬ್ಬಂದಿಯೊಂದಿಗೆ ಆತ್ಮೀಯವಾಗಿ ಬೆರೆತು ಘಟಕವನ್ನು ಸಮರ್ಥವಾಗಿ ಮುನ್ನಡೆಸಿರುವುದು ಅವರ ವಿಶೇಷತೆಯಾಗಿದೆ.
ಅವರ ಕರ್ತವ್ಯನಿಷ್ಠೆ ಹಾಗೂ ಶ್ಲಾಘನೀಯ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಚಿನ್ನದ ಪದಕ ಹಾಗೂ ಭಾರತ ಸರ್ಕಾರದ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಅವರಿಗೆ ಲಭಿಸಿವೆ. ಮುಂದಿನ ಅವರ ನಿವೃತ್ತಿ ಜೀವನ ಸುಖ ಶಾಂತಿ ನೆಮ್ಮದಿ ಆರೋಗ್ಯದಿಂದ ಕೂಡಿರಲಿ ಎಂದು ಶುಭ ಕೋರಿ ಆಶೀರ್ವದಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಕೊಪ್ಪಳ ಜಿಲ್ಲಾ ಗೃಹರಕ್ಷಕ ದಳ
ಸಮಾದೇಷ್ಠರು ಸೋಮನಗೌಡ ಎಂ. ಪಾಟೀಲ್, ವೀರಣ್ಣ ಕೆ. ಬಡಿಗೇರ ಅವರು ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಗೃಹರಕ್ಷಕರೊಂದಿಗೆ ಜನಸೇವೆ ಸಲ್ಲಿಸಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಚುನಾವಣಾ ಕರ್ತವ್ಯಗಳನ್ನು ಕುಕನೂರು, ಯಲಬುರ್ಗಾ, ಕೊಪ್ಪಳ ಸೇರಿದಂತೆ 13 ಘಟಕಗಳ ಗೃಹರಕ್ಷಕರೊಂದಿಗೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ
ಅವರ ಸಮರ್ಥ ನಾಯಕತ್ವ ಹಾಗೂ ಗೃಹರಕ್ಷಕರ ಉತ್ತಮ ಕಾರ್ಯನಿರ್ವಹಣೆಯಿಂದ ಕುಕನೂರು ಘಟಕಕ್ಕೆ “ಅತ್ಯುತ್ತಮ ಶ್ರೇಷ್ಠ ಘಟಕ” ಎಂಬ ಗೌರವ ದೊರೆತಿದೆ. ವೀರಣ್ಣ ಕೆ. ಬಡಿಗೇರ ಅವರ ಶಿಸ್ತು, ಸಮಯಪಾಲನೆ ಹಾಗೂ ಪ್ರಾಮಾಣಿಕತೆ ಎಲ್ಲ ಗೃಹರಕ್ಷಕರಿಗೂ ಮಾದರಿಯಾಗಿದ್ದು, ಅವರ ವಯೋನಿವೃತ್ತಿ ಜೀವನ ಸುಖ, ಶಾಂತಿ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಂಪನಿ ಕಮಾಂಡರ್ ವೀರಣ್ಣ ಕೆ. ಬಡಿಗೇರ, ತಮ್ಮ ಯಶಸ್ಸಿನ ಹಿಂದೆ ಮಾಜಿ ಸಮಾದೇಷ್ಠರಾದ ಸೋಮನಗೌಡ ಎಂ. ಪಾಟೀಲ್ ಅವರ ಮಾರ್ಗದರ್ಶನ, ಗೃಹರಕ್ಷಕ ದಳದ ಸಿಬ್ಬಂದಿಯ ಸಹಕಾರ ಹಾಗೂ ಕುಟುಂಬದ ಬೆಂಬಲವೇ ಪ್ರಮುಖ ಕಾರಣವಾಗಿದೆ. ಎಲ್ಲರ ಸಹಕಾರದಿಂದಲೇ ಪ್ರಶಸ್ತಿಗಳು ಹಾಗೂ ಗೌರವಗಳು ಲಭಿಸಿವೆ ಎಂದು ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಂಪನಿ ಕಮಾಂಡರ್ ವೀರಣ್ಣ ಕೆ. ಬಡಿಗೇರ ಅವರ ಶಿಸ್ತು, ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಗುರುರಾಜ ದೇಸಾಯಿ ಕರಮುಡಿ ನೆರವೇರಿಸಿದರು. ರವೀಂದ್ರ ಎಸ್. ಬಾಕಳೆ ಸ್ವಾಗತಿಸಿದರು.
ವರದಿ ವಾಚನವನ್ನು ನಾಗರಾಜ ಬಡಿಗೇರ ನೆರವೇರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ವಿವಿಧ ಅಧಿಕಾರಿಗಳು ಹಾಗೂ ಗುರು ಹಿರಿಯರು ಮಾತನಾಡಿದರು.
ಸಮಾರಂಭದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಜನಾರ್ಧನ್ ಕೆ., ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಬಸವನಗೌಡ ಮಾಲಿ ಪಾಟೀಲ್, ಲಕ್ಷ್ಮಣ ಬಿದವಟ್ಟಿ, ವೀರಣ್ಣ ಅಣ್ಣಿಗೇರಿ, ಎನ್.ಎಂ. ಬಡಿಗೇರ್ (ಶಿಕ್ಷಕರು), ಶಂಕರ್ ಪತ್ತಾರ್, ಈಶ್ವರಯ್ಯ ಶಿರೂರುಮಠ, ಅಂದಪ್ಪ ಜವಳಿ, ಎನ್.ಆರ್. ಕುಕನೂರು, ಜಂಬಣ್ಣ ಅಂಗಡಿ, ಲಕ್ಷ್ಮಣ ಕಾಳಿ, ಮೆಹಬೂಬ ಪಠಾಣ್, ಜಗನ್ನಾಥ, ಹುಲ್ಲಣಸಾ ತುಳಸಿಕಟ್ಟಿ, ಡಿ.ಆರ್. ಕುಲಕರ್ಣಿ, ದೇವೇಂದ್ರಪ್ಪ ಕಮ್ಮಾರ, ರಾಮಣ್ಣ ಮುದ್ದೂರಾವ್ ಜಗತ್ತಾಪ ಸೇರಿದಂತೆ ಗೃಹರಕ್ಷಕ ದಳದ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು, ಗೃಹರಕ್ಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಚನ್ನಯ್ಯ ಹಿರೇಮಠ, ಕುಕನೂರು



