

*ವಯೋನಿವೃತ್ತಿ ಸನ್ಮಾನ ಹಾಗೂ ಅತ್ಯುತ್ತಮ ಶ್ರೇಷ್ಠ ಘಟಕ ಪ್ರಶಸ್ತಿ ಪ್ರದಾನ ಸಮಾರಂಭ ನಾಳೆ*
*ಶಿಸ್ತು, ಪ್ರಾಮಾಣಿಕ ಸೇವೆಗೆ ಹೆಸರಾದ ಜಿಲ್ಲಾ ಕಮಾಂಡರ್ ವೀರಣ್ಣ ಕೆ. ಬಡಿಗೇರ ಅವರಿಗೆ ಗೌರವ*
ಕುಕನೂರು, ಆ.2: ಕರ್ನಾಟಕ ರಾಜ್ಯ ಗೃಹರಕ್ಷಕ ದಳ, ಕೊಪ್ಪಳ ಜಿಲ್ಲಾ ಘಟಕದ ಜಿಲ್ಲಾ ಕಮಾಂಡರ್ ಶ್ರೀ ವೀರಣ್ಣ ಕೆ. ಬಡಿಗೇರ ಅವರ ವಯೋನಿವೃತ್ತಿ ಅಂಗವಾಗಿ, ಅವರ ಸುದೀರ್ಘ, ಶಿಸ್ತುಬದ್ಧ ಹಾಗೂ ಆದರ್ಶ ಸೇವೆಯನ್ನು ಗೌರವಿಸಿ ವಯೋನಿವೃತ್ತಿ ಸನ್ಮಾನ ಹಾಗೂ ಅತ್ಯುತ್ತಮ ಶ್ರೇಷ್ಠ ಘಟಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಗಸ್ಟ್ 3ರಂದು ಬೆಳಿಗ್ಗೆ 10 ಗಂಟೆಗೆ ಕುಕನೂರಿನ ಶ್ರೀ ಅನ್ನದಾನೇಶ್ವರ ಶಾಖಾಮಠದಲ್ಲಿ, ಪರಮಪೂಜ್ಯ ಶ್ರೀ ಮಹಾದೇವ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ದ್ಯಾಂಪೂರ ಗ್ರಾಮದವರಾದ ಶ್ರೀ ವೀರಣ್ಣ ಕೆ. ಬಡಿಗೇರ ಅವರು ತಮ್ಮ ಸೇವಾ ಅವಧಿಯುದ್ದಕ್ಕೂ ಶಿಸ್ತು, ಪ್ರಾಮಾಣಿಕತೆ, ಸಮಯಪಾಲನೆ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಧಿಕಾರಿಯಾಗಿ ಅಂತರ ಕಾಯ್ದುಕೊಳ್ಳದೆ, ಗೃಹರಕ್ಷಕ ದಳದ ಪ್ರತಿಯೊಬ್ಬ ಸಿಬ್ಬಂದಿಯೊಂದಿಗೆ ಆತ್ಮೀಯವಾಗಿ ಬೆರೆತು ಘಟಕವನ್ನು ಸಮರ್ಥವಾಗಿ ಮುನ್ನಡೆಸಿದ ನಾಯಕತ್ವ ಅವರ ವಿಶೇಷತೆ ಎಂದು ಸಹೋದ್ಯೋಗಿಗಳು ಅಭಿಪ್ರಾಯಪಡುತ್ತಾರೆ.
ಅವರ ಕರ್ತವ್ಯನಿಷ್ಠೆ, ಕಾರ್ಯಕ್ಷಮತೆ ಹಾಗೂ ಶ್ಲಾಘನೀಯ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ ಹಾಗೂ ಭಾರತ ಸರ್ಕಾರದ ಸನ್ಮಾನ್ಯ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಸೇರಿದಂತೆ ಹಲವು ಗೌರವಗಳು ಅವರಿಗೆ ಲಭಿಸಿವೆ.
ಇದೇ ಸಂದರ್ಭದಲ್ಲಿ, ಕುಕನೂರು ಗೃಹರಕ್ಷಕ ದಳ ಘಟಕವು ಪ್ರಾರಂಭದಿಂದಲೂ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿದ ಹಿನ್ನೆಲೆಯಲ್ಲಿ “ಅತ್ಯುತ್ತಮ ಶ್ರೇಷ್ಠ ಘಟಕ” ಎಂಬ ಗೌರವಕ್ಕೆ ಪಾತ್ರವಾಗಿದ್ದು, ಈ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಸಮಸ್ತ ಗೃಹರಕ್ಷಕರಿಗೆ ಅತ್ಯುತ್ತಮ ಶ್ರೇಷ್ಠ ಘಟಕ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಡಾ. ಮಹಾದೇವ ಮಹಾಸ್ವಾಮಿಗಳು ವಹಿಸಲಿದ್ದು, ಆರ್. ಹೇಮಂತ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲಾ ಸಮಾದೇಷ್ಠರು, ಗೃಹರಕ್ಷಕ ದಳ, ಕೊಪ್ಪಳ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೀರಣ್ಣ ಕೆ. ಬಡಿಗೇರ ವಹಿಸಲಿದ್ದಾರೆ.
ಸಮಾರಂಭದಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಪೊಲೀಸ್ ಹಾಗೂ ಗೃಹರಕ್ಷಕ ದಳದ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು, ಗೃಹರಕ್ಷಕರು ಹಾಗೂ ಸಾರ್ವಜನಿಕರು ಭಾಗವಹಿಸಿ, ವೀರಣ್ಣ ಕೆ. ಬಡಿಗೇರ ಅವರ ಶಿಸ್ತು, ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಗೌರವಿಸಲಿದ್ದಾರೆ.
ಗೃಹರಕ್ಷಕ ದಳದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶ್ರೀ ವೀರಣ್ಣ ಕೆ. ಬಡಿಗೇರ ಮನವಿ ಮಾಡಿದ್ದಾರೆ.
ವರದಿಗಾರರು: ಚನ್ನಯ್ಯ ಹಿರೇಮಠ, ಕುಕನೂರು
