ನಿಲ್ಲದ ಅಕ್ರಮ ಪಡಿತರ ಅಕ್ಕಿದಂಧೆ ! ಕಾರಟಗಿಯಲ್ಲಿ ಪಡಿತರ ಅಕ್ಕಿ ತುಂಬಿದ ಆಟೋ ವಶ
ಆಹಾರ ಇಲಾಖೆ ಕಣ್ಣಿದ್ದೂ ಕುರುಡು ಆಗಿದೆಯೇ?

ಕಾರಟಗಿ ; ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನಾದ್ಯಂತ ಎಗ್ಗಿಲ್ಲದೇ ರಾಜಾರೊಷವಾಗಿ ಪಡಿತರ ಅಕ್ಕಿ ಮಾರಾಟ ದಂಧೆ ನಿರಂತರ ನಡೆಯುತ್ತಿದ್ದರೂ ಸಂಬಂಧ ಪಟ್ಟ ಆಹಾರ ಇಲಾಖೆ ಕಣ್ಣಿದ್ದೂ ಕುರುಡು ಆಗಿದೆಯೇ?ಬಡವರ ಅನ್ನಕ್ಕೆ ಕನ್ನ ಹಾಕಿ ಕೂಲಿ ಆಳುಗಳ ಮೂಲಕ ಮನೆ ಮನೆಗೆ ಹೋಗಿ ಅಕ್ಕಿ ಶೇಖರಣೆ ಮಾಡಿ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಕೋಟ್ಯಾಂತರ ರೂಪಾಯಿ ಬಿಜಿನೆಸ್ ಮಾಡುತ್ತಿದ್ದಾರೆ. ಅಕ್ರಮ ಪಡಿತರ ಅಕ್ಕಿ ಮಾರಾಟದಲ್ಲಿ ಬಹುತೇಕ ರಾಜಕಾರಣಿಗಳ ಬೆಂಬಲಗರೆ ಕಾರಟಗಿ ತಾಲೂಕಿನಲ್ಲಿ ಮೇಲುಗೈ ಸಾಧಿಸಿದ್ದಾರೆ ಎನ್ನುವುದು ಸಾರ್ವಜನಿಕ ಆರೋಪ.
ಪಡಿತರ ಅಕ್ಕಿ ಗಾಡಿ ಹಿಡಿದು ಸ್ಟೇಷನ್ ಗೆ ಬಂದರೆ ರಾಜಕಾರಣಿಗಳ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಗಾಡಿಗಳನ್ನು ಬಿಡಿಸಿಕೊಂಡು ಹೋಗುವ ಖದೀಮರಿಗೆ ಮುಗುದಾಣ ಹಾಕುವ ಹರಸಾಹಸಕ್ಕೆ ಯಾರು ಕೈ ಹಾಕದೇ ಇರುವುದರಿಂದ ಪಡಿತರ ಅಕ್ಕಿ ಅಕ್ರಮ ದಂಧೆ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದಾರೆ.
ಪುಂಗಿ ಊದುವಾಗ ತಲೆದೂಗುವ ನಾಗರಹಾವಿನ ಆಟದಂತೆ, ಅಕ್ರಮ ಪಡಿತರ ಅಕ್ಕಿ ದಂಧೆಕೋರರ ಪುಂಗಿಗೆ ಆಹಾರ ಇಲಾಖೆ ಅಧಿಕಾರಿಗಳು ತಲೆದೂಗುತ್ತಿದ್ದಾರೆಯೇ ? ಎನ್ನುವ ಗುಮಾನಿ ತಾಲೂಕಿನಲ್ಲಿ ಶುರು ಆಗಿದೆ,
ಕಾರಟಗಿ ಪಟ್ಟಣದ ನವಲಿ ರಸ್ತೆಯಲ್ಲಿ ಏಪ್ರಿಲ್ 11ರಂದು ಶನಿವಾರ ಅಕ್ರಮ ಪಡಿತರ ಅಕ್ಕಿ ವಾಹನ 112 ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದೆ. ಸಾರ್ವಜನಿಕರ ಮಾಹಿತಿ ಮೇರೆಗೆ ಪಡಿತರ ಅಕ್ಕಿ ಸಾಗಾಟದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ 112 ಪೊಲೀಸರು ಸುಮಾರು 15 ಕ್ವಿಂಟಲ್ ಪಡಿತರ ಅಕ್ಕಿ ಮಾರಾಟಕ್ಕೆ ಸಾಗಿಸುತ್ತಿದ್ದ ಆಟೋವನ್ನು ಹಿಡಿದು ಕಾರಟಗಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಕಾರಟಗಿಯಲ್ಲಿ ಅಕ್ರಮ ಪಡಿತರ ಅಕ್ಕಿದಂಧೆ ಹಾಡಹಗಲೇ ನಡೆಯುತ್ತಿರುವುದು ಸಾರ್ವಜನಿಕ ರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ, ಇದರ ಹಿಂದೆ ಯಾವೆಲ್ಲ ಪ್ರಭಾವಿಗಳ ಕರಿ ನೆರಳು ಇದೆಯೋ ಅಧಿಕಾರಿಗಳು ಪತ್ತೆ ಹಚ್ಚಬೇಕಿದೆ.



