ಮುಕಳಿಗೆ ಚಡ್ಡಿ ಸಾಲದೆಂದು ಮುಖಕ್ಕೂ ಚಡ್ಡಿ ಹಾಕಿಕೊಂಡು ಓಡಾಡುವಂತಾಯ್ತು.

ಉಮೇಶ್ ಆಚಾರ್:

ಕೊರನಾ ಕಾಲದಲ್ಲಿ ನಾಯಿಗಳೂ ಕೂಡ ಮುಕಳಾರೆ ನಕ್ಕಿರಬಹುದು ಅಂತೂ ಇಂತೂ “ರಸ್ತೆಗೆ ಬಂದರೆ ಮನುಷ್ಯರನ್ನೂ ಹಿಡಿದುಕೊಂಡು ಹೋಗುವ ಕಾಲ ಬಂತು,ಬಡ್ಡೀಮಕ್ಕಳಾ ಬರ್ರೋ ಈಗ ಹೊರಗೆ” ಅಂತ.

ಎಲ್ ಐ ಸಿ ಪ್ರೀಮಿಯಂ ಮಾತ್ರ ದಂಡಿಯಾಗಿ ಕಟ್ಟಿರ್ತೀರಿ ಸಾಯೋ ಟೈಮ್ ಬಂದ ಕೂಡಲೇ ದಡುದುಡು ಓಡಿಹೋಗಿ ಮನೆಯಲ್ಲಿ ಸೆರಗಿನ ಹಿಂದೆ ಬಚ್ಚಿಟ್ಟುಕೊಳ್ಳುತ್ತೀರಲ್ಲಾ ನಿಮಗೆ ಇಡೀ ದೇಹದಲ್ಲಿ ಎಲ್ಲಿಯಾದರೂ!? ಕಿಂಚಿತ್ತಾದರೂ ಮರ್ಯಾದೆ ಇದೆಯಾ?

“ಮನೆಯಲ್ಲೇ ಕೂತು ತಿಂಗಳಿಗೆ 30.000ಸಾವಿರ ದುಡಿಯಿರಿ” ಅಂತ ಒಂದೇ ಸಮ ಹೊಯ್ಕೊಂಡು ಜಾಹೀರಾತು ಕೊಡೋ ಬಡ್ಡೀಮಕ್ಕಳು ಈಗ ಅದೆಲ್ಲಿ ತಲೆ ತಪ್ಪಿಸಿಕೊಂಡು ಓಡೋದರೋಪ್ಪಾ?

ಕಾಲೇಜ್ ನವರು ಯಾಕೆ ಡಿಗ್ರಿ ಸರ್ಟಿಫಿಕೇಟನ್ನು ಸುರಳಿ ಸುತ್ತಿ ಕೊಡ್ತಾ ಇದ್ದರೂ ಅಂತ ಈಗ ಕರೆಕ್ಟಾಗಿ ಅರ್ಥವಾಗ್ತಿದೆ.

ನಡುಬೀದಿಯಲ್ಲಿ ತೊಡೆತಟ್ಟಿ ಪಾಕಿಸ್ತಾನ. ಇಸ್ರೇಲ್, ಮಿಲಿಟರಿ. ದೇಶ ಉದ್ಧಾರ, ಕೋಟೆಕಟ್ಟೋ ವಿಚಾರ ಮಾತನಾಡುತ್ತಿದ್ದ ಖಡಕ್ ಆಲಿಯಾಸ್ ಕಟ್ಟು ಮಸ್ತಾದ ಗಂಡಸರೆಲ್ಲಾ ಅಡುಗೆಮನೆಯಲ್ಲಿ ಚಪಾತಿ ದುಂಡಗೆ ಮಾಡುವ ಪ್ರಯತ್ನದಲ್ಲಿ ತೊಡಗಿರುವುದಂತೂ ಅಪ್ಪಟ ವಿಪರ್ಯಾಸ.

ಅದರಲ್ಲೂ ಕೆಲವು ಗಂಡಸರು ಮನೆಯಲ್ಲೇ ಇದ್ದು ಇದ್ದೂ….”ಆ ತಿಂಡಿ ಮಾಡು, ಈಗ ಕಾಫಿ ಮಾಡು, ಇಷ್ಟದ್ದಂದು ಬೋಂಡ ಮಾಡು. ಉದ್ದನೆಯ ಕಡ್ಡಿ ತರಹ ಜಿಲೇಬಿ ಮಾಡು”

ಎನ್ನುತ್ತಾ ಹೆಂಡತಿಯರನ್ನು ತರಾವರಿಯಾಗಿ ಗೋಳುಹೊಯ್ದುಕೊಳ್ಳುವುದನ್ನು ನೋಡಿ ರೋಸತ್ತಿಹೋದ ಹೆಂಡತಿಯು “ಈ ದರಿದ್ರನ ಖಾಯಿಲೆ ಯಾವಾಗ ತೊಲಗುತ್ತದೋ” ಎಂದು ಸೊಂಟ ಚಿವುಟಿಕೊಂಡು ಬೈಯ್ಯುತ್ತಿದ್ದರೆ…..ಬೈಯ್ದದ್ದು ನನಗಾ ಅಥವಾ ಕರೊನಾಗಾ? ಅಂತಲೂ ತಿಳಿಯದೆ ತಬ್ಬಿಬ್ಬಾಗುವ ಸರದಿ ಗಂಡನದ್ದು. ಈ ಕಾಲದಲ್ಲಿ ಇಂತಹಾ ಜೋಕುಗಳು ಹುಟ್ಟಿದವು.

ಇವೆಲ್ಲದರ ಜೊತೆಗೆ ಇಂತಹಾ ಸಾಂಕ್ರಾಮಿಕ ಖಾಯಿಲೆಗಳಿಗೂ ರಾಜಕೀಯ ಪ್ರೀತ್ಯರ್ಥ ಸಂಪ್ರೋಕ್ಷಣೆಯನ್ನು ಜಮಾಯಿಸುತ್ತಾ ಕೂರುವ ಹಲವರನ್ನು ನೋಡಿದ್ದಾಯ್ತು ಅದೇನೇ ಇರಲಿ ಆದರೆ ಭಾರತ ಎಂಬುದು ಪುಟಾಣಿ ಜನಸಂಖ್ಯೆಯ ದೇಶವಲ್ಲ ಎಂಬದು ನೆನಪಿನಲ್ಲಿರಲಿ.

ಇಂತಹಾ ವಿಷಮ ಆದಾಯರಹಿತ ಸಮಯದಲ್ಲಿ ಈ ಭಾರತದ ಜನಸಂಖ್ಯೆಯ ಲೆಕ್ಕದಲ್ಲಿ ಪ್ರತಿಯೊಬ್ಬರಿಗೂ ದಿನಕ್ಕೆ ಒಂದೇ ಒಂದು ರೂಪಾಯಿಯ ಚಾಕಲೇಟನ್ನು ಒಂದು ತಿಂಗಳ ಮಟ್ಟಿಗೆ ಕೊಟ್ಟರೂ ಕೂಡ ಅದೇ ತಿಂಗಳೊಳಗಾಗಿ ದೇಶ ಮೇಲೇಳಲಾರದಂತಹಾ ಆರ್ಥಿಕ ಹೊಡೆತ ತಿಂದಿರುತ್ತದೆ ಹೀಗಿದ್ದಾಗ್ಯೂ ನಾವು ರಾಜಕಾರಣಿಗಳೇ ಇದಕ್ಕೆಲ್ಲಾ ಕಾರಣ ಎಂದು ಯಾವ ಪಕ್ಷದ ಮೇಲೂ ಹರಿಹಾಯಲಾಗದು, ಯಾವುದೇ ಪಕ್ಷ ತನ್ನ ಪಕ್ಷದ ಗೆಲುವು,ಅಧಿಕಾರವನ್ನು ಬಯಸುತ್ತದೆಯೇ ಹೊರತು ಯಾರದೇ ಸಾವನ್ನಲ್ಲ. ಭಾರತ ಒಂದೇ ಅಂತೇನಿಲ್ಲ ಪ್ರಪಂಚದ ಎಲ್ಲ ಪುಡಿನೆಲಗಳೂ ಕೂಡ ಈ ಖಾಯಿಲೆಯನ್ನು ನಿಭಾಯಿಸಿ ಹದ್ದುಬಸ್ತಿಗೆ ತರಲಿಕ್ಕೆ ತಡಬಡಾಯಿಸಿ ಹೋಗುತ್ತಿವೆ ಎಂಬ ಮಾಹಿತಿ ಗಮನದಲ್ಲಿರಲಿ.

ಇದರ ಜೊತೆಗೆ ಮಾರ್ಕೆಟ್ಟಿನಲ್ಲಿ ದೊರಕುವಂತೆ ” ಕಿಡ್ನಿ, ಕಣ್ಣು, ಡೂಪ್ಲಿಕೇಟು ಮೂಳೆಗಳು, ಸ್ಟಂಟು, ಪ್ಲಾಸ್ಟಿಕ್ ಕರುಳು ಇತ್ಯಾದಿಗಳು ಹಾಕಿಸಿಕೊಂಡು ಬದುಕಬಹುದೇ ಹೊರತು ಶ್ವಾಸಕೋಶದಂತಹಾ ಸೆಕೆಂಡ್ ಹ್ಯಾಂಡ್ ಐಟಂ ದೊರಕದಂತಹಾ ಅವಯವವನ್ನು ಹಾಕಿಸಿಕೊಳ್ಳಲಾಗದು”ಹಾಗಾಗಿ ನಮ್ಮ ಜಾಗ್ರತೆಯಲ್ಲಿ ನಾವಿರುವುದು ಒಳಿತು.

ಇನ್ನು “ಅಂದೇ ದುಡಿದು, ಅವತ್ತಿನ ಅನ್ನ ತಿನ್ನುತ್ತಿದ್ದ ಬಡವರದಂತೂ ತೋಡಿಕೊಳ್ಳಲಾಗದ ಪಡಿಪಾಟಲು” ಆಗಿ ಹೋಗಿದೆ. ದುಡಿಮೆಯಂತೂ ಮಟ್ಟಸವಾಗಿ ನೆಲಕಚ್ಚಿದೆ.

ಮುಂದಿನ ‘ಸಮಯ’ಎಲ್ಲವನ್ನೂ ಸರಿಪಡಿಸುವ ತಾಕತ್ತನ್ನು ಹೊಂದಿದೆ, ತಾಳ್ಮೆಯಿರಲಿ.

ಬದುಕಿದ್ದರೆ ಬೇಡಿಕೊಂಡಾದರೂ ಬೆಲ್ಲ ತಿನಬಹುದು ಎಂಬ ಗಾದೆಯ ಜೊತೆಗೆ ಹಾದರಗಿತ್ತಿ ಕಾಲು ಹಸೆಯ ಮೇಲೂ ನಿಲ್ಲುವುದಿಲ್ಲ ಎಂಬ ಗಾದೆಯೂ ನೆನಪಿರಲಿ ಅಷ್ಟೇ.

ಚಿತ್ರಕ್ಕೂ ಬರಹಕ್ಕೂ ಸಂಬಂಧವಿಲ್ಲ, ಗಂಡಸರ ಐ ಪಲ್ಸ್ ರೇಟ್ ಹೆಚ್ಚಿಸುವುದಕ್ಕಾಗಿ ಕೊರೋನಾದ ತವರು ಮನೆಯ ಊರಿನ ಹುಡುಗಿಯ ಪೋಟೋ ಬಳಸಾಗಿದೆಯಷ್ಟೇ.

=5

follow me

Leave a Reply

Your email address will not be published.

error: Content is protected !!
×