ಜಿಬಿ ನ್ಯೂಸ್ ಕನ್ನಡ ಸುದ್ದಿ ಕಲಬುರಗಿ: ಕರೆಂಟ್ ಇಲ್ಲದೆ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಮೊಬೈಲ್ ಟಾರ್ಚ್ನಲ್ಲೇ ಹೆರಿಗೆ ಮಾಡಿಸಿದ ದುರಾವಸ್ಥೆ ಕಲಬುರಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮನಕಲುಕುವ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರೆಂಟ್ ಇಲ್ಲದ ಕಾರಣ ವೈದ್ಯರು ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಮೊಬೈಲ್ ಟಾರ್ಚ್ ಬಳಸಿ ಹೆರಿಗೆ ಮಾಡಿಸಿದ್ದಾರೆ.
ವೈದ್ಯರು ಕರೆಂಟ್ಗಾಗಿ ಕಾಯದೆ ಮೊಬೈಲ್ ಟಾರ್ಚ್ ಆದರೂ ಬಳಸಿ ಸಮಯಕ್ಕೆ ಸರಿಯಾಗಿ ಹೆರಿಗೆ ಮಾಡಿಸಿದ್ದರಿಂದ ತಾಯಿಗೆ ಸುರಕ್ಷಿತವಾಗಿ ಹೆರಿಗೆಯಾಗಿದೆ. ಮಗು ಹಾಗೂ ಬಾಣಂತಿ ಆರೋಗ್ಯವಾಗಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಆದರೆ, ಅನಗತ್ಯ ಯೋಜನೆಗಳಿಗೆ ಕೋಟಿ ಕೋಟಿ ಸುರಿಯುವ ಸರ್ಕಾರಕ್ಕೆ, ಆಸ್ಪತ್ರೆಗಳಿಗೆ ಕನಿಷ್ಟ ಜನರೇಟರ್ ಇಲ್ಲವೇ ಒಂದು ಯುಪಿಎಸ್ ವ್ಯವಸ್ಥೆ ಮಾಡಲು ಆಗುತ್ತಿಲ್ಲವೇ ಎಂದು ಸ್ಥಳೀಯರು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಕೊಲ್ಲೂರು ಮೂಲಸೌಕರ್ಯಗಳಿಂದ ವಂಚಿತವಾದ ಗ್ರಾಮ. ಇಲ್ಲಿನ ಸುತ್ತಮುತ್ತಲ ಗ್ರಾಮಸ್ಥರು ಉತ್ತಮ ಆಸ್ಪತ್ರೆ ಸೇವೆ ಬೇಕೆಂದರೆ ದೂರದ ಚಿತ್ತಾಪುರ ಅಥವಾ ಕಲಬುರಗಿಗೆ ಹೋಗಬೇಕು.
ಅದೆಷ್ಟೋ ಸರ್ಕಾರಿ ಆಸ್ಪತ್ರೆಗಳಲ್ಲಿ ಅದರಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಸಕಾಲಕ್ಕೆ ಇರುವುದೇ ಅಪರೂಪ. ರೋಗಿಗಳು ಇಲ್ಲದ ಸಮಯದಲ್ಲಿ ಬಂದು ಹೋಗುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ವೈದ್ಯಕೀಯ ಸೇವೆ ಅಪರೂಪ. ರಾಜ್ಯದ ಅದೆಷ್ಟೋ ಸಾವಿರಾರು ಆರೋಗ್ಯ ಕೇಂದ್ರಗಳ ಬಾಗಿಲು ತೆರೆದ ಉದಾಹರಣೆಗಳೇ ಇಲ್ಲ. ಇನ್ನೂ ಕೆಲವು ಕಡೆ ಆಸ್ಪತ್ರೆಗಳು ತೆರೆದಿದ್ದರೂ ವೈದ್ಯರು ಬರುವುದೇ ಇಲ್ಲ. ಸರ್ಕಾರ ವೈದ್ಯರ ಗ್ರಾಮೀಣ ಸೇವೆ ಕಡ್ಡಾಯ ಮಾಡಿದ್ದರೂ, ಒಮ್ಮೆ ಬಂದು ಸಹಿ ಹಾಕಿ ಹೋಗುವ ವೈದ್ಯರು ಅತ್ತ ತಲೆ ಹಾಕಿವುದೇ ಇಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆ ಗಗನ ಕುಸುಮವಾಗಿಯೇ ಉಳಿದಿದೆ.
ಕೊನೆಗೂ ನಿದ್ದೆಯಿಂದ ಎದ್ದ ಜಿಲ್ಲಾ ಆರೋಗ್ಯ ಇಲಾಖೆ:
ಚಿತ್ತಾಪುರ ತಾಲೂಕಿನ ಕೊಲ್ಲೂರಿನಲ್ಲಿ ಆರೋಗ್ಯ ಇಲಾಖೆ ತಲೆತಗ್ಗಿಸುವಂತೆ ಮಾಡಿದ ಈ ಘಟನೆಯಿಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಶೇಖರ್ ಎಚ್ಚೆತ್ತಿದ್ದಾರೆ.
ಈ ಘಟನೆ ತಮ್ಮ ಗಮನಕ್ಕೆ ಬಂದಿದ್ದು, ಕಲಬುರಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿದ್ಯುತ್ ಇಲ್ಲದಂತಹ ತುರ್ತು ಸಂದರ್ಭಗಳನ್ನು ಎದುರಿಸಲು ಅನುಕೂಲವಾಗುವಂತೆ ಯುಪಿಎಸ್ ಅಥವಾ ಜನರೇಟರ್ಗಳು ಸದಾ ಸನ್ನದ್ಧವಾಗಿರುವಂತೆ ನೋಡಿಕೊಳ್ಳುವಂತೆ ಸುತ್ತೋಲೆ ಹೊರಡಿಸಿದ್ದಾರೆ.