ರೈತರಿಗೆ ವರವಾಗಲಿದೆ ಹನಿ ನೀರಾವರಿ ಯೋಜನೆ; ಅಮರೇಶ್ ಕರಡಿ

ಕವಲೂರು ಬಳಿಯ ಸೈಟ್ ವೀಕ್ಷಿಸಿದ ಅಮರೇಶ ಕರಡಿ | 25 ಸಾವಿರ ಎಕರೆ ಪ್ರದೇಶಕ್ಕೆ ಶೀಘ್ರದಲ್ಲೆ ಹನಿನೀರಾವರಿ | 750 ಕೋಟಿ ವೆಚ್ಚದ ಯೋಜನೆ ಜಾರಿ

ಕೊಪ್ಪಳ: ಜಿಬಿ ನ್ಯೂಸ್ ಕನ್ನಡ ಸುದ್ದಿ
ಬಹುನಿರೀಕ್ಷಿತ ಕೊಪ್ಪಳ- ಯಲಬುರ್ಗಾ ಹನಿನೀರಾವರಿ ಯೋಜನೆ ಈ ಭಾಗದ ರೈತರಿಗೆ ವರವಾಗಲಿದೆ. ಕಾಮಗಾರಿ ಪ್ರಗತಿಯಲ್ಲಿದ್ದು 25 ಸಾವಿರ ಎಕರೆ ಪ್ರದೇಶಕ್ಕೆ ಹನಿನೀರಾವರಿ ಮೂಲಕ ನೀರು ದೊರಕಲಿದ್ದು, ರೈತರ ಜೀವನ ಹಸನಾಗಲಿದೆ ಎಂದು ಕೆಡಿಪಿ ಸದಸ್ಯ, ಬಿಜೆಪಿ ಯುವ ಮುಖಂಡ ಅಮರೇಶ ಕರಡಿ ಹೇಳಿದ್ದಾರೆ.


ಹನಿನೀರಾವರಿಯ ಕಟ್ಟಡ ಕಾಮಗಾರಿ ನಡೆಯುತ್ತಿರುವ ಕೊಪ್ಪಳ ತಾಲ್ಲೂಕಿನ ಕವಲೂರು-ಗುಡಗೇರಿ ರಸ್ತೆಯಲ್ಲಿನ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದ ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಪಕ್ಕದಲ್ಲೆ ತುಂಗಭದ್ರಾ ನದಿ ಹರಿಯುತ್ತಿದ್ದರೂ ಇದುವರೆಗೂ ಕೊಪ್ಪಳ ತಾಲೂಕಿನ ಅನೇಕ ಗ್ರಾಮಗಳಿಗೆ ಕುಡಿಯಲು ಮತ್ತು ಕೃಷಿಗಾಗಿ ನೀರು ದೊರಕಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಭಾಗದ ಸಾವಿರಾರು ರೈತರಿಗೆ ಅನುಕೂಲವಾಗಲಿಬೆಂಬ ಸದುದ್ದೇಶದಿಂದ 750 ಕೋಟಿ ಅನುದಾನ ನೀಡಿ ಹನಿನೀರಾವರಿ ಯೋಜನೆ ಜಾರಿಗೆ ತಂದಿದೆ. ಈ ಕಾಮಗಾರಿ ಪೂರ್ಷಗೊಂಡರೆ ಎರಡೂ ತಾಲ್ಲೂಕಿನ ಸುಮಾರು 25 ಸಾವಿರ ಎಕರೆ ಪ್ರದೇಶ ಹಚ್ಚಹಸಿರಾಗಲಿದೆ. ಆ ಮೂಲಕ ನಮ್ಮ ಭಾಗದ ರೈತರ ಬದುಕು ಹಸನಾಗಲಿದೆ ಎಂದಿದ್ದಾರೆ.

ಈ ಯೋಜನೆ ಬಹಳ ವರ್ಷದ ಹಿಂದೆಯೆ ಆಗಬೇಕಿತ್ತು. ಆದರೆ ತಡವಾಗಿಯಾದರೂ ಈಗ ಯೋಜನೆ ಜಾರಿಗೆ ಬಂದಿದ್ದು ನಮಗೆಲ್ಲ ಸಂತಸ ಮೂಡಿಸಿದೆ. ಈಗಾಗಲೇ ಹನಿನೀರಾವರಿ ಯೋಜನೆಯ ಕಾಮಗಾರಿ‌ ಭರದಿಂದ ಸಾಗಿದೆ. ಕವಲೂರು ಗುಡಗೇರಿ ಮಧ್ಯೆಭಾಗದ ಜಾಗದಲ್ಲಿ ಕಟ್ಟಡ ಕಾಮಗಾರಿ ನಡೆದಿದೆ. ಈ ಕೆಲಸ ಮುಗಿದ ಬಳಿಕ ಪೈಪ್ ಲೈನ್ ಸೇರಿದಂತೆ ಇತರೆ ಕೆಲಸಗಳು ನಡೆಯಲಿವೆ. ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ಬಳಿ ಡಿಸ್ಟ್ರಿಬ್ಯೂಟರ್ ಸೆಂಟರ್ ಅಳವಡಿಸಲಾಗುವುದು. ಅಲ್ಲಿಂದ ಎರಡೂ ತಾಲೂಕಿನ ಸುಮಾರು 20-25 ಗ್ರಾಮಗಳ ರೈತರ ಜಮೀನುಗಳಿಗೆ ನೀರು ಹರಿಯಲಿದೆ ಎಂದು ಕಾಮಗಾರಿ ಕುರಿತು ವಿವರಿಸಿದ್ದಾರೆ.

ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಹೆಚ್ಚಾಗಿ ಏತನೀರಾವರಿ ಯೋಜನೆಯಡಿ ಕಾಲುವೆಗಳ ಮೂಲಕ ನೀರು ಸಿಗುತ್ತಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಹನಿನೀರಾವರಿ ಮೂಲಕ‌ ರೈತರಿಗೆ ನೀರು ಒದಗಿಸಲಾಗಿದೆ. ಈತರದ ಯೋಜನೆ ಯಶಸ್ವಿಯಾಗಿದ್ದು ಕೊನೆ ಹಂತದ ಭಾಗದ ರೈತರಿಗೂ ನೀರು ದೊರಕುತ್ತದೆ. ಹನಿನೀರಾವರಿಯಿಂದಾಗಿ ನೀರು ಹೆಚ್ಚಾಗಿ ಪೋಲಾಗುವುದು ತಪ್ಪುತ್ತದೆ. ಈ ಯೋಜನೆಯಿಂದಾಗಿ ಒಣ ಬೇಸಾಯ ಮಾಡುತ್ತಿದ್ದ ರೈತರು ನೀರಾವರಿ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದ್ದಾರೆ.

ಕಾಮಗಾರಿ ಸ್ಥಳ ವೀಕ್ಷಣೆ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಳ್ಳಿ, ಎಪಿಎಂಸಿ ಸದಸ್ಯ ಬಸವರಾಜ ಈಶ್ವರಗೌಡ್ರು, ಕವಲೂರು ಗ್ರಾಮದ ಮುಖಂಡರಾದ ನಿಂಗಪ್ಪ, ವೀರಯ್ಯಸ್ವಾಮಿ ಇದ್ದರು.

ಕೃಷಿಯನ್ನೆ ನಂಬಿ ಈ ಭಾಗದಲ್ಲಿ ಲಕ್ಷಾಂತರ ರೈತರು, ಕೂಲಿ ಕಾರ್ಮಿಕರು, ಯುವಕರು ಜೀವನ ನಡೆಸುತ್ತಿದ್ದಾರೆ. ಈ ಭಾಗಕ್ಕೆ ಹನಿನೀರಾವರಿ ಸೌಲಭ್ಯ ಕಲ್ಪಿಸುವುದರಿಂದಾಗಿ ರೈತರು ಉತ್ತಮ ಜೀವನ‌ ನಡೆಸಬಹುದು. ಒಣ ಭೂಮಿ ಸಹ ಹಸಿರಾಗಲಿದೆ.

– ಅಮರೇಶ ಕರಡಿ, ಕೆಡಿಪಿ ಸದಸ್ಯ

=3

follow me

Leave a Reply

Your email address will not be published.

error: Content is protected !!
×