ಇಸ್ಲಾಮಾಬಾದ್(ಜೂ.07): ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಉತ್ತಮವಾಗಿಲ್ಲ. ಇದರ ಬೆನ್ನಲ್ಲೇ ವಿಶ್ವಕಪ್ ವೇದಿಕೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಫೆ.14ರ ಪುಲ್ವಾಮಾ ದಾಳಿ ಬಳಿಕ ಉಭಯ ದೇಶಗಳ ನಡುವಿನ ಬಹುತೇಕ ಎಲ್ಲಾ ವ್ಯವಹಾರಗಳು ಅಂತ್ಯಗೊಂಡಿದೆ. ಇದೀಗ ತಿರುಗೇಟಿಗೆ ಸಜ್ಜಾಗಿದ್ದ ಪಾಕಿಸ್ತಾನ ಕ್ರಿಕೆಟಿಗರ ಮನವಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿರಸ್ಕರಿಸಿದೆ

ಪುಲ್ವಾಮಾ ಯೋಧರ ಬಲಿದಾನಕ್ಕಾಗಿ ಭಾರತ ಸೇನೆಯ ಕ್ಯಾಪ್ ಧರಿಸಿ ಕಣಕ್ಕಿಳಿದಿತ್ತು. ಇದು ಪಾಕಿಸ್ತಾನದ ಕಣ್ಣು ಕೆಂಪಾಗಿಸಿತ್ತು. ಇದಕ್ಕೆ ತಿರುಗೇಟು ನೀಡಲು ರೆಡಿಯಾಗಿದ್ದ ಪಾಕಿಸ್ತಾನ ಕ್ರಿಕೆಟಿಗರು, ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಬಳಿಸಿ ವಿಶೇಷ ರೀತಿ ಸಂಭ್ರಮಿಸಲು ರೆಡಿಯಾಗಿತ್ತು. ಪ್ರತಿ ವಿಕೆಟ್ ಕಬಳಿಸಿದಾಗ ಪಾಕಿಸ್ತಾನ ಸೇನೆಗೆ ಸೆಲ್ಯೂಟ್ ಹಾಗೂ ವಿಶೇಷ ಸಂಭ್ರಮಾಚರಣೆಗೆ ಪಾಕಿಸ್ತಾನ ಆಟಗಾರರು ಸಜ್ಜಾಗಿದ್ದರು. ಈ ಯೋಜನೆಯನ್ನು ಕೈಬಿಡಲು ಪಿಸಿಬಿ ಹೇಳಿದೆ ಎಂದು ಮೂಲಗಳು ಹೇಳಿವೆ.

ಆಸ್ಟ್ರೇಲಿಯಾ ವಿರುದ್ದದ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ಭಾರತೀಯ ಸೇನೆಯ ಕ್ಯಾಪ್ ಧರಿಸಿ ಆಡಿತ್ತು. ಇದಕ್ಕೆ ಪಾಕಿಸ್ತಾನ ಐಸಿಸಿಗೆ ದೂರು ನೀಡಿತ್ತು. ಈ ಸೇಡು ತೀರಿಸಿಕೊಳ್ಳಲು ಸರ್ಫರಾಜ್ ಅಹಮ್ಮದ್ ನೇತೃತ್ವದ ಪಾಕಿಸ್ತಾನ ತಂಡ ಎಲ್ಲಾ ರೀತಿ ಸಜ್ಜಾಗಿತ್ತು. ಆದರೆ ಪಿಸಿಬಿ ಅವಕಾಶ ನೀಡಿಲ್ಲ. ಇಷ್ಟಾದರೂ ಟೀಂ ಇಂಡಿಯಾ ಕ್ರಿಕೆಟಿಗರ ವಿಕೆಟ್ ಕಬಳಿಸಿ ಸಲ್ಯೂಟ್ ಮೂಲಕ ಪಾಕಿಸ್ತಾನ ಸೇನೆಗೆ ಗೌರವ ಹಾಗೂ ಭಾರತಕ್ಕೆ ತಿರುಗೇಟು ನೀಡಲು ಪಾಕಿಸ್ತಾನ ಮುಂದಾಗಿದೆ.