ಮಡಿಕೇರಿ: ಪ್ರವಾಹದಲ್ಲಿ ಮನೆ ಕಳೆದುಕೊಂಡು ಆರು ತಿಂಗಳು ಕಳೆದರೂ ಸರ್ಕಾರ ಮಾತ್ರ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ ಎಂದು ಕೊಡಗಿನ ಪ್ರವಾಹ ಸಂತ್ರಸ್ತರು ಅಹೋರಾತ್ರಿ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ಎದುರು ನೂರಕ್ಕೂ ಹೆಚ್ಚು ಕುಟುಂಬಗಳು ನಿನ್ನೆಯಿಂದ ಪಂಚಾಯತಿ ಎದುರು ಧರಣಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಸಿದ್ದಾಪುರ ಗ್ರಾಮ ಪಂಚಾಯತಿಯವರು ಪ್ರತಿಭಟನೆ ಸ್ಥಳದಲ್ಲಿ ಇದ್ದ ವಿದ್ಯುತ್ ಅನ್ನು ಕಟ್ ಮಾಡಿದ್ದಾರೆ.
ಇದರಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರು ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಈ ರೀತಿ ಹೋರಾಟವನ್ನು ಹತ್ತಿಕ್ಕಲು ಎಷ್ಟು ಪ್ರಯತ್ನ ನಡೆಸಿದರು ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದ್ದಾರೆ.