Breaking
Tue. Apr 16th, 2024

ಕುಡಿಯುವ ನೀರು ಪೂರೈಕೆ, ಬರ ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ದ: ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ

By Govindraj Budagumpa Apr4,2024
#image_title
ಹೊಸಪೇಟೆ (ವಿಜಯನಗರ ಜಿಲ್ಲೆ): ವಿಜಯನಗರ ಜಿಲ್ಲೆಯ ನಗರ ಪ್ರದೇಶ ಹಾಗೂ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಮತ್ತು ಬರ ನಿರ್ವಹಣೆಗೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ 6 ತಾಲೂಕುಗಳನ್ನು ಸರ್ಕಾರವು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಯಾವುದೇ ರೀತಿಯ ಕುಡಿಯುವ ನೀರಿನ ಮತ್ತು ಮೇವಿನ ಸಮಸ್ಯೆ ಉದ್ಭವಿಸಿದರೆ ತಕ್ಷಣ ಸ್ಪಂದಿಸಲು ತಹಶೀಲ್ದಾರ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತ್ ಇವರಿಗೆ ನಿರ್ದೇಶನ ನೀಡಲಾಗಿದೆ. ಬರ ನಿರ್ವಹಣೆಯ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಗ್ರಾಮ ಮಟ್ಟದ ಟಾಸ್ಕ್ಫೋರ್ಸ್ ಸಮಿತಿಗಳಿಗೂ ಸಹ ಸೂಚಿಸಲಾಗಿದೆ.
ಕುಡಿಯುವ ನೀರು ಮತ್ತು ಬರ ನಿರ್ವಹಣೆಯ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕಾಲಕಾಲಕ್ಕೆ ಸಭೆ ನಡೆಸಿ ನಿರ್ದೇಶನಗಳನ್ನು ನೀಡಲಾಗುತ್ತಿದೆ. ಜಿಲ್ಲಾಡಳಿತದಿಂದ ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬರ ನಿರ್ವಹಣೆಗೆ ಅಚ್ಚುಕಟ್ಟಾಗಿ ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಬಹುದು ಎಂದು 333 ಗ್ರಾಮಗಳನ್ನು ಮತ್ತು 46 ನಗರ ಪ್ರದೇಶದ ವಾರ್ಡ್ಗಳನ್ನು ಗುರುತಿಸಿದ್ದು, ಈ ಪೈಕಿ 602 ಖಾಸಗಿ ಬೋರವೆಲ್‌ಗಳನ್ನು ಗುರುತಿಸಿ 485 ಖಾಸಗಿ ಬೋರವೆಲ್ ಮಾಲೀಕರ ಜೊತೆಗೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಸದ್ಯ ಜಿಲ್ಲೆಯಲ್ಲಿ 79 ಪಂಚಾಯಿತಿಗಳ 138 ಗ್ರಾಮಗಳಿಗೆ 170 ಖಾಸಗಿ ಬೋರವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಹಾಯವಾಣಿ ಆರಂಭ: ಕುಡಿಯುವ ನೀರು ಮತ್ತು ಮೇವು ಪೂರೈಕೆಗೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧೆಡೆ ಸಹಾಯವಾಣಿ ಆರಂಭಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಮೊ.ಸಂ.8123244428 ಮತ್ತು ಟೋಲ್ ಫ್ರಿ ನಂಬರ್ 1077., ಹೊಸಪೇಟೆ ತಾಲೂಕು: 08394-224208, ಹಗರಿಬೊಮ್ಮನಹಳ್ಳಿ ದೂ:08397-238255., ಕೂಡ್ಲಿಗಿ ತಾಲೂಕು: 08391-220225., ಕೊಟ್ಟೂರ ತಾಲೂಕು: 08391-225400., ಹೂವಿನಹಡಗಲಿ ತಾಲೂಕು : 08399-240238., ಹರಪನಹಳ್ಳಿ ತಾಲೂಕು 08398-286260.
ಅನುದಾನ ಮೀಸಲು: ಖಾಸಗಿ ಬೋರವೆಲ್ ಮತ್ತು ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ತಾಲೂಕು ಮತ್ತು ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ಅಗತ್ಯ ಅನುದಾನ ಲಭ್ಯವಿರುತ್ತದೆ. ಬರ ನಿರ್ವಹಣೆಗೆ ಯಾವುದೇ ಅನುದಾನ ಕೊರತೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮೇವು ದಾಸ್ತಾನು ಲಭ್ಯ: ಪ್ರಸ್ತುತ ಜಿಲ್ಲೆಯಲ್ಲಿ 2,69,094 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಇನ್ನೂ 17 ವಾರಕ್ಕೆ ಸಾಕಾಗುವಷ್ಟು ದಾಸ್ತಾನು ಇದೆ. ಜಿಲ್ಲೆಯಲ್ಲಿ ಈಗಾಗಲೇ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಯ ಗುಡೆಕೋಟೆ ಗ್ರಾಮದಲ್ಲಿ ಮೇವು ಬ್ಯಾಂಕ್ ತೆಗೆಯಲಾಗಿದೆ. ಅದರಂತೆ ಮೇವು ಮಾರಾಟಗಾರರಿಂದ 37 ಟನ್ ಮೇವು ಖರೀದಿಸಿದ್ದು ರೈತರಿಗೆ 2 ರೂ.ಕೆಜಿಯಂತೆ 28 ಟನ್ ಮೇವನ್ನು ಪೂರೈಸಲಾಗಿದೆ. ರೈತರಿಗೆ ಮೇವಿನ ಕಿಟ್ ನೀಡಲು ಸರ್ಕಾರದಿಂದ 12057 ಮಿನಿ ಕಿಟ್‌ಗಳು ಸರಬರಾಜು ಆಗಿದ್ದು, ಅದರಲ್ಲಿ 12,044 ಕಿಟ್‌ಗಳನ್ನು ಅವಶ್ಯವಿರುವ ರೈತರಿಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ರೈತರಿಗೆ ಮಾಹಿತಿ: ರೈತರಿಗೆ ನೀಡುವ ಇನ್‌ಪುಟ್ ಸಬ್ಸಿಡಿ ಹಣವು ಖಾತೆಗೆ ಜಮಾ ಆಗದೇ ಇರುವ ಬಗ್ಗೆ ದೂರುಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಾಲೂಕು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈಗಾಗಲೇ ಸಹಾಯವಾಣಿ ತೆರೆಯಲಾಗಿದೆ. ಇನ್‌ಪುಟ್ ಸಬ್ಸಿಡಿ ಡಿ.ಬಿ.ಟಿ ಮೂಲಕ ಜಮಾ ಆದ ಮಾಹಿತಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪ್ರಚುರ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *