ನೂತನ ಕಿಷ್ಕಿಂಧಾ ಜಿಲ್ಲೆಗೆ ಸಚಿವ ತಂಗಡಗಿ ಸ್ಪಂದಿಸದಿದ್ದಲ್ಲಿ ಹೋರಾಟ: ಎಚ್.ಆರ್ ಶ್ರೀನಾಥ್ ಎಚ್ಚರಿಕೆ
ಗಂಗಾವತಿ:
ಗಂಗಾವತಿಯನ್ನು ಕೇಂದ್ರವನ್ನಾಗಿಸಿಕೊಂಡು ನೂತನ ಕಿಷ್ಕಿಂಧಾ ಜಿಲ್ಲೆ ಮಾಡಬೇಕೆಂದು ಈಗಾಗಲೆ ಹೋರಾಟ ಆರಂಭವಾಗಿದ್ದು, ಇದಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ಪಂದಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧವೇ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಶಾಸಕ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಚ್.ಆರ್. ಶ್ರೀನಾಥ್ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಶುಕ್ರವಾರ ಮಾತನಾಡಿದ ಅವರು, ಕಿಷ್ಕಿಂಧಾ ನೂತನ ಜಿಲ್ಲೆಯ ಬಗ್ಗೆ ಸಚಿವ ತಂಗಡಗಿ ಸ್ಪಂದಿಸಿ ಆಸಕ್ತಿ ವಹಿಸಬೇಕು. ತಾವೇ ಮುತುವರ್ಜಿ ವಹಿಸಿ ಈ ಪ್ರಕ್ರಿಯೆಗೆ ಚುರುಕುಗೊಳಿಸಬೇಕು. ತಂಗಡಗಿ ಸರ್ಕಾರದ ಪ್ರತಿನಿಧಿಯಾಗಿದ್ದರಿಂದ ಈ ಬಗ್ಗೆ ನಿಗಾವಹಿಸಿ ನಿಯೋಗವನ್ನು ಸಿಎಂ ಬಳಿಗೆ ಕರೆದುಕೊಂಡು ಹೋಗಬೇಕು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಕಿಷ್ಕಿಂಧಾ ಜಿಲ್ಲೆಯನ್ನು ಈ ವರ್ಷವೇ ಘೊಷಣೆ ಮಾಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಸಚಿವ ತಂಗಡಗಿ ವಿರುದ್ಧ ಕನಕಗಿರಿ, ಕಾರಟಗಿ, ಗಂಗಾವತಿ, ಕಂಪ್ಲಿ, ತಾವರಗೇರಾದ ವರ್ತಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇರಿಕೊಂಡು ಉಗ್ರ ಹೋರಾಟ ರೂಪಿಸಲಾಗುವುದು.
ಈ ಹಿನ್ನೆಲೆ ಸಚಿವ ಶಿವರಾಜ ತಂಗಡಗಿ ತಕ್ಷಣ ಕಿಷ್ಕಿಂಧಾ ಜಿಲ್ಲಾ ಹೋರಾಟದ ಬಗ್ಗೆ ಗಮನ ಹರಿಸಿ ನಿಯೋಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ಕೊಂಡೊಯ್ಯುವ ಕೆಲಸ ಮಾಡಿ ಸರ್ಕಾರದ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದು ಮೂರು ತಿಂಗಳಾಗಿದ್ದು, ಎಲ್ಲಾ ಪಕ್ಷದ ಪ್ರಮುಖರು, ಎಲ್ಲಾ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ರೂಪಿಸುವ ಉತ್ತಮ ಕಾರ್ಯ ಮಾಡುತ್ತಿದೆ. ಹೋರಾಟಕ್ಕೆ ಮತ್ತಷ್ಟು ತೀವ್ರತೆ ನೀಡಬೇಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಗಂಗಾವತಿ ಅಭಿವೃದ್ಧಿಯಾಗದೇ ವಂಚಿತವಾಗುತ್ತಿದೆ. ನಮಗೆ ಸಿಗಬೇಕಿರುವ ಸಾಕಷ್ಟು ಸೌಲಭ್ಯಗಳು ಮರೀಚಿಕೆಯಾಗಿದ್ದು ಅನ್ಯರ ಪಾಲಾಗುತ್ತಿವೆ ಎಂದು ಎಚ್.ಆರ್ ಶ್ರೀನಾಥ್ ಅಸಮಧಾನ ವ್ಯಕ್ತಪಡಿಸಿದರು.