ಧೃವದೇಶ ಕಂಪನಿಯ ಹೆಚ್ಚುವರಿ ಘಟಕ ಸ್ಥಾಪನೆಗೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ವಿರೋಧ
ಕೊಪ್ಪಳ: ಹಿರೇಬಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಬಗನಾಳ ಸಮೀಪದ ಧೃವದೇಶ ಮೇಟಾಸ್ಟೀಲ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಗೆ ಹೆಚ್ಚುವರಿ ಘಟಕ ಸ್ಥಾಪನೆಗೆ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ವ್ಯಾಪಕವಾಗಿ ವಿರೋಧವಾಗಿದ್ದು, ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಗಳು ಅನುಮತಿ ನೀಡಬಾರದು ಎಂದು ವ್ಯಕ್ತವಾಯಿತು.
ಹಿರೇಬಗನಾಳ ಗ್ರಾಮದ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಶನಿವಾರದಂದು ಗ್ರಾಮ ಪಂಚಾಯತಿಯಿಂದ ನಡೆದ ಗ್ರಾಮಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಹಿರೇಬಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ಥಾಪನೆಗೊಂಡಿರುವ ಕಾರ್ಖಾನೆಗಳಿಂದ ವಾಯು ಹಾಗೂ ಜಲಮಾಲಿನ್ಯವಾಗುತ್ತಿದೆ. ಸಾಕಷ್ಟು ಬಾರಿ ಜಿಲ್ಲಾಡಳಿಕ್ಕೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗುತ್ತಿಲ್ಲ.
ಸದರಿ ಕಾರ್ಖಾನೆಯಿಂದ ಹೊರಸೂಸುವ ಕಪ್ಪು ಮಿಶ್ರಿತ, ವಿಷಪೂರಿತ ಬೂದಿ ಹಾಗೂ ದುರ್ವಾಸನೆಯಿಂದ ರೈತರಿಗೆ, ಜಾನುವಾರುಗಳಿಗೆ, ಜಲಚರಗಳಿಗೆ, ಗ್ರಾಮಸ್ಥರಿಗೆ, ಚಿಕ್ಕಮಕ್ಕಳಿಗೆ, ವಯಸ್ಸಾದವರಿಗೆ ತೀವ್ರತರವಾದ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಕಾರ್ಖಾನೆಗಳ ಕಲುಷಿತ ತ್ಯಾಜ್ಯ ಕಲಬೇರಿಕೆಯೊಂದಿಗೆ ತುಂಗಭದ್ರಾ ನದಿಗೆ ಸೇರುತ್ತಿದೆ. ಕಲುಷಿತ ನೀರು ಸೇವಿಸುವುದರಿಂದ ರೈತರಿಗೆ ಹಾಗೂ ಜಾನುವಾರುಗಳಿಗೆ ನಾನಾ ರೀತಿಯ ಕಾಯಿಲೆಗಳು ಬರುತ್ತಿವೆ. ಹೀಗಾಗಿ ಹಿರೇಬಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಗ್ರಾಮ ಪಂಚಾಯತಿ ಪಿಡಿಓ ಗಮನಕ್ಕೆ ತಂದರು.
ಸಭೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು, ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಯುವಕರು ಪಾಲ್ಗೊಂಡು ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.