ರಕ್ಷಣೆ ನೀಡಬೇಕಾದ ಪೊಲೀಸ್ ಠಾಣೆಗಳು ಸೆಟ್ಲ್ಮೆಂಟ್ ಸೆಂಟರ್ ಗಳಾಗುತ್ತಿವೆಯಾ!?

ಸುದ್ದಿ ವಿಶ್ಲೇಷಣೆ – ಶರಣಬಸವ ಹುಲಿಹೈದರ್

ಆತ‌ ಗಂಭೀರ ಪ್ರಕರಣದ ಆರೋಪಿಯೂ ಅಲ್ಲ.‌ ಯಾವುದೇ ಕೋರ್ಟ್ ಆತನನ್ನು ಅಪರಾಧಿ ಅಂತಾ ತೀರ್ಪು ನೀಡಿಲ್ಲ. ಆದರೂ, ಪೊಲೀಸರು ಆತನ ಕೈಗೆ ಕೋಳ ಹಾಕಿ, ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದಾರೆ. ಕನಕಗಿರಿ ತಾಲೂಕು ಬೊಮ್ಮಸಾಗರ ತಾಂಡದ ಸಣ್ಣ ಹನುಮಂತಪ್ಪ ಅವರನ್ನು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಬೇಡಿ‌ ಹಾಕಿ ಕೂಡಿ ಹಾಕಿರುವ ಫೋಟೊ ವೈರಲ್ ಆಗಿದೆ.

ಸಿವಿಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಸಾಕ್ಷಿ ಹೇಳದಂತೆ ಒತ್ತಡ ಹಾಕಲು ಪೊಲೀಸರು ನನ್ನನ್ನು ಕೂಡಿ ಹಾಕಿದ್ದಾರೆ ಎಂದು ದೌರ್ಜನ್ಯಕ್ಕೆ ಒಳಗಾದ ಸಣ್ಣ ಹನುಮಂತಪ್ಪ ಆರೋಪಿಸಿದ್ದಾರೆ. ಕಬ್ಬು ಕಟಾವು ಮಾಡಲು ಬೆಳಗಾವಿ ಜಿಲ್ಲೆ ಅಥಣಿಗೆ ಹೋಗಿದ್ದ ನನ್ನನ್ನು ಪೊಲೀಸರು ಬೆದರಿಕೆ ಒಡ್ಡಿ ಕರೆಯಿಸಿಕೊಂಡಿದ್ದಾರೆ. ಬೆಳಗ್ಗೆ ಗಂಗಾವತಿಗೆ ಹೋಗಿ ಮಗಳನ್ನು ಕಾಲೇಜಿಗೆ ಬಿಟ್ಟು ಗ್ರಾಮಕ್ಕೆ ಹೋಗುತ್ತಿದ್ದಾಗ ಅಲ್ಲಿಂದಲೇ‌ ನನ್ನನ್ನು ಪೊಲೀಸರು ಕರೆ ತಂದಿದ್ದಾರೆ. ಈ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಹನುಮಂತಪ್ಪ ಹೇಳಿಕೊಂಡಿದ್ದಾರೆ.

ನೊಂದವರ ರಕ್ಷಣೆ ಮಾಡಬೇಕಿದ್ದ ಪೊಲೀಸರು ಸಿವಿಲ್ ಕೇಸ್ ಗಳ ಸೆಟ್ಲಮೆಂಟ್ ಮಾಡುತ್ತಿದ್ದು, ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಕೇಂದ್ರಗಳಾಗಿವೆ. ಹನುಮಂತಪ್ಪ ಎಸ್ಸಿ ಸಮುದಾಯಕ್ಕೆ ಸೇರಿದ್ದು, ಪೊಲೀಸರು ದೌರ್ಜನ್ಯದ ವಿರುದ್ಧ ಎಸ್ಸಿ/ಎಸ್ಟಿ ಆಯೋಗ ಮತ್ತು ಮಾನವ ಹಕ್ಕು ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಮುಕುಂದರಾವ್ ಭವಾನಿಮಠ ತಿಳಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರೋ ಕನಕಗಿರಿ ಪಿಐ ಜಗದ್ದೀಶ, ಸಣ್ಣ ಹನುಮಂತಪ್ಪ ಮಟ್ಕಾ ಬರೆಯುತ್ತಿದ್ದ. ಈ ಹಿಂದೆ ಠಾಣೆಗೆ ಕರೆ‌ತಂದಾಗ ಓಡಿ ಹೋಗಿದ್ದ.‌ ಆ ಕಾರಣಕ್ಕೆ ಬೇಡಿ ಹಾಕಿ ಕೂಡಿಸಲಾಗಿತ್ತು ಎಂದು ತಿಳಿಸಿದ್ದಾರೆ.

ವಿಶ್ಲೇಷಣೆ: ಗಂಭೀರವಲ್ಲದ ಸಣ್ಣ-ಪುಟ್ಟ ಪ್ರಕರಣದ ಆರೋಪಿಗಳಿಗೆ ಬೇಡಿ- ಕೋಳ ಹಾಕಬೇಡಿ ಅಂತಾ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೆ, ಪೊಲೀಸ ಅಧಿಕಾರಿಗಳು ‘ಇರೋದು‌ ನಾಲ್ಕು ಜನ ಮೆನ್ ರೀ, ಠಾಣೆಯಲ್ಲಿ ಯಾರೂ ಇಲ್ಲ. ಅವನು ಓಡಿ ಹೋದರೆ ಏನ್ ಮಾಡಬೇಕು? ಯಾರು ಜವಾಬ್ದಾರಿ’ ಎಂದು ತಮ್ಮದೇ ಆದ ವಾದ ಮುಂದಿಡುತ್ತಾರೆ.

ಸರಿ, ಪೊಲೀಸರ ‌ವಾದ ಒಪ್ಪಿ ಈ ಪ್ರಕರಣ ನೋಡುವುದಾದರೆ, ‘ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಕೇಂದ್ರ ಆಗಿವೆ. ಸಿವಿಲ್ ಕೇಸ್ ನಲ್ಲಿ ಸುಳ್ಳು ಸಾಕ್ಷಿ ಹೇಳುವಂತೆ ಒತ್ತಡ ಹಾಕಲು ಸಣ್ಣ ಹನುಮಂತಪ್ಪನನ್ನು ಠಾಣೆಗೆ ತಂದು ಕೋಳ ಹಾಕಿದ್ದಾರೆ’ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಮುಜುಗರ ತಪ್ಪಿಸಿಕೊಳ್ಳಲು ಪೊಲೀಸರು ಸಣ್ಣ ಹನುಮಂತಪ್ಪನಿಗೆ ಮಟ್ಕಾ ಬುಕ್ಕಿ ಎಂಬ ಹಣೆ ಪಟ್ಟಿ ಕಟ್ಟಿದ್ದಾರೆ. ಸರಿ ಹಾಗಾದರೆ ಕನಕಗಿರಿ ಪೊಲೀಸರು ಈ ಎಲ್ಲ ಪ್ರಶ್ನೆಗೆ ಉತ್ತರಿಸಬೇಕಿದೆ.

1) ಸದರಿ ಸಣ್ಣ ಹನುಮಂತಪ್ಪ ವಿರುದ್ಧ ಈ ವರೆಗೆ ಎಷ್ಟು ಮಟ್ಕಾ ಪ್ರಕರಣ ದಾಖಲಾಗಿವೆ?

2) ಇದೇ ಮೊದಲು ಎನ್ನುವುದಾದರೆ ಮಟ್ಕಾ ಬರೆಯುವ ಆತ ಅಥಣಿಗೆ ಕಬ್ಬು ಕುಡಿಯಲು ಹೊಗಿದ್ದು ಏಕೆ?

3) ಆತ ಮಟ್ಕಾ ಬುಕ್ಕಿಯೇ ಆಗಿದ್ದರೆ ಆಗಸ್ಟ್ ‌2ರ ಸಂಜೆ ವರೆಗೆ ಎಫ್ಐಆರ್ ಏಕೆ ಮಾಡಿಲ್ಲ?

4) ಯಾರೋ ಒಬ್ಬರು ಕಾನೂನು ಚೌಕಟ್ಟಿನಡಿ ಮಾತನಾಡಿ ಕೂಡಲೇ ಆತನನ್ನು ಬಿಟ್ಟು ಕಳುಹಿಸಿದ್ದು ಏಕೆ?

5) ಮಟ್ಕಾ ಬುಕ್ಕಿ ಜೊತೆಗೆ ಆತನ ಪತ್ನಿಯನ್ನು ಪೊಲೀಸ್ ಠಾಣೆಗೆ ಕರೆ ತಂದಿದ್ದು ಏಕೆ?

ಕೋರ್ಟ್ ನಲ್ಲಿ ಸುಳ್ಳು ಸಾಕ್ಷಿ ‌ಹೇಳುವಂತೆ ವ್ಯಕ್ತಿ ಒಬ್ಬನನ್ನು ಪೊಲೀಸ್ ಠಾಣೆಗೆ ಕರೆ‌ ತಂದು ಕೋಳ ಹಾಕುವುದು ಅಷ್ಟು ಹಗುರವಾಗಿ ಪರಿಗಣಿಸುವ‌ ಪ್ರಕರಣ ಅಲ್ಲ.‌ಇಗಾಗಲೇ ಪೊಲೀಸ್ ವ್ಯವಸ್ಥೆ ಮೇಲೆ ಜನ ಸಾಮಾನ್ಯರು ನಂಬಿಕೆ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ ಪೊಲೀಸ್ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಮಾಡಬೇಕಿದೆ..

ಪೊಲೀಸರು ಸಣ್ಣ ಹನುಮಂತಪ್ಪನ ಮೊಬೈಲ್ ಕಸಿದುಕೊಂಡು, ತಮಗೆ ಪರಿಚಿತ ಮಟ್ಕಾ ಬುಕ್ಕಿಯಿಂದ ಪಟ್ಟಿ ಹಾಕಿಸಿದ್ದಾರೆ ಎಂದು ಮುಕ್ಕುಂದರಾವ್ ಭವಾನಿಮಠ ಆರೋಪಿಸಿದ್ದಾರೆ. ಈ ಹಿನ್ನೆಲೆ ಆರೋಪಿಯ ಕಳೆದ 6 ತಿಂಗಳ ಚಟುವಟಿಕೆ ತನಿಖೆ ಮಾಡಬೇಕಿದೆ. ತಪ್ಪಿದ್ದರೆ ವ್ಯಕ್ತಿ ಮೇಲೆ ಕೇಸ್ ಮಾಡಲಿ. ಇಲ್ಲವಾದರೆ ಅಕ್ರಮವಾಗಿ ಕೂಡಿ ಹಾಕಿದ ಪಿಐರನ್ನು ಅಮಾನತು ಮಾಡಿ, ಇಲಾಖೆ ತನಿಖೆ ಮುಗಿವ ವರೆಗೆ ಪೋಸ್ಟಿಂಗ್ ಕೊಡದಿರಲಿ.

Leave a Reply

Your email address will not be published. Required fields are marked *

error: Content is protected !!