ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ

ಕೊಪ್ಪಳ ಜನವರಿ 26 : ಕೊಪ್ಪಳ ನಗರದಲ್ಲಿ ನೂತನ ಪತ್ರಿಕಾ ಭವನದ ಕಾಮಗಾರಿಗೆ ರಾಜ್ಯ ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಅವರು ಜನವರಿ 26 ರಂದು ಭೂಮಿ ಪೂಜೆ ನೆರವೇರಿಸಿದರು.
ಈ ಮೂಲಕ ಕೊಪ್ಪಳ ಜಿಲ್ಲೆಯ ಪತ್ರಕರ್ತರ ಬಹುದಿನಗಳ ಕನಸು ನನಸಾಯಿತು. ಕೊಪ್ಪಳ ಜಿಲ್ಲಾ ಪತ್ರಿಕಾರಂಗದ ಇತಿಹಾಸದಲ್ಲಿ ಜನವರಿ 26 ಇತಿಹಾಸಿಕ ದಿನವಾಗಿ ಉಳಿಯಿತು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ) ಕೊಪ್ಪಳ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಯಶಸ್ವಿನಿ ಲೇಔಟ್ ಈಶಾನ್ಯ ಭಾಗದಲ್ಲಿ ಆಯೋಜಿಸಿದ್ದ ಭೂಮಿಪೂಜೆಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಂಸದರಾದ ಕರಡಿ ಸಂಗಣ್ಣ, ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸೇರಿದಂತೆ ಗಣ್ಯರು ಮತ್ತು ಅಧಿಕಾರಿಗಳು ಸಾಕ್ಷಿಯಾದರು.

ಇದಕ್ಕು ಮೊದಲು, ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಸಚಿವರು, ಸಂಸದರು, ಶಾಸಕರು, ಗಣ್ಯರು, ಸಾಹಿತಿಗಳು ಮತ್ತು ಅಧಿಕಾರಿಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಬಸವರಾಜ ತಿಪ್ಪಣ್ಣನವರ (ಗುಡ್ಲಾನೂರು), ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಎಂ.ಸಾದಿಕ್ ಅಲಿ, ರಾಜ್ಯ ಕಾರ್ಯಕಾರಿನಿ ಸದಸ್ಯರಾದ (ವಿಶೇಷ ಆಹ್ವಾನಿತರು) ಎಚ್.ಎಸ್ ಹರೀಶ್, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸದಸ್ಯರಾದ ಜಿ.ಎಸ್ ಗೋನಾಳ್, ಕ.ಕಾ.ಪ.ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೈ.ನಾಗರಾಜ, ಪತ್ರಿಕಾ ಭವನ ಕಟ್ಟಡ ಸಮಿತಿಯ ಅಧ್ಯಕ್ಷರಾದ ಎನ್.ಎಂ ದೊಡ್ಡಮನಿ, ಕಾರ್ಯದರ್ಶಿಗಳಾದ ಹನುಮಂತ ಹಳ್ಳಿಕೇರಿ, ಕ.ಕಾ.ಪ.ಸಂಘದ ಕೊಪ್ಪಳ ಉಪಾಧ್ಯಕ್ಷರಾದ ರುದ್ರಗೌಡ ಪಾಟೀಲ್, ಜಿಲ್ಲಾ ಕಾರ್ಯದರ್ಶಿಗಳಾದ ವೀರಣ್ಣ ಕಳ್ಳಿಮನಿ, ಸಂಘದ ಜಿಲ್ಲಾ ಖಜಾಂಚಿ ರಾಜು ಬಿ.ಆರ್ ಸೇರಿದಂತೆ ಕ.ಕಾ.ಪ.ಸಂಘದ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡದ್ದು ವಿಶೇಷವಾಗಿತ್ತು.
ಬಳಿಕ ಪುರೋಹಿತರ ಸಮ್ಮುಖದಲ್ಲಿ ನೂತನ ಕಟ್ಟಡ ಕಾಮಗಾರಿಗೆ ಸಚಿವರು, ಸಂಸದರು, ಶಾಸಕರು ಭೂಮಿಪೂಜೆ ನೆರವೇರಿಸಿದರು.
ಪತ್ರಕರ್ತರೂ ಒಗ್ಗಟ್ಟಿನಿಂದಿರಲಿ: ಬಳಿಕ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ಸಚಿವರಾದ ಆನಂದ ಸಿಂಗ್ ಅವರು ಮಾತನಾಡಿ, ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರ ಕೂಡ ಮಹತ್ವದ್ದಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ತತ್ವಕ್ಕೆ ಎಲ್ಲರೂ ಬದ್ಧರಾಗಿರಬೇಕು. ಸಮಾಜದ ಗೌರವಕ್ಕೆ ಪಾತ್ರರಾಗುವ ಪತ್ರಕರ್ತರನ್ನು ಪ್ರತಿನಿಧಿಸುವ ಪತ್ರಿಕಾ ಸಂಘಟನೆಗಳು ತುಂಡು ತುಂಡು ಆಗುವುದು ಆರೋಗ್ಯಕರ ಬೆಳವಣಿಗೆಯಲ್ಲ ಈ ರೀತಿಯ ಕೊಪ್ಪಳ ಪತ್ರಕರ್ತರ ಆ ವ್ಯವಸ್ಥೆ ನಮ್ಮಂತ ರಾಜಕಾರಣಿಗಳಿಗೆ ಅನುಕೂಲ ಅನ್ನಬಹುದು ಯಾಕೆಂದರೆ ನಾವು ಭ್ರಷ್ಟಾಚಾರ ಮಾಡಲು ನೀವು ಅನುಕೂಲ ಮಾಡಿಕೊಡುತ್ತೀರಿ ಅನ್ನುವ ರೀತಿಯಲ್ಲಿ ವ್ಯಂಗ್ಯವಾಗಿ ಮಾತನಾಡಿದ ಆನಂದ್ ಸಿಂಗ್ ನಿಜಕ್ಕೂ ಅರ್ಥಗರ್ಭಿತ ಮಾತುಗಳನ್ನು ಹೇಳಿದರು.
ಸಮಾಜ ಸುಧಾರಣೆ ಮಾಡಬೇಕು ಎನ್ನುವಂತಹ ಮನಸ್ಸುಳ್ಳವರಿಗೆ  ಪತ್ರಿಕಾರಂಗವು ಆಯ್ಕೆಯೋಗ್ಯ ಕ್ಷೇತ್ರವಾಗಿದೆ ಎಂದು ಪ್ರತಿಪಾದಿಸಿದ ಸಚಿವರು, ಪತ್ರಕರ್ತರ ಲೇಖನಿಯಲ್ಲಿ ಅಂತಹದ್ದೊಂದು ತಾಕತ್ತು, ಶಕ್ತಿಯಿದೆ. ಪತ್ರಕರ್ತರು ತಾವು ನಡೆಯುವ ಹಾದಿಯಲ್ಲಿ ಎಚ್ಚರವಹಿಸಬೇಕು. ಇಲ್ಲದಿದ್ದರೆ ಕೆಡಸುವವರು ಇವರೇ, ಸರಿ ಆಗಬೇಕು ಅನ್ನುವವರು ಇವರೇ ಎಂದು ಸಾರ್ವಜನಿಕರು ಪತ್ರಕರ್ತರ ಬಗ್ಗೆ ಸಂಶಯಪಡುವಂತಾಗುತ್ತದೆ ಎಂದು ತಿಳಿಸಿದರು

ಸಮರ್ಥನೆ ಮಾಡುವ ಸ್ವಭಾವ ನನ್ನದಲ್ಲ; ತಿದ್ದಿಕೊಳ್ಳುವ ಗುಣ ಹೊಂದಿದ್ದೇನೆ. ಏನೇ ಇರಲಿ, ಹಿಂದೆ ಮುಂದೆ ನೋಡದೇ ಇರುವುದನ್ನು ನೇರವಾಗಿ ಹೇಳುವ, ಯಾರಾದರು ನೊಂದು ಬಂದರೆ ಕರಗಿ ತಕ್ಷಣ ಸ್ಪಂದಿಸುವ ಮನೋಭಾವ ತಮ್ಮದಾಗಿದೆ ಎಂದು ಹೇಳಿದ ಸಚಿವರು, ಸಮಾಜ ಕಟ್ಟುವ ಕೆಲಸಕ್ಕೆ ನಾನು ಸದಾ ಜೊತೆಗಿರುತ್ತೇನೆ ಎಂದರು.
ಕೊಪ್ಪಳದ ಗವಿಮಠದಲ್ಲಿನ ವಿದ್ಯಾರ್ಥಿಗಳ ಓದಿಗೆ, ಪತ್ರಿಕಾ ಭವನ ನಿರ್ಮಾಣ ಸೇರಿದಂತೆ ಹೀಗೆ ಹತ್ತಾರು ಜನಪಯೋಗಿ ಕಾರ್ಯಕ್ಕೆ ಹಣ ನೀಡಿ ತಾವು ಸಹಕರಿಸಿದ್ದು, ಇದರಿಂದ ಜನತೆಗೆ ಅನುಕೂಲವಾದಾಗ ಹೆಮ್ಮೆಯ ಅನಿಸುತ್ತದೆ ಎಂದು ಸಚಿವರು ಹೇಳಿದರು.
ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಆಶಯ ಮಾತುಗಳನ್ನಾಡಿ, ಹಲವಾರು ದಶಕಗಳ ಇತಿಹಾಸ ಹೊಂದಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸಂಘಟನಾತ್ಮಕ ವಿಷಯದಲ್ಲಿ ದಿಟ್ಟ ಹೆಜ್ಜೆಗಳನ್ನಿಡುತ್ತಿದೆ. ಸಮಾಜಮುಖಿಯಾಗಿ ಕೆಲಸ ಮಾಡುತ್ತ ಪತ್ರಕರ್ತರಿಗೆ ಆಶಾಕಿರಣವಾಗಿದೆ ಎಂದರು.
ನಿರಂತರ ಓದು, ಬರಹ ಮತ್ತು ವ್ಯವಸ್ಥೆಯ ಬಗ್ಗೆ ಅರಿವಿದ್ದಾಗ ಮಾತ್ರ ಪತ್ರಿಕಾವೃತ್ತಿಯಲ್ಲಿ ಯಶ ಕಾಣಲು ಸಾಧ್ಯ. ಆದರೆ, ಇತ್ತೀಚೆಗೆ ದಿನ ಬೆಳಗಾಗುತ್ತಲೇ ತಾನು ಪತ್ರಕರ್ತ ಅನ್ನುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಇದು ಇಂದಿನ ದೊಡ್ಡ ಸವಾಲಾಗಿದ್ದು, ಈ ಮಧ್ಯೆಯೇ ವೃತ್ತಿನಿರತ ಪ್ರಾಮಾಣಿಕ ಪತ್ರಕರ್ತರಿಗೆ ಸಂಘದಿಂದ ನ್ಯಾಯ ಒದಗಿಸಲು ಪ್ರಯತ್ನಿಸಲಾಗುತ್ತದೆ ಎಂದರು. ಕೊಪ್ಪಳ ಪತ್ರಿಕಾ ಭವನ ನಿರ್ಮಾಣ ಕಾರ್ಯಕ್ಕೆ ಜನಪ್ರತಿನಿಧಿಗಳು ಇನ್ನೂ ಹೆಚ್ಚಿನ ಹಣಕಾಸಿನ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಸಂಘದ ಎಂ.ಸಾದಿಕ್ ಅಲಿ ಅವರು ಪ್ರಾಸ್ತಾವಿಕ ಮಾತನಾಡಿ, ಸಂಘದ ಸದಸ್ಯರ ಮನವಿಗೆ ತಕ್ಷಣ ಸ್ಪಂದಿಸಿ ಸಚಿವರಾದ ಆನಂದ ಸಿಂಗ್, ಸಂಸದರಾದ ಕರಡಿ ಸಂಗಣ್ಣ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಹೇಮಲತಾ ನಾಯಕ ಅವರು ಹಣಕಾಸಿನ ನೆರವು ನೀಡಿದ್ದರಿಂದ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರವು ನಿವೇಶನಕ್ಕೆ ಅವಕಾಶ ಕಲ್ಪಿಸಿದ್ದರಿಂದ, ಕೊಪ್ಪಳವು ಜಿಲ್ಲೆಯಾಗಿ 25 ವರ್ಷಗಳ ನಂತರ ಇದೀಗ ಜಿಲ್ಲೆಯಲ್ಲಿ ನೂತನವಾಗಿ ಪತ್ರಿಕಾ ಭವನ ನಿರ್ಮಾಣ ಆಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಸಂಘದ ಅಧ್ಯಕ್ಷರಾದ ಬಸವರಾಜ ತಿಪ್ಪಣ್ಣವರ (ಗೂಡ್ಲಾನೂರ) ಅವರು ಸ್ವಾಗತ ಕೋರಿದರು. ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಾಂತೇಶ ಎಸ್ ಪಾಟೀಲ್, ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಜಿ.ಸಿ ಲೋಕೇಶ್, ಸಂಘದ ರಾಜ್ಯ ಕಾರ್ಯದರ್ಶಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸೋಮಶೇಖರ ಕೆರೆಗೋಡ್, ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ, ನಗರದ ಪತ್ರಕರ್ತರು, ವಿವಿಧ ಸಂಘಟನೆಗಳ ಪ್ರಮುಖರು ಮತ್ತು ಇನ್ನೀತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!