ಈ ಶೀರ್ಷಿಕೆ ಒಪ್ಪದವರು ಸಾಕಷ್ಟು ಜನರಿದ್ದಾರೆ.
ಆದರೆ, ಇದು ಸತ್ಯ ಎಂಬುದು ಸಾಕಷ್ಟು ಸಲ ಅನುಭವಕ್ಕೆ ಬಂದಿದೆ. ಬದುಕು ನಿಜಕ್ಕೂ ಸರಳವೇ. ನಮ್ಮ ದಡ್ಡತನ, ಹಂಬಲ, ಅತಿ ಆಕಾಂಕ್ಷೆ, ತಪ್ಪು ತಿಳಿವಳಿಕೆ, ಕೈಲಾಗದತನ ತಿಳಿವಳಿಕೆಯ ಕೊರತೆ ಹಾಗೂ ಸೋಮಾರಿತನದಿಂದಾಗಿ ಬದುಕನ್ನು ನಾವೇ ಸಂಕೀರ್ಣ ಮಾಡಿಕೊಂಡಿರುತ್ತೇವೆ.
ʼನಮ್ಮ ದುಃಸ್ಥಿತಿಗೆ ಕಾರಣ ನಾವೇʼ-
ಹಾಗಂತ ಹೇಳಿ ನೋಡಿ? ಸಾಕಷ್ಟು ಜನ ವಿರೋಧಿಸುತ್ತಾರೆ.
ನಾನು ಸರಿಯಾಗೇ ಇದ್ದೇನೆ. ಪ್ರಾಮಾಣಿಕನಾಗಿದ್ದೇನೆ. ಪ್ರಯತ್ನಶೀಲನಾಗಿದ್ದೇನೆ. ಇತರರಿಗೆ ಕೆಟ್ಟದು ಬಯಸಿಲ್ಲ. ಕಾನೂನು ಪಾಲಿಸುತ್ತಲೇ ಬಂದಿದ್ದೇನೆ. ಮೋಸ ಮಾಡಿಲ್ಲ. ಅನ್ಯಾಯ ಎಸಗಿಲ್ಲ. ಆದರೂ ನನಗೆ ಒಳ್ಳೆಯದಾಗಲಿಲ್ಲ. ನನ್ನ ಒಳ್ಳೆಯತನವನ್ನು ಜಗತ್ತು ದುರುಪಯೋಗಪಡಿಸಿಕೊಂಡಿತು ನನಗೆ ಅನ್ಯಾಯವಾಯಿತು ಎಂದು ಹಲುಬುವವರಿಗೆ ಕೊರತೆಯಿಲ್ಲ.
ಅವರ ಅನಿಸಿಕೆ ಸರಿಯೆ?
ಈ ದ್ವಂದ್ವ ನನ್ನನ್ನು ಮೂರ್ನಾಲ್ಕು ದಶಕ ಕಾಡಿದೆ. ಒಂದು ಕಾಲದಲ್ಲಿ ನಾನು ಹೀಗೇ ಯೋಚಿಸುತ್ತಿದ್ದೆ. ಹೀಗೇ ನಡೆದುಕೊಳ್ಳುತ್ತಿದ್ದೆ. ಫಲಿತಾಂಶ ಕೂಡಾ ಹೀಗೇ ಇತ್ತು.
ಕ್ರಮೇಣ ಒಂದು ವಿಷಯ ಅರ್ಥವಾಯಿತು.
ಜಗತ್ತು ಜಿಮ್ ಇದ್ದಂತೆ.
ಜಿಮ್ ಎಂದಿಗೂ ಬದಲಾಗುವುದಿಲ್ಲ. ಅಲ್ಲಿರುವ ತೂಕದ ಬಟ್ಟುಗಳ ತೂಕ ಕಡಿಮೆಯಾಗುವುದಿಲ್ಲ. ರಾಡ್‌ಗಳ ಬಲ ಕುಂದುವುದಿಲ್ಲ.
ಬದಲಾಗುವವರು ನಾವೇ.
ಬದುಕು ಒಂಥರಾ ಈ ಜಿಮ್‌ನ ಹಾಗೆ.
ಬದುಕೆಂಬ ಈ ಜಿಮ್ ನಮ್ಮನ್ನು ಬದಲಿಸುತ್ತದೆ. ಮಾಗಿಸುತ್ತದೆ ಅಥವಾ ಗಾಯಗೊಳಿಸುತ್ತದೆ. ಫಲಿತಾಂಶ ಏನೇ ಆದರೂ, ಜಿಮ್ ಎಂದಿನಂತೇ ಇರುತ್ತದೆ.
ಬದಲಾಗುವವರು, ಬದಲಾಗಬೇಕಾದವರು ನಾವೇ.
ಹೀಗಾಗಿ, ಜಗತ್ತನ್ನು ಹಳಿಯದಿರಿ. ಅದರಿಂದ ಏನೂ ಉಪಯೋಗವಿಲ್ಲ. ಹಳಿದುಕೊಳ್ಳುವುದಾದರೆ, ನಿಮ್ಮ ತಪ್ಪುಗಳನ್ನು ಬೈದುಕೊಳ್ಳಿ. ನಿಮ್ಮ ನಡೆಗಳನ್ನು ವಿಶ್ಲೇಷಿಸಿಕೊಳ್ಳಿ. ಎಲ್ಲಿ ತಪ್ಪಾಯಿತು ಎಂದು ಪ್ರಾಂಜಲ ಮನಸ್ಸಿನಿಂದ ಪರಿಶೀಲಿಸಿಕೊಳ್ಳಿ. ಅದು ನಿಮ್ಮನ್ನು ಬಲುಬೇಗ ಸರಿದಾರಿಗೆ ತರಬಲ್ಲುದು.
ಅಂತಹದೊಂದು ಪ್ರಾಂಜಲ ಮನಸ್ಸಿನ ಒಪ್ಪಿಕೊಳ್ಳುವಿಕೆ ಸುಲಭದ ಸಂಗತಿಯೇನಲ್ಲ. ಅದಕ್ಕೆ ತಪನೆ ಬೇಕು. ಸಹನೆ ಬೇಕು. ಪ್ರಯತ್ನಶೀಲತೆ ಬೇಕು. ಸಕ್ರಿಯತೆ ಬೇಕು. ಗಳಿಸಿದ ಅನುಭವಗಳನ್ನು ಬಳಸಿಕೊಳ್ಳುವ ಜಾಣ್ಮೆ ಹಾಗೂ ವಿವೇಕ ಬೇಕು.
ಒಟ್ಟಾರೆ ಹೇಳುವುದಾದರೆ, ತಿಳಿವಳಿಕೆ ಜಾಗೃತವಾಗಬೇಕು.
ಆಗ ಮಾತ್ರ, ಬದುಕು ಮತ್ತು ವಾಸ್ತವದ ನಡುವಿನ ತೆಳುವಾದ ವ್ಯತ್ಯಾಸ ಸ್ಪಷ್ಟವಾಗುತ್ತದೆ. ಏನು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬುದು ನಿಚ್ಚಳವಾಗುತ್ತದೆ.
ಆಗ ನಮ್ಮಷ್ಟಕ್ಕೆ ನಾವೇ ನಕ್ಕುಬಿಡುತ್ತೇವೆ. ʼಅರೆ, ಬದುಕು ನಿಜಕ್ಕೂ ಸರಳ. ನಮ್ಮ ಅಜ್ಞಾನದಿಂದಾಗಿ ಅದನ್ನು ಸಂಕೀರ್ಣ ಮಾಡಿಕೊಂಡಿದ್ದೆವುʼ ಎಂಬುದು ಅರ್ಥವಾಗುತ್ತದೆ.
ಅಂತಹ ಪ್ರಾಜ್ಞತೆ, ತಿಳಿವಳಿಕೆ, ಅರ್ಥವಂತಿಕೆ ದಕ್ಕಿದಾಗ ನಾವು ನಿಜಕ್ಕೂ ಬದುಕನ್ನು ಆಸ್ವಾದಿಸತೊಡಗುತ್ತೇವೆ. ನಿಜವಾದ ಬದುಕನ್ನು ಬದುಕತೊಡಗುತ್ತೇವೆ.
ಅದೇ ನೆಮ್ಮದಿ. ಅದೇ ನಿಜವಾದ ಸಾಕ್ಷಾತ್ಕಾರ!
– ಚಾಮರಾಜ ಸವಡಿ | ಕೊಪ್ಪಳ