ಕೆರೆ ತುಂಬಿಸುವ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಸಿಐಡಿ ತನಿಖೆಗೆ ಮಾಜಿ ಶಾಸಕ ಕರಿಯಣ್ಣ ಸಂಗಟಿ ಆಗ್ರಹ
ಗಂಗಾವತಿಯ ತಾಲೂಕಿನಲ್ಲಿ ಪ್ರಥಮ ಗುತ್ತಿಗೆದಾರರಾದ ವೀರಯ್ಯ ಹಿರೇಮಠ ಎಂಬುವರು ಈ ಕೆರೆ ನೀರು ತುಂಬಿಸುವ ಯೋಜನೆಯ ದಾಖಲೆಗಳನ್ನು ಸ್ವಯಂಕೃತವಾಗಿ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡುವ ಹುನ್ನಾರ ನಡೆಸಿದ್ದಾರೆ. ಈ ಕುರಿತು ನಾವು ಕೋರ್ಟ್ ಮೊರೆ ಹೋಗಲು ಸನ್ನದ್ಧರಾಗಿದ್ದೇವೆ.
:ಅಮರೇಶ ಹೊಸಮನಿ: |
ಕೊಪ್ಪಳ : 23 ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮುಕ್ಕುಂಪಿ ಗ್ರಾಮವು ಸೇರಿದಂತೆ ಅನೇಕ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಕರಿಯಣ್ಣ ಸಂಗಟಿ ಆರೋಪಿಸಿದರು.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಏರ್ಪಡಿಸಿ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸುತ್ತಾ ಮಾತನಾಡಿ, ಈ ಯೋಜನೆಗೆ 117 ಕೋಟಿ ರೂ.ಮಂಜುರಾಗಿದ್ದು, ಈಗಾಗಲೆ ಈ ಹಣದಲ್ಲಿ ಸುಮಾರು 50 ಕೋಟಿ ರೂ.ಬಿಲ್ ಎತ್ತುವಳಿ ಮಾಡಲಾಗಿದೆ. ಪ್ರಸ್ತುತ ಕಾಮಗಾರಿಗೆ ಬಳಸಿದ ಕಬ್ಬಿಣದ ರಾಡ್ ಗಳು ಸೇರಿದಂತೆ ನಾನಾ ವಸ್ತುಗಳು ಕಲಬೆರಕೆಯಿಂದ ಕೂಡಿವೆ. ಈ ಯೋಜನೆಗೆ ನೀತಿ, ನಿಯಮಗಳನ್ನು ಸರಿಯಾಗಿ ಪಾಲನೆಯಾಗಿಲ್ಲ. ಟೆಂಡರ್ ಪ್ರಕ್ರಿಯೆಯಲ್ಲಿಯೂ ತಾರತಮ್ಯವನ್ನು ಮಾಡಲಾಗಿದೆ.ಕೆಲವು ನಿಯಮಗಳನ್ನು ಗಾಳಿಗೆ ತೂರಿ, ಬಿಲ್ ಎತ್ತುವಳಿಗೆ ಅನುಕೂಲವಾಗುವಂತೆ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಗುತ್ತಿಗೆದಾರರಾದ ವೀರಯ್ಯ ಹಿರೇಮಠ ಎಂಬುವರು ಅಧಿಕಾರಿಗಳನ್ನು ಮತ್ತು ಶಾಸಕರನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಂತೇ ವರ್ತಿಸುತ್ತಿದ್ದಾರೆ. ಹೀಗಾಗಿ ಇದು ಸಿಐಡಿ ಮಟ್ಟದಲ್ಲಿ ಸಮಗ್ರ ತನಿಖೆಯಾಗಬೇಕು ಎಂದು ಸಂಗಟಿ ಆಗ್ರಹಿಸಿದರು.