ಶುಕಪುರದ ಕೆರೆಯೋ…? ಗಿಣಿಗಳ ಕೆರೆಯೋ…? ಗಿಣಿಗೇರಿ ಕೆರೆಯೋ…?

 

ಲೇಖಕರು-

ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್
ಹಿರಿಯ ಶ್ರೇಣಿ ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊ ಸಂ : ೯೪೪೮೫೭೦೩೪೦
Email:[email protected]

ಗಿಣಿಗೇರಿ, ಗಿಣಿಗೇರಾ, ಗಿಣಗೇರಾ, ಶುಕಪುರಿ ಎಂದು ಕರೆಸಿಕೊಳ್ಳುತ್ತಿರುವ ಈ ಗ್ರಾಮವು ಕೊಪ್ಪಳ ನಗರದಿಂದ ಸುಮಾರು ಹತ್ತು ಕಿ.ಮೀ ದೂರದಲ್ಲಿದೆ. ಈ ಗ್ರಾಮವು ಪ್ರಾಚೀನ ಕಾಲದಲ್ಲಿ ಐತಿಹಾಸಿಕ ಗ್ರಾಮವೇ ಆಗಿತ್ತು ಎನ್ನುವುದಕ್ಕೆ ಇಲ್ಲಿ ಕೆಲವೇ ಕೆಲವು ಸ್ಮಾರಕಗಳು ಮಾತ್ರ ಲಭ್ಯವಾಗಿವೆ. ಆದರೂ ಸಹ ಇದರ ಚರಿತ್ರೆ ಸಾಮಾನ್ಯವಾದುದು ಆಗಿಲ್ಲ ಎನ್ನುವುದು ಮಾತ್ರ ಸತ್ಯ. ಬಹು ಪುರಾತನ ಕಾಲದಿಂದಲೂ ಈ ಗಿಣಿಗೇರಿ ಗ್ರಾಮ ಇದ್ದ ಬಗ್ಗೆ ಕೆಲ ಸ್ಮಾರಕಗಳು ಹೇಳುತ್ತವೆ. ಈ ಗ್ರಾಮದಲ್ಲಿ ಶಾಸನಗಳಗಾಲಿ ಇಲ್ಲವೆ ಪ್ರಾಚೀನ ಕಾಲದ ದೇವಸ್ಥಾನಗಳು ಲಭ್ಯವಿಲ್ಲ. ಆದರೆ ಈ ಗ್ರಾಮದಲ್ಲಿ ಪ್ರಾಚೀನ ಕಾಲದ ಸಂಪೂರ್ಣ ಭಗ್ನಗೊಂಡ ಒಂದು ಜೈನ ಬಸದಿಯು ಕಂಡುಬರುತ್ತಿದೆ. ಹೀಗಾಗಿ ಇದು ಪ್ರಾಚೀನ ಕಾಲದಲ್ಲಿ ಜೈನಧರ್ಮದ ಸಾಂಸ್ಕೃತಿಕ ಕೇಂದ್ರವಾಗಿರಬೇಕು. ಆದರೆ ಅದಕ್ಕೆ ಸಂಬಂಧಿಸಿದ ಇತರೆ ಯಾವುದೇ ಕುರುಹುಗಳು ಲಭ್ಯವಾಗಿಲ್ಲ. ಆದರೂ ಈ ಒಂದು ಬಸದಿ ಸ್ಮಾರಕವನ್ನು ಗಮನಿಸಿದಾಗ ಪ್ರಾಚೀನ ಕಾಲದಲ್ಲಿ ಇದೊಂದು ಜೈನಧರ್ಮದ ಸಾಂಪ್ರದಾಯಿಕ ಕೇಂದ್ರವಾಗಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ.
ಪ್ರಾಚೀನ ಕಾಲದಲ್ಲಿ ಈ ಗ್ರಾಮವನ್ನು ‘ಶುಕಪುರಿ’ ಎಂದು ಕರೆಯಲಾಗುತ್ತಿತ್ತು ಎಂಬುದು ಇಲ್ಲಿನ ಹಿರಿಯರ ಅಭಿಪ್ರಾಯವಾಗಿದೆ. ‘ಶುಕಪುರಿ’ ಎನ್ನುವುದು ಸಂಸ್ಕೃತ ಪದವಾಗಿದ್ದು, ‘ಶುಕ’ ಮತ್ತು ‘ಪುರಿ’ ಎಂಬ ಎರಡು ಶಬ್ಧಗಳಿಂದ ಸಮ್ಮಿಳಿತಗೊಂಡಿದೆ. ‘ಶುಕ’ ಎಂದರೆ ‘ಗಿಣಿ’(ಗಿಳಿ) ಎಂಬ ಅರ್ಥವನ್ನು ಕೊಡುತ್ತದೆ. ಅಲ್ಲದೇ ಬಾಗೂರುದಮರ, ಶಾಲ್ಮಲಿ ವೃಕ್ಷ(ಬಾಗೆಮರ), ಶಿರಿಷ ವೃಕ್ಷ, ಮುತ್ತುಗ(ಶುಕನಾಶ), ಮಾವಿನಮರ ಮುಂತಾದ ಮರಗಳನ್ನು ‘ಶುಕಮರ’ಗಳೆಂದು ಕರೆಯಲಾಗುತ್ತಿದೆ. ಬಹುಶಃ ಹೆಚ್ಚಾಗಿ ‘ಶುಕ’(ಗಿಣಿ)ಗಳು ಕುಳಿತಿಕೊಳ್ಳುವ ಮತ್ತು ಆಶ್ರಯ ಪಡೆದಿರುವ ಇಲ್ಲವೆ ಅವುಗಳಿಗೆ ಇಷ್ಟವಾಗುವ ಹಣ್ಣುಗಳನ್ನು ನೀಡುವ ಮರಗಳಿಗೆ ‘ಶುಕಮರ’ಗಳೆಂದು ಕರೆದಿರುವ ಸಾಧ್ಯತೆಯಿದೆ.

ಅಲ್ಲದೇ ‘ಗಿಣಿ’ಗಳ ಭೌತಿಕ ಆಕಾರ ಹೊಂದಿರುವ ಮರಗಳನ್ನೂ ಸಹ ‘ಶುಕ’ಮರಗಳೆಂದು ಕರೆಯಲಾಗುತ್ತಿತ್ತು. ಇನ್ನು ‘ಪುರಿ’ ಎಂಬ ಶಬ್ಧಕ್ಕೆ ಸಂವಾದಿಯಾಗಿ ‘ಪುರ’ ಎಂದೂ ಸಹ ಬಳಸಲಾಗುತ್ತಿದೆ. ‘ಪುರ’ ಎಂದರೆ ಸಾಮಾನ್ಯವಾಗಿ ಊರು, ಹಳ್ಳಿ ಅಥವಾ ಗ್ರಾಮ ಎಂಬ ಅರ್ಥಗಳನ್ನು ಕೊಡುತ್ತದೆ. ಆದರೆ ಈ ‘ಪುರ’ ಎಂಬ ಶಬ್ದವನ್ನು ಸಣ್ಣ-ಪುಟ್ಟ ಗ್ರಾಮಗಳಿಗೆ ಇಲ್ಲವೆ ಊರುಗಳಿಗೆ ಬಳಸಲಾಗುತ್ತಿರಲಿಲ್ಲ. ಬಹುಶಃ ಪ್ರಾಚೀನ ಕಾಲದಲ್ಲಿ ಈ ಗಿಣಿಗೇರಿ ಗ್ರಾಮವು ಬಹುದೊಡ್ಡ ಗ್ರಾಮ, ಇಲ್ಲವೆ ದೊಡ್ಡ ನಗರವೇ ಆಗಿರಬೇಕು ಎಂದೆನಿಸುತ್ತದೆ. ದೊಡ್ಡ ದೊಡ್ಡ ವಿದ್ವಾಂಸರು ವಾಸಮಾಡುವ ಗ್ರಾಮಗಳಿಗೆ ಮಾತ್ರ ‘ಪುರ’ ಎಂಬ ಹೆಸರುಗಳಿಂದ ಕರೆಯಲಾಗುತ್ತಿದ್ದದ್ದು ಚರಿತ್ರೆಗಳಿಂದ ತಿಳಿದುಬರುತ್ತದೆ. ಪ್ರಾಚೀನ ಕಾಲದಲ್ಲಿ ಈ ಗಿಣಿಗೇರಿ ಗ್ರಾಮವು ಪಂಡಿತ-ಪಾಮರರಿಂದ ತುಂಬಿಕೊಂಡಿತ್ತು. ಇಲ್ಲಿ ಪಾಠ-ಪ್ರವಚನ, ಯಜ್ಞ-ಯಾಗಾದಿಗಳು ನಡೆಯುತ್ತಿರಬೇಕು, ವಿದ್ವಾಂಸರ ತಂಡವೇ ಇಲ್ಲಿ ನೆಲಸಿರಬೇಕು. ಆ ಕಾರಣದಿಂದಾಗಿ ಈ ಗ್ರಾಮಕ್ಕೆ ‘ಶುಕ’ಪದದ ನಂತರ ‘ಪುರ’ ಎಂದು ಸಂಭೋಧಿಸಿರಬೇಕು ಎಂದೆನಿಸುವುದು ಸಹಜ. ಆದರೆ ಅದಕ್ಕೆ ಯಾವುದೇ ಆಕರಗಳು ನನಗೆ ಲಭ್ಯವಾಗಿಲ್ಲ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮಹತ್ವದ ಸಂಗತಿ ಎಂದರೆ ಈ ಗ್ರಾಮದ ನಾಮದಲ್ಲಿ ‘ಶುಕ’ ಎಂಬ ಪದದ ಬಳಕೆಯಾದದ್ದು.

ಮಹಾಭಾರತದಲ್ಲಿ ‘ಶುಕ’ಮುನಿ ಆಚಾರ್ಯರ ಉಲ್ಲೇಖ ಬರುತ್ತದೆ. ಮಹಾಭಾರತದಲ್ಲಿನ ವೇದವ್ಯಾಸ ಋಷಿಮುನಿಗೆ ‘ಶುಕ’ ಮತ್ತು ‘ಶುಕಿ’(ಗಿಣಿ) ಎಂಬ ಇಬ್ಬರು ಮಕ್ಕಳಿದ್ದರು. ವೇದವ್ಯಾಸಮುನಿ ವಿರಚಿತ ಹದಿನೆಂಟು ಭಾಗವತದಲ್ಲಿ ಹದಿನೆಂಟನೆ ಭಾಗವತವನ್ನು ‘ಶುಕ’ಮುನಿ ಆಚಾರ್ಯರು ಸಾಯುತ್ತಿರುವ ಪರೀಕ್ಷಿತರಾಜನಿಗೆ ಹೇಳಿದರು. ಈ ‘ಶುಕ’ಮುನಿಯು ಮೋಕ್ಷದ ಅನ್ವೇಷಣದ ಸನ್ಯಾಸಿ ಎಂದು ಹೇಳಲಾಗುತ್ತಿದೆ. ಬಹುತೇಕ ಮುನಿಗಳು ಮೋಕ್ಷದ ಸಂದರ್ಭದಲ್ಲಿ ಈ ‘ಶುಕ’ಮುನಿಯ ಹತ್ತಿರ ಕುಳಿತು ಭಾಗವತದ ಕಥೆಗಳನ್ನು ಕೇಳುತ್ತಿದ್ದರೆಂದು ಪುರಾಣಗಳು ಹೇಳುತ್ತಿವೆ. ಇಂತಹ ಮಹತ್ವ ಪಡೆದ ‘ಶುಕ’ಮುನಿಯ ಹೆಸರು ಈ ಗ್ರಾಮದ ನಾಮದಲ್ಲಿ ಸೇರಿಕೊಂಡಿರುವುದು ಬಹಳ ವಿಶೇಷ ಎಂದು ಹೇಳಬಹುದು.
ಈ ಗಿಣಿಗೇರಿ ಗ್ರಾಮದ ಅಧ್ಯಯನದ ಸಂದರ್ಭದಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ‘ಶುಕಪುರಿ’ ಎಂದು ಯಾಕೆ ಕರೆಯಲಾಯಿತು? ಮತ್ತು ಮುಖ್ಯವಾಗಿ ‘ಶುಕ’ ಎಂಬ ಪದದ ಬಳಕೆ ಈ ಗ್ರಾಮ ನಾಮದಲ್ಲಿ ಯಾಕೆ ಬಳಸಲಾಯಿತು? ಜೊತೆಗೆ ‘ಪುರಿ’ ಎಂದು ಯಾವ ಕಾರಣಕ್ಕಾಗಿ ಸಂಭೋಧಿಸಲಾಯಿತು? ಎಂಬ ಕೆಲ ಪ್ರಶ್ನೆಗಳು ಮೂಡುತ್ತವೆ. ಮೇಲಿನ ಎಲ್ಲಾ ಅಂಶಗಳನ್ನು ಮತ್ತು ಅವುಗಳ ಅರ್ಥಗಳನ್ನು ಗಮನಿಸಿದಾಗ ‘ಶುಕ’ ಮತ್ತು ‘ಪುರಿ’ ಎಂಬ ಪದಗಳ ಅರ್ಥಗಳಿಗೂ ಮತ್ತು ಈ ಗ್ರಾಮಕ್ಕೂ ಏನೋ ಸಂಬಂಧವಿರಬೇಕು ಎಂದೆನಿಸುತ್ತದೆ. ಒಂದು ವೇಳೆ ಆ ಪದಗಳಿಗೆ ಮತ್ತು ಈ ಗ್ರಾಮಕ್ಕೆ ಯಾವುದೇ ರೀತಿಯ ಸಂಬAಧಗಳು ಇಲ್ಲದೆ ಹೋಗಿದ್ದರೆ ‘ಶುಕಪುರಿ’ ಎಂಬ ಮಹತ್ವದ ನಾಮವನ್ನು ಇಲ್ಲಿ ಬಳಸಲಾಗುತ್ತಿರಲಿಲ್ಲ. ಬಹುಶಃ ಪ್ರಾಚೀನ ಕಾಲದಲ್ಲಿ ಈ ‘ಗಿಣಿಗೇರಿ’ಯು ಮಹತ್ವ ಪಡೆದ ಗ್ರಾಮವಾಗಿರಬೇಕು.

ಆ ಕಾರಣಕ್ಕಾಗಿಯೇ ಈ ಗ್ರಾಮಕ್ಕೆ ‘ಶುಕಪುರಿ’ ಎಂಬ ನಾಮದಿಂದ ಕರೆದಿರಬೇಕು ಎಂದೆನಿಸುತ್ತದೆ. ಆದರೆ ಅದಕ್ಕೆ ಸಂಬಂಧಿಸಿದ ಆಕರಗಳು ನನಗೆ ಲಭ್ಯವಿಲ್ಲ. ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ. ಕಾಲಾಂತರದಲ್ಲಿ ಇದು ‘ಶುಕಪುರಿ’ಯಿಂದ ‘ಗಿಣಿಗೇರಿ’ ಎಂಬ ಗ್ರಾಮನಾಮವಾಗಿ ಬದಲಾಗಿರಬಹುದು. ಆದರೆ ಇದು ಯಾವ ಕಾಲದಲ್ಲಿ ಮತ್ತು ಯಾವ ಕಾರಣಕ್ಕಾಗಿ ಬದಲಾಯಿತು ಎಂಬ ಸಂಗತಿಗಳು ಮಾತ್ರ ತಿಳಿದುಬರುವುದಿಲ್ಲ.
ಈ ಗ್ರಾಮದ ತುದಿಯಲ್ಲಿ ಬಹಳ ವಿಶಾಲವಾದ ಒಂದು ಕೆರೆಯಿದೆ. ಗಿಣಿಗೇರಿ, ಬಸಾಪುರ, ಕುಟಗನಹಳ್ಳಿ ಮತ್ತು ಭೀಮನೂರು ಗ್ರಾಮಗಳ ಸೀಮಾದಲ್ಲಿ ಹರಡಿಕೊಂಡಿರುವ ಈ ಕೆರೆಯು ಹಿಂದೆ ಸುಮಾರು ೨೮೦ಕ್ಕೂ ಅಧಿಕ ಎಕರೆಗಳಲ್ಲಿ ವಿಸ್ತಾರವಾಗಿ ಹರಡಿಕೊಂಡಿತ್ತೆಂದು ಹೇಳಲಾಗುತ್ತಿದೆ. ಆದರೆ ಇಂದು ಅತ್ತಕಡೆ-ಇತ್ತಕಡೆ ಒತ್ತುವರಿಯಾಗಿ ಸುಮಾರು ೨೬೦ ಎಕರೆಗಳಷ್ಟು ಮಾತ್ರ ಉಳಿದುಕೊಂಡಿರಬಹುದೆಂದು ಹೇಳಲಾಗುತ್ತಿದೆ. ಈ ಕೆರೆಯಲ್ಲಿ ಬಾಗೂರುದಮರ, ಶಾಲ್ಮಲಿ ವೃಕ್ಷ, ಬಾಗೆಮರ, ಶಿರಿಷ ವೃಕ್ಷ, ಮುತ್ತುಗಮರ, ಶುಕನಾಶ, ಮಾವಿನಮರ, ಬಸರಿಮರ, ಆಲದಮರ, ಬೇವಿನಮರ ಮುಂತಾದ ಆನೇಕ ಮರಗಳು ಈ ಕೆರೆಯಲ್ಲಿದ್ದವೆಂದು ಹೇಳಲಾಗುತ್ತಿದೆ. ಈ ಕೆರೆಯಲ್ಲಿರುವ ನಾನಾ ಜಾತಿಯ ಮರಗಳಲ್ಲಿ ಅನೇಕ ಪಕ್ಷಿ ಸಂಕುಲಗಳು ವಾಸವಾಗಿದ್ದವೆಂದು ಇಲ್ಲಿನ ಹಿರಿಯರ ಅಭಿಪ್ರಾಯವಾಗಿದೆ. ಅದರಲ್ಲಿ ವಿಶೇಷವಾಗಿ ಗಿಣಿ(ಳಿ)ಗಳ ಸಂಖ್ಯೆ ಅಧಿಕವಾಗಿತ್ತಿದ್ದೆಂದು ಹೇಳಲಾಗುತ್ತಿದೆ. ಇಲ್ಲಿ ಸಾವಿರಾರು ಗಿಣಿಗಳು ವಾಸಮಾಡುತ್ತಿದ್ದವಂತೆ. ಅದಕ್ಕಾಗಿಯೇ ಈ ಗ್ರಾಮಕ್ಕೆ ಗಿಣಿಗಳು ವಾಸಿಸುವ ಕೆರೆ, ‘ಗಿಣಿಗೇರಾ’(ಗಿಣಿಕೆರೆ) ಅಥವಾ ಶುಕಗಳು ವಾಸಿಸುವ ಕೆರೆ, ‘ಶುಕಪುರಿ’ ಎಂಬ ಹೆಸರು ಬಳಸಲಾಗಿರಬಹುದೇ ಎಂಬ ಪ್ರಶ್ನೆ ಮೂಡುತ್ತದೆ. ಪ್ರಾಣಿ, ಪಶು, ಪಕ್ಷಿಗಳ ಹೆಸರಿನ ಮೇಲೆ ಕರೆದ ಅನೇಕ ಗ್ರಾಮಗಳ ನಾಮಗಳು ಚರಿತ್ರೆಯಲ್ಲಿವೆ. ವಿಶೇಷವಾಗಿ ಪಕ್ಷಿಗಳ ಹೆಸರಿನ ಮೇಲೆ ನವಲಿ, ಕೋಳಿವಾಡ, ಗೂಗಲ್, ಗೂಗಲ್‌ಮರಿ, ಕಾಗಿನೆಲೆ ಮುಂತಾದವುಗಳನ್ನು ಗಮನಿಸಬಹುದು. ಅದರಂತೆ ಪ್ರಾಣಿಗಳ ಹೆಸರಿನ ಮೇಲೆ ಕರಡಿಗುಡ್ಡ, ಕುದರೆಮುಖ, ಎಮ್ಮಿಗನೂರು, ಯತ್ನಟ್ಟಿ, ಆಡೂರು, ಆಕಳವಾಡಿ ಇಂತಹ ಅನೇಕ ಹೆಸರುಗಳನ್ನು ಗಮನಿಸಿದಾಗ ಪಕ್ಷಿವಾಚಕವಾದ ಗಿಣಿ(ಗಿಳಿ) ಹೆಸರಿನ ಮೇಲೆ ಈ ಗ್ರಾಮ ‘ಗಿಣಿಗೇರಿ’ ಎಂದು ಕರೆಸಿಕೊಂಡಿದ್ದರೆ ಆಶ್ಚರ್ಯವೇನಲ್ಲ.
ಪ್ರಾಚೀನ ಕಾಲದಲ್ಲಿ ಬಹುತೇಕ ಗ್ರಾಮಗಳ ಹೆಸರುಗಳನ್ನು ಪ್ರಾಕೃತಿಕ ಆಧಾರದ ಮೇಲೆ ಕರೆಯುತ್ತಿದ್ದರು. ಬಹುಶಃ ಅದೇ ಆಧಾರದ ಮೇಲೆ ಈ ಗಿಣಿಗೇರಿ ಗ್ರಾಮನಾಮ ಬಳಸಲಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಹಾಗಾದರೆ ಈ ಗಿಣಿಗೇರಿ ಎಂಬ ನಾಮವನ್ನು ಇಲ್ಲಿನ ಪ್ರಾಕೃತಿಕವಾಗಿ ವಿಶಾಲವಾಗಿ ನಿರ್ಮಾಣಗೊಂಡ ಕೆರೆಯ ಹೆಸರಿನ ಮೇಲೆ ಈ ಗ್ರಾಮ ಕರೆಸಿಕೊಂಡಿರಬಹುದೇ? ಅಥವಾ ಈ ಕೆರೆಯಲ್ಲಿರುವ ಮರಗಳ ಆಧಾರದಮೇಲೆ ಕರೆಸಿಕೊಂಡಿರಬಹುದೇ? ಇಲ್ಲವೆ ಈ ಕೆರೆಯಲ್ಲಿರುವ ಅಪಾರ ಸಂಖ್ಯೆಯ ಗಿಣಿಗಳ ಹೆಸರಿನ ಮೇಲೆ ಈ ಗ್ರಾಮ ಕರೆಸಿಕೊಂಡಿರಬಹುದೇ? ಅಥವಾ ಮುನಿ(ಶುಕ)ಗಳು ವಾಸಿಸುವ ಆಧಾರದ ಮೇಲೆ ಈ ಗ್ರಾಮ ಕರೆಸಿಕೊಂಡಿರಬಹುದೇ? ಎಂಬ ಅನೇಕ ಪ್ರಶ್ನೆಗಳು ಮೂಡುತ್ತವೆ. ಅವುಗಳಲ್ಲಿ ಯಾವ ಅಭಿಪ್ರಾಯವನ್ನು ಒಪ್ಪುವುದಾಗಲಿ ಇಲ್ಲವೇ ನಿರಾಕರಿಸುವುದಾಗಲಿ ಅಷ್ಟು ಸಮಂಜಸವಾಗಲಾರದು. ಯಾಕೆಂದರೆ ಅದನ್ನು ಸಮರ್ಥಿಸುವ ಯಾವುದೇ ಸ್ಪಷ್ಟ ಆಧಾರಗಳಿಲ್ಲ. ಇಲ್ಲಿ ಕೇವಲ ಮೌಖಿಕ ಆಕರಗಳ ಮೇಲೆ ಈ ಗಿಣಿಗೇರಿ ಎಂಬ ಗ್ರಾಮನಾಮವನ್ನು ಬಳಸಲಾಗಿದೆ.
ಇಂತಹ ಅಭೂತಪೂರ್ವ ಇತಿಹಾಸವನ್ನು ಹೊಂದಿರುವ ಈ ಗಿಣಿಗೇರಿ ಕೆರೆಯು ಆಕಡೆ-ಈಕಡೆ ಒತ್ತುವರಿಯಾಗಿ, ಕಸಕಡ್ಡಿಗಳಿಂದ, ಮುಳ್ಳುಕಂಟಿಗಳಿAದ, ಹೂಳಿನಿಂದ ತುಂಬಿತ್ತು. ಅದರಲ್ಲಿ ನೀರಿಗಿಂತ ಹೆಚ್ಚು ಮಣ್ಣು, ಗಿಡ-ಗಂಟೆಗಳಿAದಲೇ ತುಂಬಿಹೋಗಿತ್ತು. ಅದನ್ನರಿತ ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಪರಮಪೂಜ್ಯರಾದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅದರ ಪುನರುಜ್ಜೀವನ ಕಾರ್ಯ ಮಾಡಿದರು. ಅದಕ್ಕೆ ಶ್ರೀಗವಿಮಠದ ಭಕ್ತಸಮೂಹ, ಸ್ಥಳೀಯರು, ಸರಕಾರ ಈ ಸತ್ಕಾರ್ಯಕ್ಕೆ ಕೈಜೋಡಿಸಿದರು. ಶ್ರೀಗಳ ಈ ಮಹತ್ವಪೂರ್ಣ ಕಾರ್ಯದಿಂದ ಈ ವರ್ಷ ೨೦೨೨ರಲ್ಲಿ ಕೆರೆ ತುಂಬಿ ಕೋಡಿ ಹರಿದು ಜನರಲ್ಲಿ ಮಂದಹಾಸ ಮೂಡಿ ಹರ್ಷ ವ್ಯಕ್ತಪಡಿಸಿ ಶ್ರೀಗಳಿಗೆ ನಮನ ಸಲ್ಲಿಸಿದ್ದಾರೆ. ಇಲ್ಲಿನ ಸ್ಥಳೀಯರು ಅಭಿಪ್ರಾಯ ಪಡುವಂತೆ ಸುಮಾರು ೧೫ ವರ್ಷಗಳ ನಂತರ ಈ ಗಿಣಿಗೇರಿ ಕೆರೆಯು ಮೈದುಂಬಿ ಹರಿಯುತ್ತಿರುವದು ಸಂತಸ ತಂದಿದೆ ಎಂದಿದ್ದಾರೆ. ಇಂತಹ ಸದುದ್ದೇಶದಿಂದ ಕೂಡಿದ ಮಹತ್ಕಾರ್ಯಗಳಿಗೆ ಪ್ರಕೃತಿಯೂ ಸಹಕರಿಸುತ್ತದೆ ಎನ್ನುವದಕ್ಕೆ ಈ ವರ್ಷ ಸಮೃದ್ಧವಾಗಿ ಸುರಿದ ಮಳೆಯೇ ಸಾಕ್ಷಿ ಎನ್ನಬಹುದು. ಮುಂದುವರೆದು ತುಂಬಿದ ಈ ಕೆರೆಯ ನೀರು ಸದುಪಯೋಗವಾಗುವ ಮೂಲಕ ಎಲ್ಲರ ಶ್ರಮ ಸಾರ್ಥಕವಾಗಲಿ ಎಂಬುದು ನಮ್ಮ ಸದಾಶಯವಾಗಿದೆ.

Leave a Reply

Your email address will not be published. Required fields are marked *

ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ
error: Content is protected !!