– ಚಾಮರಾಜ ಸವಡಿ | ಕೊಪ್ಪಳ
1966 ಜನವರಿ 11 ರಂದು ಆಗಿನ ಸೋವಿಯತ್ ಒಕ್ಕೂಟದ (ಈಗಿನ ಉಜ್ಬೆಕಿಸ್ತಾನದ ರಾಜಧಾನಿ) ತಾಷ್ಕೆಂಟ್‌ನಲ್ಲಿ ಭಾರತದ ಎರಡನೇ ಪ್ರಧಾನಮಂತ್ರಿ ಲಾಲ್ ಬಹದೂರ್ ಶಾಸ್ತ್ರಿ ಅವರು ಅಸಹಜವಾಗಿ ಮೃತಪಟ್ಟರು. ಹೃದಯಾಘಾತವೇ ಸಾವಿಗೆ ಕಾರಣ ಎಂದು ಹೇಳಲಾಯಿತು.
ಆದರೆ, ಅವರ ದೇಹವನ್ನು ದೆಹಲಿಗೆ ತಂದಾಗ, ದೇಹದ ಮೇಲಿದ್ದ ವಿಚಿತ್ರ ನೀಲಿ ಪಟ್ಟಿಗಳನ್ನು ಕಂಡ ಶಾಸ್ತ್ರಿ ಅವರ ತಾಯಿ, ʼಮೇರೆ ಬಿಟ್ವಾ ಕೊ ಜಹರ್ ದೇ ದಿಯಾʼ (ನನ್ನ ಕಂದನಿಗೆ ವಿಷ ಹಾಕಿದ್ದಾರೆ) ಎಂದು ಚೀರಿದ್ದರು. ವೃದ್ಧ ತಾಯಿಯ ಪುತ್ರಶೋಕದ ಈ ಆಕ್ರಂದನದ ಕೂಗು ಶಾಸ್ತ್ರಿ ಕುಟುಂಬವನ್ನು ಈಗಲೂ ಕಾಡುತ್ತಿದೆ.
ಶಾಸ್ತ್ರಿ ಅವರ ಪತ್ನಿ ಲಲಿತಾ ಅವರು, ತಮ್ಮ ಗಂಡನನ್ನು ವಿಷ ನೀಡಿ ಸಾಯಿಸಲಾಯಿತು ಎಂಬ ಕೊರಗಿನಲ್ಲಿಯೇ ಮೃತಪಟ್ಟರು. ಮಕ್ಕಳಾದ ಅನಿಲ್ ಮತ್ತು ಸುನಿಲ್ ಶಾಸ್ತ್ರಿ (ಒಬ್ಬರು ಕಾಂಗ್ರೆಸ್, ಇನ್ನೊಬ್ಬರು ಬಿಜೆಪಿ) ಹಾಗೂ ಮೊಮ್ಮಕ್ಕಳಾದ ಸಂಜಯ್ ಮತ್ತು ಸಿದ್ಧಾರ್ಥ ನಾಥ ಸಿಂಗ್ ಕೂಡಾ ಆಗಾಗ ಈ ಕುರಿತು ಮಾತಾಡಿದ್ದಾರೆ. ಸುದೀರ್ಘ ಕಾಲದ ಹಿಂದೆ ಏನಾಯಿತು ಎಂಬುದು ಇದುವರೆಗೆ ಏಕೆ ಸ್ಪಷ್ಟವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸ್ತ್ರೀಜಿ ಅವರ ಕುಟುಂಬ ವರ್ಗದವರು, ನಿಕಟವರ್ತಿಗಳಾಗಿದ್ದ ಟಿ.ಎನ್. ಸಿಂಗ್ ಹಾಗೂ ಜಗದೀಶ ಕೊಡೇಶಿಯಾ ಅವರಿಗೆ, ಶಾಸ್ತ್ರಿಯವರ ಹೊಟ್ಟೆ ಮತ್ತು ಕುತ್ತಿಗೆಯ ಹಿಂಭಾಗದಲ್ಲಿ ಸೀಳು ಗುರುತುಗಳು ಏಕಿದ್ದವು ಎಂಬುದಕ್ಕೆ ಇಂದಿಗೂ ಉತ್ತರ ಸಿಕ್ಕಿಲ್ಲ. ಶಾಸ್ತ್ರಿ ಅವರ ಕುತ್ತಿಗೆಯ ಹಿಂಭಾಗದಲ್ಲಿ ಆಗಿದ್ದ ಸೀಳು ಗಾಯದಿಂದ ರಕ್ತ ಒಸರಿ ಬೆಡ್ ಷೀಟ್, ದಿಂಬು ಹಾಗೂ ಉಡುಪು ತೊಯ್ದಿದ್ದವು. ತನ್ನ ತಾತನ ರಕ್ತಸಿಕ್ತ ಉಡುಪು ಈಗಲೂ ನನ್ನ ಬಳಿ ಇದೆ ಎಂದು ಹೇಳಿದ್ದಾರೆ ಅವರ ಮೊಮ್ಮಗನೊಬ್ಬ.
ಕೆಜಿಬಿ ಕೈವಾಡ:
ಭಾರತದಲ್ಲಿ ಸಿಬಿಐ (ಸೆಂಟ್ರಲ್ ಬ್ಯುರೊ ಆಫ್ ಇನ್ವೆಸ್ಟಿಗೇಶನ್ – ಕೇಂದ್ರೀಯ ತನಿಖಾ ಸಂಸ್ಥೆ) ಹೇಗೋ ಹಾಗೆ ರಷ್ಯದಲ್ಲಿ (ಆಗಿನ ಸೋವಿಯತ್ ಒಕ್ಕೂಟದಲ್ಲಿ ಸಹ) ಕೆಜಿಬಿ ಇದೆ. 1966 ಜನವರಿ 11 ರ ನಸುಕಿನ ಜಾವ 4 ಗಂಟೆಗೆ ತನ್ನನ್ನು ನಿದ್ದೆಯಿಂದ ಎಬ್ಬಿಸಿ ಕರೆದೊಯ್ದಿದ್ದ ಕೆಜಿಬಿ ಅಧಿಕಾರಿಯೊಬ್ಬ, ʼಭಾರತದ ಪ್ರಧಾನಿಗೆ ವಿಷಪ್ರಾಶನ ಮಾಡಲಾಗಿದೆʼ ಎಂಬ ಅನುಮಾನ ವ್ಯಕ್ತಪಡಿಸಿದ್ದ ಎಂದು ಶಾಸ್ತ್ರಿ ಅವರಿಗೆ ಅಡುಗೆ ಮಾಡಲು ಸೋವಿಯತ್ ಒಕ್ಕೂಟ ನಿಯೋಜಿಸಿದ್ದ ಅಹ್ಮದ್ ಸತ್ತರೊವ್ ಹೇಳಿದ್ದ. ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಆನಂತರ, ಶಾಸ್ತ್ರೀಜಿ ಅವರ ಅಡುಗೆಯವನಾಗಿದ್ದ ಜನ್ ಮೊಹಮ್ಮದ್‌ನನ್ನು ವಿಚಾರಣೆಗೆ ಕರೆತರಲಾಯಿತು. ಶಾಸ್ತ್ರೀಜಿ ಅವರಿಗೆ ಈತನೇ ವಿಷ ಹಾಕಿದ್ದಾನೆ ಎಂದು ಕೆಜಿಬಿ ಅಧಿಕಾರಿ ಹೇಳಿದ್ದಾಗಿ ಅಹ್ಮದ್ ಸತ್ತರೊವ್ ನಂತರ ಹೇಳಿದ್ದ.

“ತಾಷ್ಕೆಂಟ್ ಒಪ್ಪಂದದ ನಂತರವಷ್ಟೇ, ಜನ್ ಮೊಹಮ್ಮದ್‌ನನ್ನು ಪ್ರಧಾನಿಯವರ ಅಡುಗೆಯವನನ್ನಾಗಿ ದಿಢೀರನೇ ನೇಮಿಸಲಾಗಿತ್ತು. ನಮಗೆ ಆತನ ಮೇಲೆಯೇ ಸಂಶಯವಿದೆ” ಎಂದು ಶಾಸ್ತ್ರೀಜಿ ಅವರ ಮಗ ಸುನೀಲ್ ಶಾಸ್ತ್ರಿ ಕೂಡಾ ಬಹಿರಂಗವಾಗಿಯೇ ಹೇಳಿದ್ದರು. (
ಉಲ್ಲೇಖ: https://www.business-standard.com/article/news-ians/someday-we-ll-know-the-truth-about-his-death-lal-bahadur-shastri-s-son-118081400509_1.html#:~:text=%22Cook%20Jan%20Mohammed%20was%20the,%2C%20further%20fuelling%20our%20suspicions.%22).
ಆದರೆ, ಈ ಕುರಿತು ವಿಚಾರಣೆ ನಡೆಯಲೇ ಇಲ್ಲ.
ದೆಹಲಿಗೆ ಕರೆ ತಂದ ಶಾಸ್ತ್ರೀಜಿ ಅವರ ದೇಹ ನೀಲಿ ಮತ್ತು ಕಪ್ಪು ಬಣ್ಣಕ್ಕೆ ತಿರುಗಿತ್ತು. ಮುಖದ ಮೇಲೆ ಕಪ್ಪು ಕಲೆಗಳಿದ್ದವು. ದೇಹದ ಅಲ್ಲಲ್ಲಿ ಕತ್ತರಿಸಿದ ಗುರುತುಗಳಿದ್ದವು. ಅವರ ಮರಣೋತ್ತರ ಪರೀಕ್ಷೆ ನಡೆಯಲೇ ಇಲ್ಲ. ರಷ್ಯದಲ್ಲಿ ರಹಸ್ಯ ಮರಣೋತ್ತರ ಪರೀಕ್ಷೆ ನಡೆದಿರುವ ಗುಸುಗುಸು ಕೇಳಿಬಂದಿತಾದರೂ, ಆ ಕುರಿತು ಭಾರತ ಸರಕಾರ ತನಿಖೆ ನಡೆಸಲೇ ಇಲ್ಲ. ಅಷ್ಟೇ ಅಲ್ಲ, ಶಂಕಿತರ ವಿಚಾರಣೆಯ ವಿವರಗಳೂ ಹೊರಬರಲಿಲ್ಲ. ದೇಶದ ಪ್ರಧಾನಮಂತ್ರಿಯೊಬ್ಬರು ವಿದೇಶದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆಯೊಂದು ಹೀಗೆ ಬಹಿರಂಗವಾಗಿಯೇ ಮುಚ್ಚಿಹೋಯಿತು.
ಶಾಸ್ತ್ರೀ ಒಬ್ಬರೇ ಅಲ್ಲ, ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಸಾವಿನ ರಹಸ್ಯವನ್ನೂ ಹೀಗೇ ಗುಪ್ತವಾಗಿಡಲಾಗಿದೆ. ನೇತಾಜಿ ಸಾವಿನ ಹಿನ್ನೆಲೆ ಬಹಿರಂಗವಾದರೆ, ಅವರ ಕುರಿತ ಗೌರವ ಕಡಿಮೆಯಾಗಬಹುದು ಎಂಬ ವದಂತಿಗಳೂ ಇವೆ. ಅಧಿಕಾರಕ್ಕೆ ಬರುವ ಮುಂಚೆ ನೇತಾಜಿ ಸಾವಿನ ಹಿನ್ನೆಲೆ ಬಹಿರಂಗಪಡಿಸಲು ಹೋರಾಟವನ್ನೇ ನಡೆಸಿದ್ದ ಬಿಜೆಪಿ, ನಂತರ ಸುಮ್ಮನಾಗಿದ್ದು ಬಹುಶಃ ಈ ಕಾರಣಕ್ಕಾಗಿಯೇ ಇರಬೇಕು.
ಆದರೆ, ಶಾಸ್ತ್ರಿಯವರ ಆಕಸ್ಮಿಕ ಸಾವಿನ ಹಿಂದೆ ಇಂತಹ ನಿಗೂಢತೆ ಇರಲಿಲ್ಲ. ಅಲ್ಲಿ ಕಾರಣಗಳು ಸ್ಪಷ್ಟವಿದ್ದವು. ಮೇಲ್ನೋಟಕ್ಕೇ ಕಾಣುವಷ್ಟು ವಿವರವಾಗಿದ್ದವು. ಆದರೂ, ಸಾವಿನ ಹಿನ್ನೆಲೆ ಮತ್ತು ಅವರ ಸಾವಿಗೆ ಕಾರಣರಾದವರ ಕುರಿತ ವಿವರಗಳು ಹೊರಬರಲಿಲ್ಲ. ವಿವರಗಳೇ ಇಲ್ಲವೆಂದ ಮೇಲೆ ಯಾರನ್ನು ದೂರುವುದು? ಯಾರ ಮೇಲೆ ಆರೋಪ ಹೊರಿಸುವುದು? ವಿಚಾರಣೆ ನಡೆಯುವುದಾದರೂ ಹೇಗೆ? ಇದನ್ನೆಲ್ಲ ನೋಡಿದರೆ, ಶಾಸ್ತ್ರಿಯವರ ಸಾಧನೆಗಳ ವೇಗವೇ ಅವರ ಸಾವಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣವಾಯಿತೇನೋ ಎಂಬ ಭಾವನೆ ಮೂಡುತ್ತದೆ.
ದೇಶದ ಎರಡನೇ ಹಾಗೂ ಒಬ್ಬನೇ ಒಬ್ಬ ಸತ್ಯನಿಷ್ಠ ಧೀಮಂತ ಪ್ರಧಾನಿಯ ಜನ್ಮದಿನ ಇಂದು. ಮಹಾತ್ಮ ಗಾಂಧೀಜಿಯವರ ಪ್ರಭಾವಲಯದ ಎದುರು ಇಷ್ಟು ದಿನಗಳ ಕಾಲ ಈ ಉಜ್ವಲ ನಕ್ಷತ್ರ ಮಸುಕಾಗಿಯೇ ಉಳಿದಿತ್ತು. ಇನ್ನಾದರೂ ಅವರ ಜನ್ಮದಿನದಂದು ಅವರ ಕೊಡುಗೆಯನ್ನು ನಾವು ಸ್ಮರಿಸಬೇಕಿದೆ.
ಜನ್ಮದಿನದ ಶುಭಾಶಯಗಳು ಶಾಸ್ತ್ರೀಜಿ. ನಿಮ್ಮ ಸರಳತೆ, ಆದರ್ಶ, ನೇರವಂತಿಕೆ ಹಾಗೂ ಪ್ರಾಮಾಣಿಕತೆ ಇನ್ನಾದರೂ ನಮ್ಮ ಜನಪ್ರತಿನಿಧಿಗಳಿಗೆ ಆದರ್ಶವಾಗಲಿ.
(ಉಲ್ಲೇಖ: https://www.dailyo.in/politics/lal-bahadur-shastri-tashkent-kgb-russia-rti-congress-pmo-mea-tn-kaul/story/1/8393.html)