ಶಿಕ್ಷಕರ ಕಲಾಸಂಘ ನಡೆದು ಬಂದ ರೋಚಕ ಹಾದಿ

ಸಮಾಜಮುಖಿ ಕಾರ್ಯದತ್ತ ಕೊಪ್ಪಳ ಶಿಕ್ಷಕರ ಕಲಾ ಸಂಘ
(ರಂಗಭೂಮಿಯ ಮೂಲಕ ಶಿಕ್ಷಣ, ಸಾಹಿತ್ಯ, ಸಂಗೀತ,ಪರಿಸರ ಜಾಗೃತಿ)

ಶಿಕ್ಷಕರ ಕಲಾ ಸಂಘದ ದಶಮಾನೋತ್ಸವ ನಿಮಿತ್ಯ ಕೊಪ್ಪಳದಲ್ಲಿ ರಂಗ ಸಂಭ್ರಮ…!

ಸಮಾಜದಲ್ಲಿ ಶಿಕ್ಷಕ ವೃತ್ತಿ ಪವಿತ್ರ ಮತ್ತು ಗೌರವಾದದ್ದು.ಉತ್ತಮ ನಾಗರಿಕರನ್ನು ನಿರ್ಮಿಸಿ ಆ ಮೂಲಕ ರಾಷ್ಟçನಿರ್ಮಾಣದ ಸೇವಾ ಕಾರ್ಯವನ್ನು ಶಿಕ್ಷಕರು ಮಾಡುತ್ತಿದ್ದಾರೆ. ಕೊಪ್ಪಳದಲ್ಲೊಂದು ಶಿಕ್ಷಕರ ಕಲಾ ಸಂಘವಿದೆ ; ಸಮಾನ ಮನಸ್ಕ ಶಿಕ್ಷಕರೆಲ್ಲರೂ ಸೇರಿ ಕಟ್ಟಿಕೊಂಡಿರುವ ಸಂಘಟನೆ ಇದಾಗಿದ್ದು, ಕೊಪ್ಪಳದಲ್ಲಿ ಕಳೆದ 10 ವರ್ಷಗಳಿಂದ ರಂಗಭೂಮಿಯ ಮೂಲಕ ಶಿಕ್ಷಣ, ಸಾಹಿತ್ಯ, ಸಂಗೀತ,ಪರಿಸರ ಮತ್ತು ಮಕ್ಕಳ ರಂಗಭೂಮಿಗೆ ಸಂಬಂಧಿಸಿದ ಹಲವು ಚಟುವಟಿಕೆಗಳನ್ನು ಮಾಡುತ್ತಾ ಜನಮನ ಗೆಲುತ್ತಾ ಸಾಗಿದೆ.

ಪ್ರಾರಂಭ ಆದದ್ದು ಹೇಗೆ? :

ಶಿಕ್ಷಕರ ಕಲಾ ಸಂಘದ ಪ್ರಾರಂಭದ ಹಿಂದೆ ಮನಮಿಡಿಯುವ ಕಥೆಯಿದೆ. ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳು ಲಿಂಗೈಕ್ಯರಾದ ಸಂದರ್ಭ; ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಶಿಕ್ಷಕರಾದ ರಾಮಣ್ಣ ಶ್ಯಾವಿ, ಶಿವನಗೌಡ, ಪ್ರಾಣೇಶ ಇವರು ಅಲ್ಲಿನ ಅಂಧ ಮಕ್ಕಳ ಪರಿಸ್ಥಿತಿಯನ್ನು ನೋಡಿ ಮರುಗಿದರು. ಅಂಧ-ಅನಾಥರ ಬಾಳು ಬೆಳಗಲು ಪುಟ್ಟರಾಜ ಗವಾಯಿಗಳು ತಮ್ಮ ಬಾಳನ್ನು ಸಮರ್ಪಿಸಿಕೊಂಡಿದ್ದನ್ನು ನೆನೆದು ಅವರ ಸ್ಮರಣಾರ್ಥ ‘ಕಲೆ’ ಗಾಗಿ ಒಂದು ಸಂಘ ಕಟ್ಟೋಣವೆಂದು ತೀರ್ಮಾನಿಸಿದರು. ಸಮಾನ ಮನಸ್ಕ ಶಿಕ್ಷಕರನ್ನು ಒಗ್ಗೂಡಿಸಿಕೊಂಡು 2010 ರಲ್ಲಿ “ಶಿಕ್ಷಕರ ಕಲಾ ಸಂಘ” ವನ್ನು ಹುಟ್ಟು ಹಾಕಿದರು.

ರಂಗಭೂಮಿಯ ಮೂಲಕ ಸೇವಾಕಾರ್ಯ : –

ಶಿಕ್ಷಕರ ಕಲಾ ಸಂಘವು ರಂಗಭೂಮಿಯ ಮೂಲಕ ಸೇವೆ ಮಾಡಬೇಕೆಂದು ತೀರ್ಮಾನಿಸಿ, ನಾಟಕ ಪ್ರದರ್ಶನಕ್ಕೆ ಸಿದ್ಧರಾದರು. ಅದರಂತೆ 2010 ರಲ್ಲಿ ಬೂದಗುಂಪಾದಲ್ಲಿ ‘ರಕ್ತರಾತ್ರಿ’ ಎಂಬ ಪೌರಾಣಿಕ ನಾಟಕವನ್ನು ಪ್ರದರ್ಶಿಸಿದರು. ಅದ್ದೂರಿ ಪ್ರದರ್ಶನ ಕಂಡ ಈ ನಾಟಕ ಜನರಿಂದ ಮೆಚ್ಚುಗೆ ಪಡೆಯಿತು. ಪ್ರದರ್ಶನದಿಂದ ಬಂದ ಹಣ ಸುಮಾರು 27 ಸಾವಿರ ರೂಪಾಯಿಗಳನ್ನು ಗದುಗಿನ ವಿರೇಶ್ವರ ಆಶ್ರಮದ ಅಂಧ ಮಕ್ಕಳ ಅಭಿವೃದ್ಧಿಗೆ ನೀಡಿದರು.

ನಾಟಕ ಪ್ರದರ್ಶನದಿಂದ ಬಂದ ದುಡ್ಡನ್ನು ಮಹತ್ ಕಾರ್ಯಗಳಿಗೆ ಬಳಸಿದ ಶಿಕ್ಷಕರ ಕಲಾಸಂಘ:

*ಗಿಣಿಗೇರಾದಲ್ಲಿ ಐತಿಹಾಸಿಕ ಗಂಡುಗಲಿ ಕುಮಾರ ರಾಮ ನಾಟಕ ಪ್ರದರ್ಶಿಸಿ ಅದರಿಂದ ಬಂದ
35 ಸಾವಿರ ಹಣವನ್ನು ಕೂಡ ಕಲ್ಲಯ್ಯಜ್ಜನವರ ತುಲಾಭಾರ ಮಾಡಿ ವೀರೇಶ್ವರ ಆಶ್ರಮಕ್ಕೆ ನೀಡಿದರು.
* 2013 ರಲ್ಲಿ ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕನವರನ್ನು ಕರೆಯಿಸಿ ಕೊಪ್ಪಳದಲ್ಲಿ ನೂರಾರು
ಶಾಲೆಗಳಲ್ಲಿ ಅವರಿಂದ ಸಸಿ ನಡೆಸಿ ಪರಿಸರ ಜಾಗೃತಿ ಮೂಡಿಸಿದರು. ಸಾಲು ಮರದ ತಿಮ್ಮಕ್ಕಳ
ಸಹಾಯಾರ್ಥ ‘ಟಿಪ್ಪುಸುಲ್ತಾನ್’ ನಾಟಕ ಪ್ರದರ್ಶಿಸಿ ಅದರಿಂದ ಬಂದ ಸುಮಾರು 80 ಸಾವಿರ
ರೂಪಾಯಿಗಳನ್ನು ಅಜ್ಜಿಗೆ ನೀಡಿದರು.


* ವೃತ್ತಿರಂಗಭೂಮಿಯ ಹಿರಿಯ ರಂಗಕರ್ಮಿಗಳಾದ ವಂದನಾ ಗಂಗಾವತಿ, ಮಲ್ಲೇಶ ಅಮೀನಗೌಡ,
ಬಸವರಾಜ ಧುತ್ತರಗಿ ಇವರ ಸಹಾಯಾರ್ಥ ನಾಟಕ ಪ್ರದರ್ಶಿಸಿ ಗೌರವಧನ ನೀಡಿದ್ದಾರೆ.
* ಕ್ಯಾನ್ಸರ ರೋಗಕ್ಕೆ ತುತ್ತಾಗಿ ಅಕಾಲಿಕವಾಗಿ ಮರಣವನ್ನಪಿದ ಶಿಕ್ಷಕರ 5 ಕುಟುಂಬಗಳಿಗೆ ತಲಾ 5
ಸಾವಿರದಂತೆ ಗೌರವ ಧನ ನೀಡಿ ಅವರ ನೋವಿಗೆ ಸ್ಪಂದಿಸಿದ್ದಾರೆ.
* ವಿಕಲ ಚೇತನ ಮಕ್ಕಳ ಸಹಾಯಾರ್ಥ ‘ಸಿಂಧೂರ ಲಕ್ಷ್ಮಣ’ ನಾಟಕ ಪ್ರದರ್ಶಿಸಿ, 30 ಸಾವಿರ ಗೌರವ
ಧನ ನೀಡಿ ವಿಕಲಚೇತನ ಮಕ್ಕಳಿಗೆ ಸ್ಪೂರ್ತಿನೀಡಿದ್ದು ಜನಮನದಲ್ಲಿ ಅಚ್ಚಳಿಯದೇ ಉಳಿದಿದೆ. ಎಚ್ಚಮ ನಾಯಕ ನಾಟಕ ಪ್ರದರ್ಶಿಸಿ ವಿಚಿತ್ರ ಚರ್ಮ ರೋಗಕ್ಕೆ ತುತ್ತಾಗಿರುವ ಹನುಮನಹಳ್ಳಿಯ ಒಂದೇ ಕುಟುಂಬದ ಮೂವರು ಹೆಣ್ಣುಮಕ್ಕಳ ಚಿಕಿತ್ಸೆಗೆ ರೂ. 10000/- ನೀಡಿದ್ದಾರೆ. 2018ಸೆಪ್ಟೆಂಬರ 08 ರಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರರು ರಚಿಸಿದ ‘ಶಿವರಾತ್ರಿ’ ನಾಟಕ ಪ್ರದರ್ಶಿಸಿದರು.ಈ ನಾಟಕವನ್ನ ರಂಗ ನಿರ್ದೇಶಕರಾದ ಕೆ.ಆರ್ ಉಪೇಂದ್ರ ನಿರ್ದೇಶನ ಮಾಡಿದ್ದರು.ಈ ಸಮಾರಂಭದಲ್ಲಿ ಕೊಪ್ಪಳದ ಬಿ.ಇ.ಓ ಕಛೇರಿ ಮುಂದೆ ಕಳೆದ 25 ವರ್ಷಗಳಿಂದ ಚಪ್ಪಲಿ ಹೊಲಿಯುತ್ತಾ ಜೀವನ ಸಾಗಿಸುತ್ತಿರುವ ದಲಿತ ಮಹಿಳೆ ಬಸಮ್ಮ ಅರಕೇರಿಯನ್ನು ಸನ್ಮಾನಿಸಿ 5000 ರೂಪಾಯಿ ಗೌರವಧನ ನೀಡಿದರು.2019ರಲ್ಲಿ ‘ರಾವಿ ನದಿ ದಂಡೆಯಲ್ಲಿ’ ನಾಟಕ ಪ್ರದರ್ಶಿಸಿದರು.ಈ ನಾಟಕ ಪ್ರದರ್ಶನದಿಂದ ಬಂದ ಹಣವನ್ನು ಕೊಪ್ಪಳದ ‘ಜೈನ ಸಮುದಾಯದ ಗೋಶಾಲೆ’ ಗೆ 10000ರೂ ನೀಡಿದ್ದಾರೆ. ಈ ನಾಟಕವು ಮೈಸೂರು ದಸರಾ ಉತ್ಸವ,ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಕಲಬುರಗಿಯಲ್ಲಿ ಪ್ರದರ್ಶನಗೊಂಡಿದೆ. ಹೀಗೆ ಪ್ರತಿಯೊಂದು ನಾಟಕ ಪ್ರದರ್ಶನದ ಹಿಂದೆ ಒಂದು ಸಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಕಲಾ ಸಂಘವು ಬದ್ಧತೆಯಿಂದ ಕೆಲಸ ಮಾಡುತ್ತ ಸಾಗಿದೆ. ಇದರಲ್ಲಿರುವ ಎಲ್ಲಾ ಶಿಕ್ಷಕರು ತಾವೇ ಹಣವನ್ನು ಹಾಕಿಕೊಂಡು ಎಲ್ಲಾ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ. ಈ ಸೇವಾ ಕಾರ್ಯಕ್ಕೆ ಈಗ ಸಾರ್ವಜನಿಕರು ಸ್ವ ಪ್ರೇರಣೆಯಿಂದ ಕೈ ಜೋಡಿಸುತ್ತಿದ್ದಾರೆ.

ಪರಿಸರ ಕಾಳಜಿ :-

ಶಿಕ್ಷಕರ ಕಲಾ ಸಂಘದ ಪ್ರಮುಖಧ್ಯೇಯ ‘ಹಸಿರುಕರಣ’ ಇದಕ್ಕಾಗಿ ಮೊಟ್ಟ ಮೊದಲು ತಮ್ಮ ತಮ್ಮ ಶಾಲೆಗಳನ್ನು ಸಂಪೂರ್ಣ ಹಸಿರುಕರಣ ಮಾಡಿಕೊಂಡರು. ನಂತರ ಪ್ರತಿವರ್ಷ ಸರಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ, ಆ ಶಾಲೆಗೆ ತೆರಳಿ ಗಿಡನೆಟ್ಟು ಅದನ್ನು ಕಾಲ-ಕಾಲಕ್ಕೆ ಮೇಲ್ವಿಚಾರಣೆ ನಡೆಸು ಹಸಿರು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಕೊಪ್ಪಳ ತಾಲೂಕಿನ ಕಿಡದಾಳ, ಹ್ಯಾಟಿ, ಗಬ್ಬೂರು, ಬೂದಗುಂಪಾ, ಹನುಮನಹಳ್ಳಿ, ಶಾಲೆಗಳು ಸಂಪೂರ್ಣ ಹಸಿರು ಶಾಲೆಗಳಾಗಿವೆ. ಕುಣಿಕೇರಾ, ಚಿಕ್ಕಸೂಳೆಕೆರೆ ತಾಂಡಾ,ಲೇಬಗೇರ ಶಾಲೆಗಳನ್ನು ದತ್ತು ಸ್ವೀಕರಿಸಿ ನೂರಾರು ಸಸಿಗಳನ್ನು ನೆಟ್ಟು ಬಂದಿದ್ದಾರೆ. ಇದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವ, ಸಂಪೂರ್ಣ ಹಸಿರಾದ ಶಾಲೆಯೊಂದನ್ನು ಆಯ್ಕೆಮಾಡಿ ಅದರ ವೀಡಿಯೋ ಚಿತ್ರೀಕರಣ ಪ್ರದರ್ಶಿಸಿ ‘ವರ್ಷದ ಅತ್ಯುತ್ತಮ ಶಾಲೆ’ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದ್ದಾರೆ. ಇದರ ಜೊತೆಗೆ ಪರಿಸರ ಬೆಳವಣಿಗೆಗೆ ಶ್ರಮಿಸಿದ ಸಾಧಕರನ್ನು ಗೌರವಿಸುತ್ತಿದ್ದಾರೆ. ಆದರ್ಶ ರೈತರನ್ನು ಗುರುತಿಸಿ ಅವರಿಂದ ‘ಕೃಷಿ’ ಯಲ್ಲಿ ತಂತ್ರಜ್ಞಾನ ಹನಿ ನೀರಾವರಿ, ಸಾವಯುವ ಗೊಬ್ಬರ ಕುರಿತು ಉಪನ್ಯಾಸ ಕೊಡಿಸಿದ್ದಾರೆ.

ಮಕ್ಕಳ ರಂಗಭೂಮಿ:

ಕಲಾ ಸಂಘದ ಸದಸ್ಯರು ಶೈಕ್ಷಣಿಕ ರಂಗದಲ್ಲಿ ಪ್ರಯೋಗಾತ್ಮಕವಾಗಿ ಮಕ್ಕಳ ರಂಗಭೂಮಿಯ ಮೂಲಕ ಕಲಿಕೆಗೆ ಒತ್ತು ನೀಡಿದ್ದಾರೆ. ಮಕ್ಕಳಿಗೆ ಆಟ, ನೃತ್ಯ, ನಾಟಕ, ಹಾಡು, ಅಂದರೆ ಖುಷಿ ಈ ಮೂಲಕ ಸಣ್ಣ-ಸಣ್ಣ ನಾಟಕ ಕಲಿಸುತ್ತಾ ಮಕ್ಕಳಲ್ಲಿ ರಂಗಾಸಕ್ತಿ ಬೆಳಿಸಿದ್ದಾರೆ. ‘ಹೋರಾಟದ ಹಾದಿಯಲ್ಲಿ’ ಬಬ್ರುವಾಹನ, ಕಿತ್ತೂರು ರಾಣಿ ಚೆನ್ನಮ್ಮ, ಕರುಳಿನ ಕೂಗು, ಸಂಗೊಳ್ಳಿರಾಯಣ್ಣ, ರಾಣಿ ಅಬ್ಬಕ್ಕದೇವಿ, ಮರಣಶಾಸನ, ಏಕಲವ್ಯ,ವಿಮೋಚನೆ ಕಿರುನಾಟಕಗಳನ್ನು ಮಕ್ಕಳಿಂದ ಪ್ರದರ್ಶಿಸಿದ್ದಾರೆ.

ಗುಬ್ಬಚ್ಚಿ ಗೂಡು ವಿತರಣೆ:

ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ ಮತ್ತು ಪಕ್ಷಿ ಸಂಕುಲದ ಉಳಿವಿಗಾಗಿ ಕೃತಕ ಗುಬ್ಬಚ್ಚಿ ಗೂಡುಗಳನ್ನು ತಯಾರಿಸಿ ಕೊಪ್ಪಳ ತಾಲೂಕಿನ 30 ಹಸಿರು ಶಾಲೆಗಳಿಗೆ ನೀಡಿದ್ದಾರೆ. ಈ ಗೂಡುಗಳಲ್ಲೀಗ ಪಕ್ಷಿಗಳು ತಮ್ಮ ಸಂತತಿಯನ್ನು ಬೆಳೆಸುತ್ತಿವೆ.

ಮಕ್ಕಳ ಸಾಹಿತ್ಯ ರಚನೆ :-

ಶಿಕ್ಷಕರ ಕಲಾ ಸಂಘದಲ್ಲಿರುವ ಕೆಲವು ಸದಸ್ಯರು ಮಕ್ಕಳಿಗಾಗಿ ಸಾಹಿತ್ಯ ರಚನೆ ಮಾಡಿದ್ದಾರೆ. ನಾಗರಾಜ ನಾಯಕ ಡೊಳ್ಳಿನ ಸಣ್ಣ ಕಥೆಗಳನ್ನು ಬರೆಯುತ್ತಿದ್ದಾರೆ. ದಯಾನಂದ ಸಾಗರ ‘ಕಚಗುಳಿ’ ಕವನ ಸಂಕಲನ ಹೊರತಂದಿದ್ದಾರೆ. ವಿಜಯಲಕ್ಷ್ಮಿ ಮಠದರವರು ‘ನನ್ನೊಳಗೆ ನಾನು’ ಎಂಬ ಪುಸ್ತಕ ಬರೆದಿದ್ದಾರೆ. ಮುಕುಂದ ಅಮೀನಗಡ್ ಅವರು ಕೂಡ ಹಲವು ಕವನ ಸಂಕಲನ ಹೊರತಂದಿದ್ದಾರೆ.ಸೋಮಲಿಂಗಪ್ಪ ಅವರು ಮಕ್ಕಳ ಮನೊವಿಕಾಸ ಕುರಿತು ಹಲವು ಲೇಖನ ಬರೆದಿದ್ದಾರೆ. ಮಂಜುನಾಥ ಪೂಜಾರರವರು ಪರಿಸರಕ್ಕೆ ಸಂಬಂಧಪಟ್ಟ ಮಕ್ಕಳಿಗೆ ಸುಲಭವಾಗಿ ಇಷ್ಟವಾಗುವ ಹಲವು ಹಾಡುಗಳನ್ನು ರಚಿಸಿದ್ದಾರೆ. ಮಹಾಂತೇಶ ಅವರು ವಿಜ್ಞಾನದ ಪ್ರಯೋಗಗಳನ್ನು ಮಾಡುವುದು, ವಸ್ತು ಪ್ರದರ್ಶನದ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಜಾಗೃತಿ ಮೂಡಿಸುತ್ತಿದ್ದಾರೆ. ಫಕೀರಪ್ಪ ಗುಳದಲ್ಲಿ,ಯೋಗನರಸಿಂಹ ಕಲಾತಂಡದ ಸಂಗೀತಗಾರರಾಗಿದ್ದಾರೆ.ಸಂಗೀತದ ಅಭಿರುಚಿಯನ್ನು ಮಕ್ಕಳಲ್ಲಿ ಬೆಳೆಸುತ್ತಿದ್ದಾರೆ. ಹೀಗೆ ಕಲಾ ಸಂಘದ ಸದಸ್ಯರು ಮಕ್ಕಳಿಗಾಗಿ ಒಂದಿಲ್ಲೊಂದು ಕ್ಷೇತ್ರದಲ್ಲಿ ತೊಡಗಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.“

“ ರಂಗಭೂಮಿಯೊಂದು ಚಲನಶೀಲ ಚಟುವಟಿಕೆ ಕ್ಷೇತ್ರ, ಈ ಮೂಲಕ ಸಮಾಜಕ್ಕೆ ಏನಾದರೊಂದು ಅಳಿಲು ಸೇವೆ ಮಾಡಬೇಕೆಂಬ ಸದುದ್ದೇಶದಿಂದ ಶಿಕ್ಷಕರ ಕಲಾ ಸಂಘವನ್ನು ಹುಟ್ಟುಹಾಕಲಾಗಿದೆ. ನಮ್ಮ ತಂಡದ ಪ್ರತಿಯೊಬ್ಬ ಸದಸ್ಯರು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. ರಂಗಕರ್ಮಿಗಳಾದ ಲಕ್ಷ್ಮಣ ಪಿರಗಾರ,ಹಾಲ್ಕುರಿಕೆ ಶಿವಶಂಕರ,ಉಪೇಂದ್ರ ಇವರು ನಮ್ಮ ತಂಡಕ್ಕೆ ತರಬೇತಿ ನೀಡಿದ್ದಾರೆ”  ಸಂಘದ ಅಧ್ಯಕ್ಷರಾದ ರಾಮಣ್ಣ ಶ್ಯಾವಿ.

“ಕೊಪ್ಪಳದ ಶಿಕ್ಷಕರ ಕಲಾ ಸಂಘ, ಶೈಕ್ಷಣಿಕ ಚಟುವಟಿಕೆಗಳನ್ನ ರಂಗಭೂಮಿಯ ಮೂಲಕ ಮಾಡುತ್ತಿದೆ.ಇವರ ಸಾಮಾಜಿಕ,ಶೈಕ್ಷಣಿಕ,ಪರಿಸರ ಕಾರ್ಯಗಳನ್ನು ಮೆಚ್ಚಿ ಶಿಕ್ಷಣ ಇಲಾಖೆ ಸಹಕಾರ ನೀಡಿದೆ ” ಎನ್ನುತ್ತಾರೆ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ.

“ಶಿಕ್ಷಕರಾಗಿದ್ದುಕೊಂಡು ವೃತ್ತಿ ಜೊತೆಗೆ ರಂಗಭೂಮಿ ಸೇವೆಮಾಡುತ್ತಿರುವ ಕೊಪ್ಪಳದ ಶಿಕ್ಷಕರ ಕಲಾ ಸಂಘ ಕರ್ನಾಟಕದಲ್ಲಿ ವಿಶಿಷ್ಟ ರಂಗತಂಡ.ಸತತವಾಗಿ ಹತ್ತು ವರ್ಷಗಳ ಕಾಲ ವಿಭಿನ್ನವಾದ ನಾಟಕಗಳನ್ನು ಪ್ರಯೋಗಮಾಡಿದೆ.ನಾನು ಕೂಡ ‘ಎಚ್ಚಮ ನಾಯಕ’ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ.ಕನ್ನಡ ರಂಗಭೂಮಿ ಕಲಾಸಂಘದ ಕೊಡುಗೆಯನ್ನು ಸ್ಮರಿಸುತ್ತದೆ.”ಎಂದು ರಂಗಕರ್ಮಿ ಮತ್ತು ಸಿನಿಮಾ ನಟರಾದ ಮಂಡ್ಯ ರಮೇಶ ನುಡಿಯುತ್ತಾರೆ.

ಸಂಘದಲ್ಲಿ ರಮೇಶ ಪೂಜಾರ, ಮಹೇಶ್ವರಿ, ಪರುಶುರಾಮ, ದೇವರಾಜ್, ಗವಿಸಿದ್ದಪ್ಪ ಕೊನಸಾಗರ,ಮುನಿರಾಜ,ಚಳ್ಳಪ್ಪ,ರವಿ,ಶಿವಾಲಿಕ,ಸುಮಾ,ಸುಮತಿ,ಯಮನೂರಪ್ಪ ಭಜಂತ್ರಿ,ಯೋಗಪ್ಪ ಪೂಜಾರ್ ಅಂಜನಾದೇವಿ,ನಿರ್ಮಲಾ ,ಕು ಅಕ್ಷತಾ,ಕು ಭೂಮಿಕಾ ಶ್ಯಾವಿ,ಮುಕುಂದ,ಸಂಗಮ್ಮ ಮಟ್ಟಿ,ಸುಜಾತಾ ಯೋಗನರಸಿಂಹ,ಸುನಿಲ,ಗುರು,ಹರೀಶ,ಮೈಲಾರಪ್ಪ ಕುರಿ,ಪಾಂಡುರಂಗ ಅಲ್ಲೂರು, ಮತ್ತಿತ್ತರರು ಸೇರಿ ಸುಮಾರು 25 ಜನರಿದ್ದಾರೆ. ಹತ್ತು ವರ್ಷಗಳ ಕಾಲ ಕಲಾ ಸಂಘವನ್ನು ಕಟ್ಟಿಕೊಂಡು
ಸದಭಿರುಚಿಯ ನಾಟಕಗಳನ್ನು ಪ್ರದರ್ಶಿಸುತ್ತಾ ಅನೇಕರನ್ನು ರಂಗಭೂಮಿಗೆ ಪರಿಚಯಿಸಿದ ಕೀರ್ತಿ ಕಲಾ ಸಂಘದ ಅಧ್ಯಕ್ಷರಾದ ರಾಮಣ್ಣ ಶ್ಯಾವಿ ಅವರಿಗೆ ಸಲ್ಲುತ್ತದೆ.ಇದೆ ಸೆ 18 ಮತ್ತು 19 ರಂದು ಕಲಾ ಸಂಘದ ದಶಮಾನೋತ್ಸವ;ಇದರ ನಿಮಿತ್ಯ ಸಾಹಿತ್ಯ ಭವನದಲ್ಲಿ ನಾಟಕೋತ್ಸವ ಹಮ್ಮಿಕೊಂಡಿದ್ದಾರೆ.ಶಿಕ್ಷಕರ ಕಲಾ ಸಂಘದಿಂದ ‘ಚೋರ ಚರಣದಾಸ’ ರಂಗದ್ವಾರ ಸಾಂಸ್ಕೃತಿಕ ಸಂಸ್ಥೆ ಧಾರವಾಡ ಇವರಿಂದ ‘ಕನಸಿನ ಖೂನಿ’ ಮತ್ತು ವಿಸ್ತಾರ ರಂಗ ಶಾಲೆಯ ಮಕ್ಕಳಿಂದ ‘ಕಡ್ಲಿಮಟ್ಟಿ ಸ್ಟೇಷನ್’ ನಾಟಕಗಳು ಪ್ರದರ್ಶನಗೊಳ್ಳಲಿವೆ.

ರವಿವಾರ, ಸರ್ಕಾರಿ ರಜೆ ಬಂತೆಂದರೆ ಸಾಕು ಎಲ್ಲರು ಒಂದಡೆ ಸೇರಿ ಶಿಕ್ಷಣ, ಸಾಹಿತ್ಯ, ಸಂಗೀತ, ನಾಟಕ, ಪರಿಸರದ ಅಭಿವೃದ್ಧಿಯ ಕುರಿತು ಚಿಂತನ-ಮಂಥನ ನಡೆಸುತ್ತಾರೆ. ಶಿಕ್ಷಕರೆಂದರೆ ಬರೀ ಬೋಧನೆಗೆ ಮಾತ್ರ ಸೀಮಿತವಲ್ಲ ಸಾಂಸ್ಕೃತಿಕ ರಾಯಭಾರಿಗಳಾಗಬಹುದು ಎಂಬುದನ್ನು ಕಲಾ ಸಂಘದ ಸದಸ್ಯರು ತಮ್ಮ ಕಾರ್ಯದ ಮೂಲಕ ನಿರೂಪಿಸಿದ್ದಾರೆ.ಇನ್ನೂ ಉತ್ತಮೋತ್ತಮ ಕಾರ್ಯಕ್ರಮಗಳು ಸಂಘದಿಂದ ಮೂಡಿಬರಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *

error: Content is protected !!