ಕಲ್ಲು ನಾಗರನಿಗೆ ಹಾಲನೆರೆಯೆಂಬುವ ಪ್ರಗತಿಪರರಿಗೆ

I repeat…

#ವೈಚಾರಿಕಸಮರಕ್ಕೆ_ಓಪನ್_ಚಾಲೆಂಜ್

ಹನ್ನೆರಡನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ ಅಣ್ಣ ಬಸವಣ್ಣನವರ “ಕಲ್ಲನಾಗರ ಕಂಡರೆ ಹಾಲನೆರೆಯೆಂಬುವರು, ದಿಟದ ನಾಗರ ಕಂಡರೆ ಕೊಲ್ಲುಕೊಲ್ಲೆಂಬರಯ್ಯಾ…” ಎನ್ನುವ ವಚನವನ್ನು ಹಲವರು ಆಗಾಗ ಉಲ್ಲೇಖಿಸುತ್ತಿರುತ್ತಾರೆ.ಅದರಲ್ಲೂ ನಾಗರ ಪಂಚಮಿಯ ಸಂದರ್ಭದಲ್ಲಿ ಈ ವಚನ ಪ್ರಗತಿಪರರೆಂದು ಹೇಳಿಕೊಳ್ಳುವ ಬಹುತೇಕರ ತಾತ್ಕಾಲಿಕ ರಾಷ್ಟ್ರಗೀತೆಯಾಗಿ ಬದಲಾಗಿಬಿಟ್ಟಿರುತ್ತದೆ.

ಆದರೆ ಕಲ್ಲು ನಾಗರನಿಗೆ ಹಾಲನೆರೆಯುವ ಉದ್ದೇಶವೇ ನಾಗರ ವಿಷಕಾರಿಯಾದರೂ ನಮ್ಮ ಶತ್ರುವಲ್ಲ,ಮಿತ್ರ ಎನ್ನುವುದನ್ನು ತಿಳಿಸುವುದಕ್ಕೋಸ್ಕರ.ಅಲ್ಲದೆ ಯಾವ ನಿಜವಾದ ಹಿಂದೂ ಕೂಡಾ ನಾಗರ ಹಾವನ್ನು ಕೊಲ್ಲುವುದಿಲ್ಲ.ಅಷ್ಟೇ ಅಲ್ಲದೆ ಆಕಸ್ಮಿಕವಾಗಿ ತನ್ನಿಂದ ಒಂದು ನಾಗರ ಹಾವಿನ ಹತ್ಯೆಯಾದರೂ ಅದೊಂದು ಮಹಾ ಪಾಪ ಕಾರ್ಯ ಎಂದೇ ಪ್ರತಿಯೊಬ್ಬ ಆಸ್ತಿಕ ಹಿಂದೂ ಕೂಡಾ ತಿಳಿದಿದ್ದಾನೆ.ಒಂದು ವೇಳೆ ತನಗೇ ತಿಳಿಯದೇ ಕಟ್ಟಡ ನಿರ್ಮಾಣದ ಸಂದರ್ಭದಲ್ಲೋ,ಕೃಷಿ ಚಟುವಟಿಕೆಯ ಮಧ್ಯದಲ್ಲೋ ನಾಗರ ಹಾವೊಂದು ಹತ್ಯೆಯಾಗಿಬಿಟ್ಟರೆ ಆ ಹತ್ಯೆಯ ಪ್ರಾಯಶ್ಚಿತ್ತಕ್ಕಾಗಿ ಹಲವಾರು ದೋಷ ಪರಿಹಾರ ಕಾರ್ಯಗಳನ್ನು ಹಿಂದೂ ಆಸ್ತಿಕ ಮಾಡುತ್ತಲೇ ಬಂದಿದ್ದಾನೆ.ಇದಕ್ಕೆ ಸಂವಿಧಾನ ಬದ್ಧವಾದ ರಾಜ್ಯ ಸರ್ಕಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗ ದೋಷ ಪರಿಹಾರ ಕಾರ್ಯಗಳನ್ನೇ ಮಾಡಿಸುತ್ತಾ ನೂರಾರು ಕೋಟಿ ಆದಾಯ ಗಳಿಸುತ್ತಿರುವುದೇ ಸಾಕ್ಷಿ.ಇದನ್ನೇ ಉಲ್ಲೇಖಿಸಿ ಹೇಳುವುದಾದರೆ ನಾಗನ ಪೂಜೆ ಮಾಡುವುದು,ನಾಗ ದೋಷ ಪರಿಹರಿಸಿಕೊಳ್ಳುವುದು ಡಾ.ಅಂಬೇಡ್ಕರ್ ಅವರ ಸಂವಿಧಾನ ಬದ್ಧ ಕಾರ್ಯವೂ ಹೌದು.

ಹಾವುಗಳು ರೈತನ ಮಿತ್ರ. ಜಮೀನಿನಲ್ಲಿ ಹರಿದಾಡುವ ಹಾವುಗಳಿಂದ ನಮಗೆ ಅಪಾಯ ಎದುರಾಗಬಹುದು ಎಂದು ತಿಳಿದು ಅವುಗಳನ್ನು ಹೊಡೆದು ಸಾಯಿಸಿಬಿಡಬಾರದು,ಆ ವಿಷ ನಾಗರಗಳನ್ನೂ ಪೂಜಿಸಿ ಗೌರವಿಸಿ ಹಾವುಗಳು ನಮ್ಮ ಶತ್ರುವಲ್ಲ,ಮಿತ್ರ ಎಂದು ತಮ್ಮ ಮುಂದಿನ ಪೀಳಿಗೆಗೂ ತಿಳಿಸಲೂ ಒಂದು ದಿನ ಮೀಸಲಿಡಬೇಕು’ ಎನ್ನುವುದೂ ನಾಗರ ಪಂಚಮಿಯ ಹಿಂದಿರುವ ವೈಚಾರಿಕ ಕಾರಣಗಳಲ್ಲಿ ಒಂದು.ಅಂದರೆ ದಿಟ ನಾಗರ ಕಂಡರೆ ಅದೊಂದು ವಿಷಜಂತು ಎಂದುಕೊಂಡು ಕೊಲ್ಲು ಕೊಲ್ಲೆನ್ನಬಾರದು ಎಂದು ತಿಳಿಯಪಡಿಸುವುದೇ ಕಲ್ಲ ನಾಗರನಿಗೆ ಹಾಲೆರೆದು ಪೂಜಿಸುವುದರ ಮೂಲ ಉದ್ದೇಶ.

ಸಾಮಾನ್ಯವಾಗಿ ಹಾವುಗಳು ಹುತ್ತದಲ್ಲಿ ವಾಸ ಮಾಡುವುದಿಲ್ಲ,ಅವು ಅಲ್ಲಿಗೆ ಗೆದ್ದಲುಗಳನ್ನು ತಿನ್ನಲು ಬರುತ್ತವೆ ಅಷ್ಟೇ.. ಈ ವಿಚಾರ ಗೊತ್ತಿಲ್ಲದೆಯೇ ಹಿಂದೂ ಹೆಂಗಸರು ಹುತ್ತಕ್ಕೆ ಪೂಜೆ ಮಾಡುತ್ತಾ ಮೌಢ್ಯ ಆಚರಣೆ ಮಾಡುತ್ತಾರೆ ಎಂದು ಕೆಲವು ವಿಚಾರವಾದಿಗಳು ಹೇಳುವುದಿದೆ. ಅರೆ ಸ್ವಾಮೀ..!! ನಾಲ್ಕಾರು ಸಾವಿರ ವರ್ಷಗಳ ಹಿಂದೆಯೇ ಇಡೀ ಬ್ರಹ್ಮಾಂಡದ ಚಲನೆಯನ್ನೇ ಗ್ರಹಿಸಿದ್ದ ಹಿಂದೂಗಳಿಗೆ ಯಕಃಶ್ಚಿತ್ ಒಂದು ಹಾವಿನ ಚಲನೆಯನ್ನು ಅಭ್ಯಸಿಸುವುದು ಕಷ್ಟವಾಗಿತ್ತೇ? ಹಾವು ಎಲ್ಲಿ ವಾಸ ಮಾಡುತ್ತದೆ,ಎಲ್ಲಿ ಏನನ್ನು ತಿನ್ನಲು ಹೋಗುತ್ತದೆ ಎನ್ನುವುದು ತಿಳಿದುಕೊಳ್ಳುವುದು ಕಷ್ಟವಾಗಿತ್ತೇ? ಹಾಗೇನಿಲ್ಲ. ಪ್ರತಿಯೊಬ್ಬ ಆಸ್ತಿಕ ಹಿಂದೂವಿಗೂ ಅವೆಲ್ಲವೂ ತಿಳಿದಿದೆ.ಆ ಹಾವು ಆಹಾರ ಸರಪಳಿಯಲ್ಲಿ ಎಷ್ಟು ಮಹತ್ವದ್ದು ಎನ್ನುವುದು ಕೂಡಾ ತಿಳಿದಿದೆ.ಆ ಹಾವನ್ನು ಉಳಿಸಿಕೊಳ್ಳಲೇಬೇಕಾದ ಅವಶ್ಯಕತೆ ಎಷ್ಟಿದೆ ಎನ್ನುವುದೂ ತಿಳಿದಿದೆ.ಅದಕ್ಕಾಗಿಯೇ ನಾಗರನಿಗೆ ಆಸ್ತಿಕ ಹಿಂದೂಗಳು ದೇವರ ಸ್ಥಾನವನ್ನು ಕಲ್ಪಿಸಿರುವುದು.

ಒಂದು ಪೂರ್ವ ನಿರ್ಧಾರಿತ ದಿನದಂದು ವಿಚಾರವಾದಿಗಳ ಡಾರ್ಲಿಂಗ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಭಿನಂದಿಸಲು ಬಾದಾಮಿಯ ಅವರ ಕಚೇರಿಗೆ ಹೋಗಿ,ಅವರನ್ನು ಭೇಟಿಯಾಗಿ, ನಿಮ್ಮದೇನಾದರೂ ಕೋರಿಕೆಯಿದ್ದಲ್ಲಿ ಸಲ್ಲಿಸಿ, ಅವರಿಗೆ ಹೂವಿನ ಹಾರ ಹಾಕಿ ಗೌರವಿಸಿ, ಫೋಟೋ ತೆಗೆಸಿಕೊಂಡು ಬಂದರೆ “ವಾಸ್ತವವಾಗಿ ಸಿದ್ದರಾಮಯ್ಯನವರ ಮನೆ ಇರುವುದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ, ಬಾದಾಮಿಯ ಅವರ ಕಚೇರಿಗೆ ಅವರು ಶಾಸಕರಾಗಿ ತಮ್ಮ ಕೆಲಸ ನಿರ್ವಹಿಸುವುದಕ್ಕೆ ಮಾತ್ರ ಬರುತ್ತಾರೆ ಅಷ್ಟೇ.. ಹಾಗಾಗಿ ಬಾದಾಮಿಗೆ ಹೋಗಿ ಸಿದ್ದರಾಮಯ್ಯನವರ ಎದುರು ನಿಮ್ಮ ಕೋರಿಕೆ ಸಲ್ಲಿಸಿ ಗೌರವಿಸಿ ಬರುವುದು ಮೌಢ್ಯ” ಎಂದೂ ಯಾವುದಾದರೂ ಪ್ರಗತಿಪರರು ನಿಮಗೆ ಹೇಳುತ್ತಾರೆಯೇ? ಅವರೆಲ್ಲಿ ಕೆಲಸ ಮಾಡುತ್ತಾರೋ ಅದನ್ನೇ ಅವರ ವಿಳಾಸ ಎಂದು ಭಾವಿಸಿ ಅವರನ್ನು ಗೌರವಿಸಲು ಅಲ್ಲಿಗೆ ಹೋಗಬಹುದಾದರೆ ಅದೇ ರೀತಿ ನಾಗಣ್ಣನನ್ನು ಗೌರವಿಸಲು ಅವನು ಹೋಗುವ ಗೆದ್ದಲ ಗೂಡಿನ ಬಳಿಗೆ ಆಸ್ತಿಕರು ಹೋಗುವುದು ಮೌಢ್ಯ ಹೇಗಾಗುತ್ತದೆ?

ಹಾಗೆಂದು ಸಿದ್ದರಾಮಯ್ಯನವರು ನೀವು ಬಾದಾಮಿಗೆ ಹೋದಾಗಲೆಲ್ಲಾ ಸಿಕ್ಕಿಯೇ ಸಿಕ್ಕುತ್ತಾರೆನ್ನುವ ಭರವಸೆಯೇನೂ ಇಲ್ಲ.ಅದೇ ರೀತಿ ಹುತ್ತದ ಬಳಿ ಪೂಜಿಸಿ ಗೌರವಿಸಲು ಹೋದಾಗ ನಾಗರಾಜ ಕೂಡಾ..

ಇನ್ನು ಕಲ್ಲು ನಾಗರಗಳು ಹಾಲು ಕುಡಿಯುವುದಿಲ್ಲ,ಆದರೂ ಹಾಲೆರೆಯುತ್ತಾರೆ ಎಂದು ವಿಚಾರವಾದಿಗಳು ಹೇಳುವುದುಂಟು.ಆದರೆ ನಮ್ಮ ಪೂಜಾ ಪದ್ಧತಿಯಲ್ಲಿ ಗೋವಿನ ಹಾಲಿಗೆ ಅತ್ಯಂತ ಪ್ರಮುಖ ಸ್ಥಾನವಿದೆ.ಕಲ್ಲಿನ ವಿಗ್ರಹಗಳಿಗೂ ಹಾಲಿನ ಅಭಿಷೇಕ ಮಾಡುತ್ತೇವೆ.ಆ ಕಲ್ಲಿನ ವಿಗ್ರಹಗಳು ಹಾಲು ಕುಡಿಯುವುದಿಲ್ಲ ಎನ್ನುವುದು ಪ್ರತಿಯೊಬ್ಬ ಹಿಂದೂವಿಗೂ ಚೆನ್ನಾಗಿಯೇ ಗೊತ್ತಿರುವಾಗ ಕಲ್ಲಿನ ಹಾವು ಹಾಲು ಕುಡಿಯುತ್ತದೆಯೋ ಇಲ್ಲವೋ ಎನ್ನುವುದು ನಮಗೆ ಗೊತ್ತಿಲ್ಲ ಎಂದು ಅವರಿಗೆ ಹೇಳಿದ್ದಾದರೂ ಯಾರು? ಸಾತ್ವಿಕ ಸ್ವಭಾವದ ಗೋವಿನ ಹಾಲನ್ನು ವಿಷ ಹೊಂದಿರುವ ನಾಗರನ ವಿಗ್ರಹಕ್ಕೆ ಅಭಿಷೇಕ ಮಾಡುವ ಮೂಲಕ ಪ್ರಕೃತಿಯಲ್ಲಿ ಎಲ್ಲ ಜೀವಿಗಳ ಜೊತೆಗೆ ಸಮನ್ವಯತೆ ಸಾಧಿಸುವ ಹಾಗೂ ಆ ಮೂಲಕ ಪ್ರಕೃತಿಯಲ್ಲಿ ಎಲ್ಲ ಜೀವಿಗಳಿಗೂ ಅವುಗಳದ್ದೇ ಆದ ಸ್ಥಾನವಿದೆ ಮತ್ತು ಅವೆಲ್ಲವೂ ಗೌರವಾರ್ಹವೇ ಎನ್ನುವುದನ್ನು ಮುಂದಿನ ಪೀಳಿಗೆಗೂ ಮನವರಿಕೆ ಮಾಡಿಕೊಡುವ ವೈಚಾರಿಕ ಉದ್ದೇಶ ಕೂಡಾ ಕಲ್ಲು ನಾಗರಕ್ಕೆ ಹಾಲೆರೆಯುವುದರ ಹಿಂದಿದೆ ಎಂದೆನ್ನಿಸುವುದಿಲ್ಲವೇ?

ದಿಟ ನಾಗರ ಕಂಡರೆ ಏನು ಮಾಡುತ್ತೀರಿ ಎಂದು ನಾಗರ ಕಲ್ಲನ್ನು ಪೂಜೆ ಮಾಡುವ ಯಾವ ಆಸ್ತಿಕರನ್ನಾದರೂ ನೀವು ಕೇಳಿ ನೋಡಿ. ಕೈ ಮುಗಿಯುತ್ತೇವೆ,ಅದರಿಂದ ಅಪಾಯವಾಗದಂತೆ ತಪ್ಪಿಸಿಕೊಳ್ಳುತ್ತೇವೆ,ಒಂದು ವೇಳೆ ಮನೆಯೊಳಗೇ ಬಂದರೆ ಅದನ್ನು ಉಪಾಯವಾಗಿ ಹೊರಗೆ ಕಳಿಸುತ್ತೇವೆ ಎನ್ನುತ್ತಾರೆಯೇ ಹೊರತೂ ಯಾರೊಬ್ಬರೂ ಅದನ್ನು ಹೊಡೆದು ಸಾಯಿಸುತ್ತೇವೆ ಎಂದು ಹೇಳಲು ಸಾಧ್ಯವೇ ಇಲ್ಲ.ಹಾಗೊಂದು ವೇಳೆ ದಿಟ ನಾಗರ ಕಂಡರೆ ಕೊಂದು ಹಾಕುತ್ತೇವೆ ಎಂದು ಹೇಳಿದರೆಂದರೆ ಅವರು ಹಾವನ್ನು ಶತ್ರು ಎಂದು ತಿಳಿದಿರುತ್ತಾರೆ ಮತ್ತು ಅವರೆಂದಿಗೂ ಆ ಹಾವನ್ನೇ ದೇವರ ರೂಪದಲ್ಲಿ ಕಲ್ಪಿಸಿಕೊಂಡು ಪೂಜಿಸುವ ಆಸ್ತಿಕರಾಗಿರಲು ಸಾಧ್ಯವೇ ಇಲ್ಲ.

ಆದ್ದರಿಂದ ಯಾವ ಸಮುದಾಯ ನಾಗರನನ್ನು ದೇವರಲ್ಲ ಎಂದು ವಾದಿಸುತ್ತದೆಯೋ ಆ ಸಮುದಾಯ ಮಾತ್ರ ದಿಟದ ನಾಗರ ಕಂಡರೆ ಕೊಲ್ಲಲು ಮುಂದಾಗುತ್ತದೆ. ಯಾರು ನಾಗರ ಹಾವನ್ನು ಕೊಲ್ಲುವುದು ಪಾಪವೇನೂ ಅಲ್ಲ ಎಂದು ಭಾವಿಸುತ್ತಾರೋ ಅವರು ಮಾತ್ರ ದಿಟದ ನಾಗರ ಕಂಡರೆ ಕೊಲ್ಲಲು ಮುಂದಾಗುತ್ತಾರೆ. ಯಾರು ನಾಗರ ಹಾವನ್ನು ಕೇವಲ ಒಂದು ವಿಷಜಂತುವೆಂದು ತಿಳಿದಿರುತ್ತಾರೋ ಅವರು ಮಾತ್ರ ದಿಟದ ನಾಗರ ಕಂಡರೆ ಕೊಲ್ಲಲು ಮುಂದಾಗುತ್ತಾರೆ. ಆಧುನೀಕತೆಯ ತುತ್ತ ತುದಿಯಲ್ಲಿರುವ ಈ ಕಾಲದಲ್ಲೂ ನಾಗರ ಹಾವನ್ನು ದೇವರೆಂದೇ ನಂಬಿ,ಭಯ ಭಕ್ತಿಯಿಂದ ಪೂಜಿಸುವ ಹಿಂದುಗಳೇ ಹೆಚ್ಚಿದ್ದಾರೆ ಎಂದ ಮೇಲೆ ಹನ್ನೆರಡನೆಯ ಶತಮಾನದಲ್ಲಿ ಬಹುಶಃ ಹಿಂದೂ ಆಸ್ತಿಕರು ಹಾವುಗಳು ಸರಿದಾಡುವ ಜಾಗಗಳಲ್ಲಿ ತಾವು ಓಡಾಡುವುದು ಕೂಡಾ ಪಾಪವೆಂದು ಪರಿಗಣಿಸುತ್ತಿದ್ದರು.ಈಗಲೂ ಕೂಡಾ ನಾಗನ ನಡೆಯ ಜಾಗದಲ್ಲಿ ಗಿಡಮರಗಳನ್ನು ಕಡಿಯದ,ನಾಗನಿಗಾಗಿಯೇ ಯಾವುದೇ ಹಸ್ತಕ್ಷೇಪವಿಲ್ಲದ ನಾಗಬನಗಳನ್ನು ಉಳಿಸುವ ಆಸ್ತಿಕ ಹಿಂದುಗಳಿರುವಾಗ ಇನ್ನು ಹನ್ನೆರಡನೆಯ ಶತಮಾನದಲ್ಲಿ ಅವರು ನಾಗನನ್ನು ಕಂಡರೆ ಕೊಲ್ಲುವುದಿರಲಿ, ಹಾಗೆ ಯೋಚಿಸುವುದನ್ನು ಕೂಡಾ ಪಾಪವೆಂದು ಪರಿಗಣಿಸಿದ್ದರು ಎನ್ನಲಡ್ಡಿಯಿಲ್ಲ.

ಆದ್ದರಿಂದ ನನ್ನ ವೈಯುಕ್ತಿಕ ಅನಿಸಿಕೆಯ ಪ್ರಕಾರ ಬಸವಣ್ಣನವರು “ಕಲ್ಲನಾಗರ ಕಂಡರೆ ಹಾಲನೆರೆಯೆಂಬುವರು” ಎಂಬುದನ್ನು ನಾಗರ ವಿಷಕಾರಿಯಾದರೂ ನಮ್ಮ ಶತ್ರುವಲ್ಲ,ಮಿತ್ರ ಎನ್ನುವುದನ್ನು ಅರ್ಥ ಮಾಡಿಕೊಂಡು,ಸಾಂಕೇತಿಕವಾಗಿ ಕಲ್ಲಿನ ನಾಗರನಿಗೆ ಹಾಲನ್ನೆರೆದು ಪೂಜಿಸುತ್ತಿದ್ದ ಹಿಂದೂ ಆಸ್ತಿಕರನ್ನು ಉಲ್ಲೇಖಿಸಿ ಹೇಳಿದ್ದು ಮತ್ತು “ದಿಟದ ನಾಗರ ಕಂಡರೆ ಕೊಲ್ಲುಕೊಲ್ಲೆಂಬರಯ್ಯಾ” ಎಂದಿದ್ದು ನಾಗರ ಹಾವೊಂದು ಕೇವಲ ವಿಷಜಂತು ಎಂದಷ್ಟೇ ನಂಬುವ ಅನ್ಯ ಸಮುದಾಯದ ಅಥವಾ ಅಂದಿನ ಕಾಲದ ನಾಸ್ತಿಕ ವಿಚಾರವಾದಿಗಳನ್ನು ಉಲ್ಲೇಖಿಸಿ ಹೇಳಿದ್ದು.
ಅಂದರೆ ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂದಿದ್ದು ತಮ್ಮನ್ನು ತಾವು ವಿಚಾರವಾದಿಗಳೆಂದು ಹೇಳಿಕೊಂಡು ಹಾವನ್ನು ದೇವರೆಂದು ಒಪ್ಪುವುದಿಲ್ಲ ಎನ್ನುತ್ತಿರುವ ಇಂದಿನ ನಾಸ್ತಿಕವರ್ಗದ ಪೂರ್ವಜರಿಗೇ ಹೊರತೂ ಕಲ್ಲಿನ ನಾಗರನಿಗೆ ಹಾಲೆರೆಯುವ ಹಿಂದೂ ಆಸ್ತಿಕ ವರ್ಗದ ಪೂರ್ವಜರಿಗಲ್ಲ.ಕಲ್ಲನಾಗರ ಕಂಡರೆ ಹಾಲನೆರೆಯುವ ಆಸ್ತಿಕರ ವೈಚಾರಿಕತೆಯನ್ನು ಗೌರವಿಸಲೆಂದೇ ಮೊದಲ ಸಾಲು ಮತ್ತು ಹಾವು ಕೇವಲ ಒಂದು ವಿಷಜಂತು ಎಂದು ನಂಬುವ ನಾಸ್ತಿಕರ ತಪ್ಪನ್ನು ತಿದ್ದಲೆಂದೇ ಎರಡನೆಯ ಸಾಲು ಹುಟ್ಟಿಕೊಂಡಿತೆನ್ನುವುದು ನನ್ನ ಅನಿಸಿಕೆ.

ನಿಮಗೇನನ್ನಿಸುತ್ತದೆ?

ಪ್ರವೀಣ್ ಕುಮಾರ್ ಮಾವಿನ ಕಾಡು:

Leave a Reply

Your email address will not be published.

ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ
error: Content is protected !!