ಭೂ ಮಾಲೀಕರೊಂದಿಗೆ ಶಾಮೀಲಾದರಾ ತಹಸೀಲ್ದಾರ್…!?

ಉಚ್ಚ ನ್ಯಾಯಾಲಯಕ್ಕೂ ಕ್ಯಾರೇ ಎನ್ನದ ಗಂಗಾವತಿ ತಹಸಿಲ್ದಾರ್ ಯು.ನಾಗರಾಜ್

ಗಂಗಾವತಿ : ಕರ್ನಾಟಕ ಭೂ ಸುಧಾರಣೆ ಕಾಯ್ದೆ ಕಲಂ 63ರ ಪ್ರಕಾರ ಒಂದು ಕುಟುಂಬ (ಎ ವರ್ಗ) 10 ಎಕರೆ ಮಾತ್ರ ಜಮೀನು ಹೊಂದಿರಬೇಕು. ಇಂತಹ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯ ಮೂರು ತಿಂಗಳೊಳಗೆ ಪ್ರಕರಣ ಇತ್ಯರ್ಥಪಡಿಸುವಂತೆ ಆದೇಶ ನೀಡಿದರೂ ಕೂಡ ತಹಸೀಲ್ದಾರ್ ಯು.ನಾಗರಾಜ್ ವಿನಾಃಕಾರಣ ವಿಳಂಬನೀತಿ ಅನುಸರಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ.

ಈ ಮೂಲಕ ಉಚ್ಚ ನ್ಯಾಯಾಲಯದ ಆದೇಶ ಧಿಕ್ಕರಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಜನಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಗಣೇಶ ಮಚ್ಚಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಗಣೇಶ ಮಚ್ಚಿಯವರು, ಕಳೆದ 5 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಆದರೆ, ತಹಸೀಲ್ದಾರ್ ಅವರ ವಿಳಂಬ ನೀತಿಯಿಂದಾಗಿ ಪ್ರಕರಣ ನೆನೆಗುದಿಗೆ ಬಿದ್ದಿದೆ. 2018ರಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಪ್ರಕಾರ ಹೆಚ್ಚುವರಿ ಆಸ್ತಿ ಹೊಂದಿದ ಗಂಗಾವತಿ ತಾಲೂಕಿನ ಹೊಸ್ಕೇರಾ ಗ್ರಾಮದ ಜಿ.ಬಸವರಾಜ ಮಜ್ಜಿಗೆ ತಂದೆ ಹಂಪಣ್ಣ, ಹಂಪಣ್ಣ ತಂದೆ ಬಸಣ್ಣ, ಯುವರಾಜ ತಂದೆ ಹಂಪಣ್ಣ ಹಾಗೂ ಬಸಾಪಟ್ಟಣ ಗ್ರಾಮದ ಗೊಟ್ಟಪಾಟಿ ರವಿಕುಮಾರ ತಂದೆ ವೆಂಕಟಕೃಷ್ಣಯ್ಯ, ಗೊಟ್ಟಪಾಟಿ ಸುಬ್ಬರಾವ್ ತಂದೆ ವೆಂಕಟಕೃಷ್ಣಯ್ಯ, ವೆಂಕಟರತ್ನ ತಂದೆ ವೆಂಕಟಕೃಷ್ಣಯ್ಯ ಇವರುಗಳ ವಿರುದ್ಧ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಕಲಂ 63ರ ಪ್ರಕಾರ ಗರಿಷ್ಠ ಮಿತಿ 10 ಎಕರೆಗೂ ಅಧಿಕ ನೀರಾವರಿ ಭೂಮಿ ಹೊಂದಿದ ಕುರಿತಂತೆ ತಹಸೀಲ್ದಾರ್ ಅವರಿಗೆ ದೂರು ಸಲ್ಲಿಸಲಾಗಿತ್ತು. 5 ವರ್ಷ ಕಳೆದರೂ ಪ್ರಕರಣ ಇತ್ಯರ್ಥವಾಗದ ಹಿನ್ನಲೆಯಲ್ಲಿ ನೊಂದ ಗಣೇಶ ಮಚ್ಚಿ, ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಉಚ್ಚ ನ್ಯಾಯಾಲಯ ಕೇವಲ 3 ತಿಂಗಳೊಳಗೆ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ತಹಸೀಲ್ದಾರ್ ಅವರಿಗೆ ಆದೇಶ ನೀಡಿತ್ತು.
ಪ್ರಸ್ತುತ ಗಂಗಾವತಿ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಯು.ನಾಗರಾಜ್ ಅವರಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆಗಳನ್ನು ಸಲ್ಲಿಸಲಾಗಿದೆ ಮತ್ತು ಉಚ್ಚ ನ್ಯಾಯಾಲಯದ ಆದೇಶದ ಬಗ್ಗೆ ಕೂಡ ಅವರ ಗಮನಕ್ಕಿದೆ. ಆದರೆ, ತಹಸೀಲ್ದಾರ್ ಯು.ನಾಗರಾಜ್ ಅವರು ಭೂ ಮಾಲೀಕರ ಪರ ಕಾರ್ಯನಿರ್ವಹಿಸುತ್ತಿದ್ದು, ಭೂ ಪರಭಾರೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ನ್ಯಾಯಾಲಯದ ಆದೇಶದಂತೆ ಭೂ ಮಾಲೀಕರಿಗೆ ಮತ್ತೊಮ್ಮೆ 15 ದಿನಗಳ ಕಾಲಾವಕಾಶ ನೀಡಿ ನೋಟೀಸ್ ನೀಡುವ ನಿಟ್ಟಿನಲ್ಲಿ ತಹಸೀಲ್ದಾರ್ ಹಿಂದೇಟು ಹಾಕುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಭೂ ಮಾಲೀಕರೊಂದಿಗೆ ಶಾಮೀಲಾಗಿರುವ ತಹಸೀಲ್ದಾರ್ ಆಮೀಷಕ್ಕೆ ಒಳಗಾಗಿರುವ ಶಂಕೆಯಿದೆ. ಇದೇ ರೀತಿ ವಿಳಂಬ ನೀತಿ ಅನುಸರಿಸಿದರೆ ತಹಸೀಲ್ದಾರ್ ಅವರ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ, ತಹಸೀಲ್ದಾರ್ ಕಚೇರಿ ಮುಂದೆ ಭಜನೆ ಮಾಡುವ ಮೂಲಕ ಅಹೋರಾತ್ರಿ ಧರಣಿ ಸತ್ಯಾಗ್ರಹ ಹೋರಾಟ ಮುಂದುವರೆಸಲಾಗುವುದು ಎಂದು ಜನಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಗಣೇಶ ಮಚ್ಚಿ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!